ದೇಶಾದ್ಯಂತ ನಾಳೆಯಿಂದ ಆರಂಭವಾಗಲಿರುವ ಟ್ರಕ್ ಮಾಲೀಕರ ಮುಷ್ಕರದಿಂದಾಗಿ ತೈಲ ಸಂಗ್ರಹ ಖಾಲಿಯಾಗುವ ಭೀತಿಯಿಂದ ಬೆಂಗಳೂರು ಮತ್ತು ಬೀದರ್‌ನ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನ ಸವಾರರು ಎಣ್ಣೆಗಾಗಿ ಮುಗಿಬಿದ್ದಿದ್ದಾರೆ.

ಬೆಂಗಳೂರು/ ಬೀದರ್ (ಜ.02): ದೇಶಾದ್ಯಂತ ಲಾರಿ ಚಾಲಕರು ನಾಳೆಯಿಂದ ಮುಷ್ಕರ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಅಭಾವ ಸೃಷ್ಟಿಯಾಗಲಿದೆ ಎಂಬ ವದಂತಿ ಹರಡಿರುವ ಬೆನ್ನಲ್ಲಿಯೇ ಬೆಂಗಳೂರು ಹಾಗೂ ಬೀದರ್ ಸೇರಿದಂತೆ ಕೆಲವೆಡೆ ಪೆಟ್ರೋಲ್‌ ಬಂಕ್‌ಗಳ ಮುಂದೆ ವಾಹನ ಸವಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ವಾಹನಗಳಿಗೆ ಎಣ್ಣೆಯನ್ನು ಹಾಕಿಸಿಕೊಂಡು ಹೋಗುತ್ತಿದ್ದಾರೆ. 

ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಹಿಟ್ & ರನ್ ಕಾಯ್ದೆಯಡಿ ಸಂಬಂಧಪಟ್ಟ ವಾಹನ ಚಾಲಕರಿಗೆ ಶಿಕ್ಷೆಯ ಪ್ರಮಾಣ ಹೆಚ್ಚುಗೊಳಿಸಿ ಕಾನೂನು ತಿದ್ದುಪಡಿ ಮಾಡಿದೆ. ಇದನ್ನು ವಿರೋಧಿಸಿ ದೇಶಾದ್ಯಂತ ಟ್ರಕ್ ಹಾಗೂ ಲಾರಿ ಚಾಲಕರು ಕೆಲಸ ನಿಲ್ಲಿಸಿ ಮುಷ್ಕರ ಹೂಡಿದ್ದಾರೆ. ಟ್ರಕ್ ಹಾಗೂ ಲಾರಿ ಚಾಲಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರೆ ಪೆಟ್ರೋಲ್ ಹಾಗೂ ಡಿಸೇಲ್ ಪೂರೈಕೆಗೆ ತೊಂದರೆಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ದೇಶದ ಮಹಾನಗರಗಳ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಸಾಲುಗಟ್ಟಿ ನಿಂತು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ.

ಜನ ಮರಳೋ, ಜಾತ್ರೆ ಮರಳೊ ಎಂಬಂತೆ ಬೀದರ್‌ನ ಪೆಟ್ರೋಲ್ ಬಂಕ್‌ಗೆ ಜನರು ಮುಗಿಬಿದ್ದಿದ್ದಾರೆ. ತಾವಷ್ಟೇ ಹೋಗಿ ವಾಹನಗಳಿಗೆ ಎಣ್ಣೆ ಹಾಕಿಸುವುದಲ್ಲದೇ ಮೂರ್ನಾಲ್ಕು ದಿನ ಡಿಸೇಲ್, ಪೆಟ್ರೋಲ್ ಸಿಗಲ್ಲ ಎಂಬ ವದಂತಿಯನ್ನೂ ಹರಡುತ್ತಿದ್ದಾರೆ. ಆದ್ದರಿಂದ ಬೀದರ್ ನಗರದಲ್ಲಿ ಪೆಟ್ರೋಲ್ ಬಂಕ್‌‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

ಟ್ರಕ್ ಮಾಲೀಕರ ಮುಷ್ಕರ: ತೈಲ ಸಂಗ್ರಹ ಖಾಲಿಯಾಗುವ ಭೀತಿ: ನಗರದ ಪೆಟ್ರೋಲ್‌ ಬಂಕ್‌ಗಳಲ್ಲಿ ಫುಲ್ ರಶ್

ದೇಶದಲ್ಲಿ ಯಾವುದೇ ಬಂದ್‌ ಅಥವಾ ದೊಡ್ಡ ಮಟ್ಟದ ಹೋರಾಟಗಳೂ ನಡೆಯುತ್ತಿಲ್ಲ. ಆದರೆ, ನಾಳೆ ಆಲ್ ಇಂಡಿಯಾ ಟ್ರಕ್ ಅಸೋಸಿಯೇಷನ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಜನರು ಮೂರ್ನಾಲ್ಕು ದಿನ ಪೆಟ್ರೊಲ್‌, ಡೀಸೆಲ್‌ಗೆ ಸಮಸ್ಯೆಯಾಗಲಿದೆ ಎಂದು ಈಗಲೇ ಪೆಟ್ರೋಲ್‌ ಬಂಕ್‌ ಮುಂದೆ ಕ್ಯೂ ನಿಂತಿದ್ದಾರೆ. ಜನರು ಪೆಟ್ರೋಲ್‌ ಬಂಕ್‌ಗಳಿಗೆ ಮುಗಿಬಿದ್ದ ಬೆನ್ನಲ್ಲಿಯೇ ನಾಳೆ ಜಿಲ್ಲೆಯಲ್ಲಿ ಯಾವುದೇ ಪೆಟ್ರೋಲ್ ಬಂಕ್ ಬಂದ್ ಆಗುವುದಿಲ್ಲ. ಸಾರ್ವಜನಿಕರು ತಮ್ಮ ವಾಹನಗಳಿಗೆ ಅಗತ್ಯವಿದ್ದಾಗಲೇ ಬಂದು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಿ ಎಂದು ಬೀದರ್ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿಯೂ ಪೆಟ್ರೋಲ್‌ ಬಂಕ್‌ ಮುಂದೆ ಕ್ಯೂ: ಕರ್ನಾಟಕದಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರದ ನಾಗಪುರ, ಥಾಣೆ, ಜಲಗಾಂವ್ ಹಾಗೂ ಧುಲಿಯಾದಲ್ಲಿ ವಾಹನ ಸವಾರರು ಉದ್ದುದ್ದ ಕ್ಯೂನಲ್ಲಿ ನಿಂತು ಪೆಟ್ರೋಲ್ , ಡಿಸೇಲ್‌ ತುಂಬಿಸಿಕೊಳ್ಳುವುದು ಕಂಡುಬಂತು. ನಾಗಪುರದಲ್ಲಿ ಹೀಗೆ ವಾಹನ ಸವಾರರು ಒಮ್ಮೆಲೇ ಪೆಟ್ರೋಲ್ ಬಂಕ್‌ಗಳಿಗೆ ದಾಂಗುಡಿ ಇಟ್ಟಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಬಳಿಕ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು ಎಂದು ವರದಿ ಆಗಿದೆ. ಹಾಗೆಯೇ ದೇಶದ ಪಂಜಾಬ್‌ ರಾಜ್ಯದ ಅಮೃತಸರ ಹಾಗೂ ಪಟಿಯಾಲಾದಲ್ಲೂ ಟ್ರಕ್‌ ಚಾಲಕರು ಹಿಟ್‌ & ರನ್‌ಗೆ ಸಂಬಂಧಿಸಿದ ಹೊಸ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಭಟನೆ ಕೈಗೊಂಡಿದ್ದಾರೆ. 

ಭಿಕ್ಷೆ ಬೇಡುವ ಬಾಲಕಿಯನ್ನೂ ಬಿಡದೇ ಕಾರಿನಲ್ಲಿ ಕೈಕಾಲು ಕಟ್ಟಿ ಎತ್ತಾಕೊಂಡೋದ ಕೇರಳದ ಕಾಮಿಷ್ಟರು!

ಲಾರಿ ಚಾಲಕರಿಂದ ದೊಡ್ಡ ಪ್ರತಿಭಟನೆ ಏಕೆ? : ಬ್ರಿಟಿಷ್ ವಸಾಹತುಸಾಹಿ ಕಾಲದಿಂದಲೂ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆ, ಭಾರತೀಯ ಕ್ರಿಮಿನಲ್ ಕಾಯ್ದೆ ಮುಂತಾದವುಗಳಲ್ಲಿ ಕೆಲ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರವೂ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ತಂದಿದ್ದು, ಇದರ ಪ್ರಕಾರ ಚಾಲಕರು ನಿರ್ಲಕ್ಷ್ಯದ ಚಾಲನೆ ಮಾಡಿ ವಾಹನಗಳಿಗೆ ಅಥವಾ ಇತರ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಗಂಭೀರವಾದ ಹಾನಿಗೆ ಕಾರಣವಾದ ಬಳಿಕವೂ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೇ ಪರಾರಿಯಾದರೆ ಅಂತವರಿಗೆ 10 ವರ್ಷ ಜೈಲು ಹಾಗೂ 7 ಲಕ್ಷ ದಂಡ ವಿಧಿಸುವ ಕಠಿಣ ಕಾನೂನು ಇದೆ. ಇದನ್ನು ವಿರೋಧಿಸಿ ಟ್ರಕ್ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ.