ಬೆಂಗಳೂರಿನ ಉದ್ಯಮಿಯೊಬ್ಬರು ವಾಟ್ಸಾಪ್‌ನಲ್ಲಿ ಬಂದ ನಕಲಿ ಮದುವೆ ಆಮಂತ್ರಣದ APK ಫೈಲ್ ಡೌನ್‌ಲೋಡ್ ಮಾಡಿ, ಕೇವಲ 9 ನಿಮಿಷಗಳಲ್ಲಿ 5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆಯು ಅಪರಿಚಿತ ಲಿಂಕ್‌ಗಳು ಮತ್ತು APK ಫೈಲ್‌ಗಳಿಂದಾಗುವ ಸೈಬರ್ ವಂಚನೆಯ ಗಂಭೀರ ಅಪಾಯವನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರು (ಮೇ 11): ನೀವು ವಾಟ್ಸಾಪ್‌ನಲ್ಲಿ ಅಪರಿಚಿತರಿಂದ ಬರುವ ಮದುವೆ ಆಮಂತ್ರಣ ಪತ್ರಗಳನ್ನು ಕುತೂಹಲದಿಂದ ಅಥವಾ ಆತುರದಿಂದ ಡೌನ್‌ಲೋಡ್ ಮಾಡುತ್ತೀರಾ? ಹಾಗಿದ್ದರೆ ಎಚ್ಚರ! ಬೆಂಗಳೂರಿನ ಉದ್ಯಮಿಯೊಬ್ಬರು ಕೇವಲ ಒಂದು 'ವೆಡ್ಡಿಂಗ್ ಕಾರ್ಡ್' ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 5 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ಬೆಂಗಳೂರಿನ 42 ವರ್ಷದ ಉದ್ಯಮಿ ನೂರ್ ನಹೀದ್ ಖಾನ್ ಅವರಿಗೆ ವಾಟ್ಸಾಪ್‌ನಲ್ಲಿ ಒಂದು ಸಂದೇಶ ಬಂದಿತ್ತು. ಆ ಸಂದೇಶದಲ್ಲಿ, 'ನಮ್ಮ ಮದುವೆಗೆ ನಿಮ್ಮನ್ನು ಆಹ್ವಾನಿಸಲು ನಮಗೆ ಸಂತೋಷವಾಗಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಲಗತ್ತಿಸಲಾದ ಆಮಂತ್ರಣ ಪತ್ರವನ್ನು ಡೌನ್‌ಲೋಡ್ ಮಾಡಿ. ನಿಮ್ಮ ಉಪಸ್ಥಿತಿ ನಮಗೆ ಮುಖ್ಯ' ಎಂಬ ಬರಹಗಳೊಂದಿಗೆ ಹೂವಿನ ಎಮೋಜಿಗಳಿದ್ದವು. ಇದನ್ನು ನಿಜವಾದ ಆಮಂತ್ರಣ ಎಂದು ನಂಬಿದ ಖಾನ್, ಅದರ ಕೆಳಗಿದ್ದ APK ಫೈಲ್ (APK File) ಅನ್ನು ಡೌನ್‌ಲೋಡ್ ಮಾಡಿದ್ದಾರೆ.

ಕ್ಷಣಾರ್ಧದಲ್ಲಿ ಖಾಲಿಯಾಯಿತು ಬ್ಯಾಂಕ್ ಖಾತೆ:

ಖಾನ್ ಅವರು ಆ ಫೈಲ್ ಡೌನ್‌ಲೋಡ್ ಮಾಡಿದ ಕೂಡಲೇ ವಂಚಕರಿಗೆ ಖಾನ್ ಅವರ ಮೊಬೈಲ್‌ನ ಸಂಪೂರ್ಣ ನಿಯಂತ್ರಣ ಸಿಕ್ಕಿದೆ. ಏಪ್ರಿಲ್ 16 ರಂದು ಬೆಳಗಿನ ಜಾವ 4:45 ರಿಂದ 4:54 ರ ನಡುವೆ, ಅಂದರೆ ಕೇವಲ 9 ನಿಮಿಷಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ವಿವಿಧ ಯುಪಿಐ (UPI) ವಹಿವಾಟುಗಳ ಮೂಲಕ ಒಟ್ಟು 5,00,440 ರೂಪಾಯಿ ಹಣವನ್ನು ಲೂಟಿ ಮಾಡಲಾಗಿದೆ.

APK ಫೈಲ್ ಮೂಲಕ ವಂಚನೆ ಹೇಗೆ?

ಪೊಲೀಸರ ತನಿಖೆಯ ಪ್ರಕಾರ, ವಂಚಕರು ಕಳುಹಿಸಿದ್ದು ಮದುವೆ ಕಾರ್ಡ್ ಅಲ್ಲ, ಬದಲಿಗೆ ಅದೊಂದು ಮಾಲ್ವೇರ್ ತುಂಬಿದ 'ಎಪಿಕೆ' (APK) ಫೈಲ್ ಆಗಿತ್ತು. ಇದನ್ನು ಇನ್‌ಸ್ಟಾಲ್ ಮಾಡಿದ ಕೂಡಲೇ ಮೊಬೈಲ್‌ನಲ್ಲಿರುವ ಗೂಗಲ್ ಪೇ, ಫೋನ್ ಪೇ, ಬ್ಯಾಂಕಿಂಗ್ ಆಪ್‌ಗಳು, ಕ್ಯಾಮೆರಾ ಮತ್ತು ರಹಸ್ಯ ಮಾಹಿತಿಯನ್ನು ಪ್ರವೇಶಿಸಲು ವಂಚಕರಿಗೆ ಅನುಮತಿ ಸಿಗುತ್ತದೆ. ಬಳಕೆದಾರರಿಗೆ ತಿಳಿಯದಂತೆಯೇ ಅವರ ಫೋನ್‌ನಿಂದ ಹಣ ವರ್ಗಾವಣೆಯಾಗುತ್ತದೆ.

ಪೊಲೀಸ್ ದೂರು ದಾಖಲು:

ಈ ಬಗ್ಗೆ ನೂರ್ ನಹೀದ್ ಖಾನ್ ದೂರು ನೀಡಿದ್ದು, ಸೈಬರ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ (BNS) ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಇನ್ನೂ ಅನೇಕ ಜನರಿಗೆ ಇದೇ ರೀತಿಯ ಸಂದೇಶಗಳು ರವಾನೆಯಾಗಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:

ಡಿಜಿಟಲ್ ಯುಗದಲ್ಲಿ 'ಎಪಿಕೆ' (APK) ಫೈಲ್ ಮತ್ತು ಇಮೇಜ್ (JPEG/PNG) ಫೈಲ್‌ಗಳ ನಡುವಿನ ವ್ಯತ್ಯಾಸ ತಿಳಿಯುವುದು ಬಹಳ ಮುಖ್ಯ. ಮದುವೆ ಆಮಂತ್ರಣಗಳು ಸಾಮಾನ್ಯವಾಗಿ ಫೋಟೋ, ವಿಡಿಯೋ ಅಥವಾ ಪಿಡಿಎಫ್ (PDF) ರೂಪದಲ್ಲಿರುತ್ತವೆ. ಆದರೆ, ಯಾರಾದರೂ 'APK' ಫೈಲ್ ಕಳುಹಿಸಿದರೆ ಅದನ್ನು ಅಪ್ಪಿತಪ್ಪಿಯೂ ಡೌನ್‌ಲೋಡ್ ಮಾಡಬೇಡಿ. ಅಪರಿಚಿತ ನಂಬರ್‌ಗಳಿಂದ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ. ನಿಮ್ಮ ಒಂದು ಸಣ್ಣ ತಪ್ಪು ನಿಮ್ಮ ಜೀವನದ ಗಳಿಕೆಯನ್ನೇ ಬಲಿಪಡೆಯಬಹುದು.