ಪತ್ತೆಯಾಗದ ಚಾಲಾಕಿ ಚಿರತೆ ಬಗ್ಗೆ ಟ್ರೋಲ್: ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಸಮೇತ ಬೆಳಗಾವಿ ರಾಜಕಾರಣಕ್ಕೂ ಎಂಟ್ರಿ!
• ಸಿಬ್ಬಂದಿ ಹೆಚ್ಚಳ ಮಾಡಿದರೂ ಪತ್ತೆಯಾಗದ ಚಾಲಾಕಿ ಚಿರತೆ
• ಅರಣ್ಯ ಸಿಬ್ಬಂದಿಗೆ ದರ್ಶನ ನೀಡಿ ಮಿಂಚಂತೆ ಮಾಯ
• ಟ್ರೋಲ್ ಪೇಜ್‌ಗಳಿಗೆ ಆಹಾರವಾದ ಬೆಳಗಾವಿಯ ಚಾಣಾಕ್ಷ ಚಿರತೆ
ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಆ.27): ಕುಂದಾನಗರಿ ಜನತೆಯ ನಿದ್ದೆಗೆಡಿಸಿರುವ ಚಾಣಾಕ್ಷ ಚಿರತೆ ಶೋಧಕ್ಕಾಗಿ 23ನೇ ದಿನವೂ ಕಾರ್ಯಾಚರಣೆ ಮುಂದುವರಿದಿದೆ. ಅರಣ್ಯ ಸಿಬ್ಬಂದಿಗೆ ದರ್ಶನ ನೀಡಿ ಮಿಂಚಿ ಮರೆಯಾಗುತ್ತಿರುವ ಚಾಲಾಕಿ ಚಿರತೆಗಾಗಿ ಶೋಧಕಾರ್ಯ ಮುಂದುವರೆದಿದೆ. ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿದೆ. ಆದರೂ ಚಾಣಾಕ್ಷ ಚಿರತೆ ಬಲೆಗೆ ಬೀಳುತ್ತಿಲ್ಲ.
ಇತ್ತ ಗಾಲ್ಫ್ ಮೈದಾನದ ಒಂದು ಕಿಮೀ ವ್ಯಾಪ್ತಿಯಲ್ಲಿ 21 ಶಾಲೆಗಳಿಗೆ ರಜೆ ಮುಂದುವರಿದಿದೆ. ಮತ್ತೊಂದೆಡೆ ಅರಣ್ಯ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಲಾಕಿ ಚಿರತೆ ಟ್ರೋಲ್ ಪೇಜ್‌ಗಳಿಗೆ ಆಹಾರ ಆಗುತ್ತಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಾವಿ ಚಿರತೆ ಹವಾ ಜೋರಾಗಿದೆ. ನಿನ್ನೆಯಷ್ಟೇ ಚಿರತೆ ಫೋಟೋ ಹಾಕಿ 'ಬಿಬಟ್ಯಾ ಬೆಳಗಾಂವಕರ್' ಎಂಬ ಹೆಸರಿಟ್ಟು ಆಧಾರ್ ಕಾರ್ಡ್ ಮಾದರಿ ಸಿದ್ದಪಡಿಸಿ ಹರಿಬಿಡಲಾಗಿತ್ತು. ಮರಾಠಿ ಭಾಷೆಯಲ್ಲಿ ಬಿಬಟ್ಯಾ ಅಂದ್ರೆ ಚಿರತೆ ಎಂದರ್ಥ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವ್ಯಂಗ್ಯಭರಿತ ಪೋಸ್ಟ್ ಹಾಕುತ್ತಿದ್ದಾರೆ.
Belagavi: ಅರಣ್ಯ ಇಲಾಖೆ ಸಿಬ್ಬಂದಿ ಚಳ್ಳೆಹಣ್ಣು ತಿನಿಸುತ್ತಿರುವ ಚಾಣಾಕ್ಷ ಚಿರತೆ
'ನಾ ಅಂತೂ ಬೆಳಗಾವಿ ಬಿಟ್ಟು ಹೋಗಲ್ಲ ಯಾರಪ್ಪಂದ ಏನೈತಿ, ಬೆಳಗಾವಿ ನಂದೈತಿ... ಈ ಬಾರಿ ಬೆಳಗಾವಿ ಗಣೇಶೋತ್ಸವ ಮುಗಿಸಿಯೇ ನಾನು ಹೋಗೋದು... ಬೆಳಗಾವಿಯ ಗಾಳಿ, ನೀರು ಚೆನ್ನಾಗಿದೆ ಕುಟುಂಬ ಸಮೇತ ಇಲ್ಲೇ ಶಿಫ್ಟ್ ಆಗ್ತೇನೆ.. ಏನ್ ಮಾಡ್ಕೋತಿ ಮಾಡ್ಕೋ.. ರಾಜ್ಯೋತ್ಸವಕ್ಕ ಚನ್ನಮ್ಮ ಸರ್ಕಲ್‌ದಾಗ ಒಂದ್ ರೌಂಡ್ ಡ್ಯಾನ್ಸ್ ಮಾಡಿ ಹೋಗಾಂವ... ಈ ರೀತಿ ವಿವಿಧ ಬರಹ ಬರೆದು ಚಿರತೆ ಫೋಟೋ ಹಾಕಿ ಪೋಸ್ಟ್ ಹಾಕಿದ್ದಾರೆ. ಇನ್ನು ಇಂದು ಚಿರತೆ ಭಾವಚಿತ್ರ ಹಾಕಿ ಬಿಬಟ್ಯಾ ಬೆಳಗಾಂವಕರ ಹೆಸರಿನಲ್ಲಿ ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಮಾದರಿ ಸಿದ್ಧಪಡಿಸಿದ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಳಗಾವಿ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿತು ಚಾಣಾಕ್ಷ ಚಿರತೆ: ಇನ್ನು ಬೆಳಗಾವಿಯಲ್ಲಿ ಚಿರತೆ ಪತ್ತೆಯಾಗದ ವಿಚಾರ ಬಳಸಿ ಬಿಜೆಪಿ ನಾಯಕರಿಗೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಕೌಂಟರ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಕಟ್ಟಿಹಾಕಲು ಬಿಜೆಪಿ ಪಣ ಪಟ್ಟ ವಿಚಾರವಾಗಿ ಸತೀಶ್ ಜಾರಕಿಹೊಳಿಯನ್ನು ಹುಲಿಗೆ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರು ಪೋಸ್ಟ್ ಹಾಕಿದ್ದಾರೆ. 'ಚಿರತೆ ಹಿಡಿಯಲು ಆಗದ ಇವರಿಗೆ ಹುಲಿ ಬಲೆಗೆ ಬೀಳುತ್ತಾ? ಉತ್ತರ ಕರ್ನಾಟಕದಲ್ಲಿ ಹುಲಿಯೊಂದು ಇದೆ, ಅದನ್ನ ಕಟ್ಟಿ ಹಾಕಬೇಕು.
ಇಲ್ಲದಿದ್ದರೆ ನಿಮಗೆ ಉಳಿಗಾಲವಿಲ್ಲ ಅಂತಾ ಬಿಜೆಪಿ ಹೈಕಮಾಂಡ್ ಆಜ್ಞೆ ಮಾಡಿದೆ. ಅದಕ್ಕೆ ಎಲ್ಲ ಕತ್ತಿ, ಸವದಿ, ಜೊಲ್ಲೆ, ಅಭಯರನ್ನು ಬಿಟ್ಟಿದೆ ಅಂತೆ. ಚಿರತೆ ಹಿಡಿಯಲು ಆಗದ ಇವರಿಗೆ ಹುಲಿ ಬಲೆಗೆ ಬೀಳುತ್ತಾ? 'ಕ್ಷೇತ್ರದ ಜನ ಬಿಜೆಪಿಯನ್ನು ಜೀವನಪರ್ಯಂತ ವನವಾಸ ಕಳಿಸಲು ಶಪಥ ಮಾಡಿದ್ದು ಸತ್ಯ. ಸತೀಶ್ ಜಾರಕಿಹೊಳಿ ಎಂಬ ಹುಲಿ ಸ್ಥಳಕ್ಕೆ ಬರೋವರೆಗೂ ಬೆಳಗಾವಿಯ ಚಿರತೆ ಬಲೆಗೆ ಬೀಳಲ್ಲ' ಎಂಬ ಬರಹ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಚಿರತೆ ಸೆರೆಗೆ ಅತಿದೊಡ್ಡ ಕಾರ್ಯಾಚರಣೆ: ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅವಿತುಕೊಂಡಿರುವ ಚಿರತೆಯ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಚಿರತೆ ಶೋಧ ಕಾರ್ಯಾಚರಣೆ 23 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಬೃಹತ್ ಕಾರ್ಯಾಚರಣೆ ನಡೆಸಲಾಯಿತು. ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ. ಇಷ್ಟು ದಿನ 200 ಜನ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇಂದು ಹೆಚ್ಚುವರಿಯಾಗಿ 100 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಶಿವಮೊಗ್ಗದ ಸಕ್ರೆಬೈಲಿನಿಂದ ಬಂದಿರುವ ಗಜಪಡೆಯೂ ಕಾರ್ಯಾಚರಣೆ ನಡೆಸಿತು. ಜೊತೆಗೆ 8 ಜನ ಅರವಳಿಕೆ ತಜ್ಞರು, 8 ಜೆಸಿಬಿ ಬಳಕೆ ಮಾಡಲಾಯಿತು. ಮತ್ತೊಂದೆಡೆ ಕೆಲ ದಿನಗಳ ಹಿಂದೆ ಚಿರತೆ ದಾಟಿದ್ದ ಹಿಂಡಲಗಾ ಡಬಲ್ ರಸ್ತೆಯಲ್ಲಿ ಹೈ ಅಲರ್ಟ್ ಮಾಡಿಕೊಳ್ಳಲಾಯಿತು.
ಬೆಳಗಾವಿ ಚಿರತೆ ಸೆರೆಗೆ 200 ಜನ!: ಕಾರ್ಯಾಚರಣೆಗೆ 2 ಆನೆ ಕೂಡ ಬಳಕೆ
ಹಿಂಡಲಗಾ ಮಧ್ಯದ ಕ್ಲಬ್ ರಸ್ತೆಯ ಬಳಿ ತೀವ್ರ ನಿಗಾ ಇರಿಸಲಾಯಿತು. ಚಿರತೆ ಪ್ರತ್ಯಕ್ಷ ಹಿನ್ನೆಲೆಯಲ್ಲಿ ಕಳೆದ 18 ದಿನಗಳಿಂದ 21 ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಖಾಸಗಿ ಶಾಲೆಗಳು ಆನ್ಲೈನ್ ಶಿಕ್ಷಣ ನೀಡುತ್ತಿವೆ. ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೋವಿಡ್ ಕಾರಣಕ್ಕೆ 2 ವರ್ಷಗಳಿಂದ ಮಕ್ಕಳಿಗೆ ಸಮರ್ಪಕ ಶಿಕ್ಷಣ ದೊರೆತಿಲ್ಲ. ಕೋವಿಡ್ ನಿಯಂತ್ರಣಕ್ಕೆ ಬಂದು ಈ ಸಲ ಮಕ್ಕಳು ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದ್ದರು. ಆದರೆ ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಕಾರಣಕ್ಕೆ ನಗರ-ಗ್ರಾಮೀಣ ಭಾಗದ ಶಾಲೆಗಳಿಗೆ ರಜೆ ನೀಡಲಾಗಿದೆ. ಚಿರತೆ ಹಿಡಿಯಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಪೋಷಕರೂ ಸಹ ಆಕ್ರೋಶ ಹೊರಹಾಕುತ್ತಿದ್ದಾರೆ.