ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆದಿದೆ. ಕನಕಪುರ ರಸ್ತೆ ಮತ್ತು ನೆಲಮಂಗಲ ಬಳಿ ಗುರುತಿಸಲಾದ ಸ್ಥಳಗಳ ಪೈಕಿ, ಕಡಿಮೆ ಭೂಸ್ವಾಧೀನ ಮತ್ತು ಗ್ರಾಮಗಳ ಸ್ಥಳಾಂತರವಿರುವ ಜಾಗವನ್ನು ಅಂತಿಮಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ತಾಂತ್ರಿಕ ಕಾರ್ಯಸಾಧ್ಯತಾ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಸಂಬಂಧಿಸಿದಂತೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಮತ್ತು ಗ್ರಾಮಗಳನ್ನು ಹೆಚ್ಚಾಗಿ ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಕಡಿಮೆ ಇರುವ ಜಾಗದಲ್ಲಿ ವಿಮಾನನಿಲ್ದಾಣ ನಿರ್ಮಿಸುವ ಕುರಿತು ಸರ್ಕಾರ ಚರ್ಚೆ ನಡೆಸಿದೆ. ವಿಧಾನಸೌಧದಲ್ಲಿ ಬುಧವಾರ ಬೆಂಗಳೂರಿಗೆ 2ನೇ ವಿಮಾನನಿಲ್ದಾಣ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನಕಪುರ ರಸ್ತೆ, ನೆಲಮಂಗಲ-ಕುಣಿಗಲ್‌ ರಸ್ತೆ

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಈಗಾಗಲೇ ಗುರುತಿಸಲಾಗಿರುವ ಕನಕಪುರ ರಸ್ತೆಯ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲ-ಕುಣಿಗಲ್‌ ರಸ್ತೆಯಲ್ಲಿ ಸ್ಥಳ ಗುರುತಿಸುವುದು, ಕೇಂದ್ರದ ತಂಡ ನೀಡಿರುವ ವರದಿ, ಮೂರೂ ಸ್ಥಳಗಳಲ್ಲಿ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ಕಾರ್ಯಸಾಧ್ಯತಾ ವರದಿಗಳ ಕುರಿತಂತೆ ಚರ್ಚಿಸಲಾಯಿತು. 3 ಸ್ಥಳಗಳ ಪೈಕಿ ಚೂಡಹಳ್ಳಿ ಮತ್ತು ಸೋಮನಹಳ್ಳಿಯಲ್ಲಿ ಗುರುತಿಸಲಾಗಿರುವ ಸ್ಥಳಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸಾಧ್ಯತೆ ಬಗ್ಗೆ ಮಾಹಿತಿ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಸದ್ಯ ಚೂಡಹಳ್ಳಿಯಲ್ಲಿ 4655 ಎಕರೆ, ಸೋಮನಹಳ್ಳಿಯಲ್ಲಿ 4376 ಎಕರೆ ಭೂಮಿಯಿದ್ದು, ಎರಡೂ ಪ್ರದೇಶಗಳನ್ನು ಒಟ್ಟು ಗೂಡಿಸಿದರೆ 9 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಸಿಗಲಿದ್ದು, ಅಲ್ಲಿ ವಿಮಾನನಿಲ್ದಾಣ ನಿರ್ಮಾಣ ಸಾಧ್ಯತೆ. ಜತೆಗೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಅಥವಾ ಕಡಿಮೆ ಗ್ರಾಮಗಳನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಸ್ಥಳವನ್ನು ಅಂತಿಮಗೊಳಿಸುವಂತೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಉಳಿದಂತೆ ಸಭೆಯಲ್ಲಿ, ಭೂಸ್ವಾಧೀನ ಪ್ರಕ್ರಿಯೆ ಮತ್ತು ಯೋಜನೆಯಿಂದ ವನ್ಯಜೀವಿಗಳ ಮೇಲಾಗುವ ಪರಿಣಾಮಗಳ ಕುರಿತು ತಾಂತ್ರಿಕ ಅಧ್ಯಯನ ನಡೆಸುವುದು ಹಾಗೂ ಸೋಮನಹಳ್ಳಿ ಪ್ರದೇಶವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸಮೀಪದಲ್ಲಿದ್ದು ಅದರ ಬಗ್ಗೆಯೂ ವರದಿ ಸಿದ್ಧಪಡಿಸಿ, ಅನುಮತಿ ಪಡೆಯಬೇಕಿರುವ ಕುರಿತಂತೆ ಚರ್ಚಿಸಲಾಯಿತು.

ಇದನ್ನೂ ಓದಿ: Bengaluru Airport ರಸ್ತೆ ಶೀಘ್ರದಲ್ಲೇ ಸಂಪೂರ್ಣ ಸಿಗ್ನಲ್ ಮುಕ್ತ!; ಮುಂದಿನ ವಾರದಿಂದ ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಬೆಂಗಳೂರು ಸಮೀಪ ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಈ ಹಿಂದೆ ನಡೆದಿದ್ದ ಪ್ರಕ್ರಿಯೆಗಳ ವಿವರಣೆ ಪಡೆದಿದ್ದೇನೆ. ಸದ್ಯ ಗುರುತಿಸಲಾಗಿರುವ ಜಾಗಗಳ ಪೈಕಿ ಖಾಸಗಿಯವರಿಂದ ಕಡಿಮೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಮತ್ತು ಕಡಿಮೆ ಗ್ರಾಮಗಳನ್ನು ಸ್ಥಳಾಂತರಿಸಬಹುದಾದ ಸ್ಥಳವನ್ನು ನಿಗದಿ ಮಾಡಿ ತಾಂತ್ರಿಕ ಕಾರ್ಯಸಾಧ್ಯತಾ ವರದಿ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ: 40 ಕೋಟಿ ಪ್ರಯಾಣಿಕರ ದಾಖಲೆ! ಕಾರ್ಗೊ ಸಾಗಣೆಯಲ್ಲೂ ಟಾಪ್, ಐತಿಹಾಸಿಕ ಮೈಲಿಗಲ್ಲು!