ಟ್ರಕ್ ಮಾಲೀಕರ ಮುಷ್ಕರ: ತೈಲ ಸಂಗ್ರಹ ಖಾಲಿಯಾಗುವ ಭೀತಿ: ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಫುಲ್ ರಶ್
ಟ್ರಕ್ ಹಾಗೂ ಲಾರಿ ಚಾಲಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರೆ ಮುಂದೆ ಪೆಟ್ರೋಲ್ ಹಾಗೂ ಡಿಸೇಲ್ ಪೂರೈಕೆಗೆ ತೊಂದರೆಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ದೇಶದ ಮಹಾನಗರಗಳ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಸಾಲುಗಟ್ಟಿ ನಿಂತು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ.
ಮುಂಬೈ: ಹಿಟ್ & ರನ್ ಕಾಯ್ದೆಗೆ ಕೇಂದ್ರ ಸರ್ಕಾರ ಶಿಕ್ಷೆಯ ಪ್ರಮಾಣ ಹೆಚ್ಚುಗೊಳಿಸಿ ಕಾನೂನು ತಿದ್ದುಪಡಿ ಮಾಡಿದ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ದೇಶಾದ್ಯಂತ ಟ್ರಕ್ ಹಾಗೂ ಲಾರಿ ಚಾಲಕರು ಕೆಲಸ ನಿಲ್ಲಿಸಿ ಮುಷ್ಕರ ಹೂಡಿದ್ದಾರೆ. ಇದು ದೇಶದಲ್ಲಿ ವಾಹನ ಸವಾರರನ್ನು ಆತಂಕಕ್ಕೆ ದೂಡಿದೆ. ಟ್ರಕ್ ಹಾಗೂ ಲಾರಿ ಚಾಲಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರೆ ಮುಂದೆ ಪೆಟ್ರೋಲ್ ಹಾಗೂ ಡಿಸೇಲ್ ಪೂರೈಕೆಗೆ ತೊಂದರೆಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ದೇಶದ ಮಹಾನಗರಗಳ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಸಾಲುಗಟ್ಟಿ ನಿಂತು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ.
ಅದರಲ್ಲೂ ಮಹಾರಾಷ್ಟ್ರದಲ್ಲಿ ನಾಗಪುರ, ಥಾಣೆ, ಜಲಗಾಂವ್ ಹಾಗೂ ಧುಲಿಯಾದಲ್ಲಿ ವಾಹನ ಸವಾರರು ಉದ್ದುದ್ದ ಕ್ಯೂನಲ್ಲಿ ನಿಂತು ಪೆಟ್ರೋಲ್ , ಡಿಸೇಲ್ ತುಂಬಿಸಿಕೊಳ್ಳುವುದು ಕಂಡುಬಂತು. ನಾಗಪುರದಲ್ಲಿ ಹೀಗೆ ವಾಹನ ಸವಾರರು ಒಮ್ಮೆಲೇ ಪೆಟ್ರೋಲ್ ಬಂಕ್‌ಗಳಿಗೆ ದಾಂಗುಡಿ ಇಟ್ಟಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದ್ದು, ಬಳಿಕ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು ಎಂದು ವರದಿ ಆಗಿದೆ. ಹಾಗೆಯೇ ದೇಶದ ಪಂಜಾಬ್ ರಾಜ್ಯದ ಅಮೃತಸರ ಹಾಗೂ ಪಟಿಯಾಲಾದಲ್ಲೂ ಟ್ರಕ್ ಚಾಲಕರು ಹಿಟ್ & ರನ್‌ಗೆ ಸಂಬಂಧಿಸಿದ ಹೊಸ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಭಟನೆ ಕೈಗೊಂಡಿದ್ದಾರೆ.
ಹಿಟ್ & ರನ್ ಕೇಸ್‌ನಲ್ಲಿ ಶಿಕ್ಷೆ ಪ್ರಮಾಣ ಏರಿಕೆ, ದೇಶಾದ್ಯಂತ ಮುಷ್ಕರ ಘೋಷಿಸಿದ ಟ್ರಕ್ ಡ್ರೈವರ್ಸ್!
ಇನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಕೆಲವು ಪೆಟ್ರೋಲ್ ಪಂಪ್‌ಗಳಲ್ಲಿ ಈಗಾಗಲೇ ಪೆಟ್ರೋಲ್ ಡಿಸೇಲ್ ಸಂಗ್ರಹ ಖಾಲಿಯಾಗಿದೆ ಎಂದು ವರದಿ ಆಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ನೋ ಪೆಟ್ರೋಲ್ ಎಂಬ ಬೋರ್ಡ್ ಅಳವಡಿಸಬೇಕಾಗುತ್ತದೆ ಎಂದು ಪಂಪ್‌ನ ಮ್ಯಾನೇಜರ್ ಹೇಳಿದ್ದಾರೆ. ಹಾಗೆಯೇ ನಾಸಿಕ್‌ನಲ್ಲಿ ಟ್ಯಾಂಕರ್ ಚಾಲಕರು ಕೆಲಸ ಮಾಡುವುದನ್ನು ಈಗಾಗಲೇ ನಿಲ್ಲಿಸಿದ್ದು, 1000ಕ್ಕೂ ಹೆಚ್ಚು ಟ್ರಕ್‌ಗಳನ್ನು ಪನೇವಾಡಿ ಗ್ರಾಮದಲ್ಲಿ ಪಾರ್ಕ್ ಮಾಡಿದ್ದಾರೆ. ಈ ಪನೇವಾಡಿ ಗ್ರಾಮವೂ ಇಂಧನ ಡಿಪೋಗಳಿಗೆ ಮನೆ ಎನಿಸಿದೆ. ಹಾಗೆಯೇ ಥಾಣೆಯಲ್ಲಿ ಕೂಡ ಪೆಟ್ರೋಲ್ ಪಂಪ್‌ಗಳು ಇಂಧನವಿಲ್ಲದೇ ಬಾಗಿಲು ಹಾಕಿವೆ.
ಟ್ರಕ್ ಚಾಲಕರ ಮುಷ್ಕರ ಹೀಗೆ ಮುಂದುವರೆದಲ್ಲಿ ನಾಸಿಕ್ ಜಿಲ್ಲೆಯಲ್ಲಿಯೂ ಕೂಡ ಪೆಟ್ರೋಲ್ ಪಂಪ್‌ಗಳು ತೈಲ ಇಲ್ಲದೇ ಬಂದ್ ಆಗಲಿವೆ ಎಂದು ನಾಸಿಕ್ ಜಿಲ್ಲೆಯ ಪೆಟ್ರೋಲ್ ವಿತರಣಾ ಡೀಲರ್‌ಗಳ ಸಂಘ ಎಚ್ಚರಿಸಿದೆ. ನಿನ್ನೆ ರಾತ್ರಿಯಷ್ಟೇ ಮುಂಬೈನ 150 ಪೆಟ್ರೋಲ್ ಪಂಪ್‌ಗಳಿಗೆ ಪೆಟ್ರೋಲ್ ಪೂರೈಕೆ ಮಾಡಲಾಗಿದೆ. ಆದರೆ ಪೆಟ್ರೋಲ್ ಡಿಸೇಲ್ ಮುಗಿದು ಹೋಗುವ ಆತಂಕದ ಹಿನ್ನೆಲೆಯಲ್ಲಿ ಜನ ತಮ್ಮ ವಾಹನಗಳಿಗೆ ಸದ್ಯ ಅಗತ್ಯವಿಲ್ಲದಿದ್ದರೂ ಪೆಟ್ರೋಲ್ ತುಂಬುತ್ತಿದ್ದು, ಇದರಿಂದ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಸಂಗ್ರಹಿಸುವುದು ಕಷ್ಟವೆನಿಸಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಪ್ಲೈ ಇಲ್ಲದೇ ಹೋದಲ್ಲಿ ಬಹಳ ಕಷ್ಟವಾಗಲಿದೆ ಎಂದು ಮುಂಬೈ ಪೆಟ್ರೋಲ್ ಪಂಪ್ ಅಸೋಸಿಯೇಷನ್ ಡೀಲರ್ ಆದ ಕೆಯೂರ್ ಪರೀಖ್ ಎಂಬುವವರು ಹೇಳಿದ್ದಾರೆ.
ಲಾರಿ, ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಅಳವಡಿಕೆಗೆ ಕಡೆ ದಿನಾಂಕ ಪ್ರಕಟ
ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಕೇವಲ ಮುಂಬೈ, ಪಂಜಾಬ್ ಮಾತ್ರವಲ್ಲದೇ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಡಿಸೇಲ್‌ಗೆ ತೊಂದರೆಯಾಗಲಿದೆ ಎಂದು ಕೆಲ ಮೂಲಗಳು ವರದಿ ಮಾಡಿವೆ.
ಪ್ರತಿಭಟನೆ ಏಕೆ
ಬ್ರಿಟಿಷ್ ವಸಾಹತುಸಾಹಿ ಕಾಲದಿಂದಲೂ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆ, ಭಾರತೀಯ ಕ್ರಿಮಿನಲ್ ಕಾಯ್ದೆ ಮುಂತಾದವುಗಳಲ್ಲಿ ಕೆಲ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರವೂ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ತಂದಿದ್ದು, ಇದರ ಪ್ರಕಾರ ಚಾಲಕರು ನಿರ್ಲಕ್ಷ್ಯದ ಚಾಲನೆ ಮಾಡಿ ವಾಹನಗಳಿಗೆ ಅಥವಾ ಇತರ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಗಂಭೀರವಾದ ಹಾನಿಗೆ ಕಾರಣವಾದ ಬಳಿಕವೂ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೇ ಪರಾರಿಯಾದರೆ ಅಂತವರಿಗೆ 10 ವರ್ಷ ಜೈಲು ಹಾಗೂ 7 ಲಕ್ಷ ದಂಡ ವಿಧಿಸುವ ಕಠಿಣ ಕಾನೂನು ಇದೆ. ಇದನ್ನು ವಿರೋಧಿಸಿ ಟ್ರಕ್ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ.
ಈ ಕಾಯ್ದೆಯನ್ನು ವಿರೋಧಿಸಿ ದೇಶದ ವಿವಿಧೆಡೆ ಚಾಲಕರು ಪ್ರತಿಭಟನೆ ಮಾಡ್ತಿದ್ದಾರೆ. ಮುಂಬೈ ಅಹ್ಮದಾಬಾದ್ ಹೈವೇಯಲ್ಲಿ ಚಾಲಕರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದು, ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಓರ್ವ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ.