ರಾಜ್ಯದ 2ನೇ ರಾಜಧಾನಿ ಎಂದೇ ಕರೆಯಲಾಗುವ ಬೆಳಗಾವಿಯಲ್ಲಿ ಚಿರತೆಯೊಂದು 19 ದಿನಗಳಿಂದ ಅಡ್ಡಾಡುತ್ತಿದ್ದು, ಜನ ಆತಂಕಗೊಂಡಿದ್ದಾರೆ. ಚಿರತೆ ದಾಳಿ ಭೀತಿಯಿಂದಾಗಿ ಕಳೆದ 18 ದಿನಗಳಿಂದ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 

ಬೆಳಗಾವಿ (ಆ.23): ರಾಜ್ಯದ 2ನೇ ರಾಜಧಾನಿ ಎಂದೇ ಕರೆಯಲಾಗುವ ಬೆಳಗಾವಿಯಲ್ಲಿ ಚಿರತೆಯೊಂದು 19 ದಿನಗಳಿಂದ ಅಡ್ಡಾಡುತ್ತಿದ್ದು, ಜನ ಆತಂಕಗೊಂಡಿದ್ದಾರೆ. ಚಿರತೆ ದಾಳಿ ಭೀತಿಯಿಂದಾಗಿ ಕಳೆದ 18 ದಿನಗಳಿಂದ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದರೂ ಅದು ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಓಡಾಡುತ್ತಿದೆ.

ಸೋಮವಾರ ಬೆಳಗಾವಿ ಹೃದಯ ಭಾಗದಲ್ಲಿರುವ ಗಾಲ್‌್ಫ ಕ್ಲಬ್‌ನಲ್ಲಿ ಚಿರತೆ ಕಂಡುಬಂದಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅರಣ್ಯ ಹಾಗೂ ಪೊಲೀಸ್‌ ಇಲಾಖೆಯ 200 ಸಿಬ್ಬಂದಿ ಕಾರ್ಯಾಚರಣೆಗೆ ಇಳಿದು ಶೋಧ ಕಾರ್ಯ ಆರಂಭಿಸಿದ್ದಾರೆ. ಸೋಮವಾರ ಕಣ್ಣೆದುರೇ ಚಿರತೆ ಕಾಣಿಸಿತಾದರೂ ಬಲೆ ಬೀಸುವಷ್ಟರಲ್ಲಿ ಪರಾರಿಯಾಗಿದೆ. ಈ ನಡುವೆ ಶಿವಮೊಗ್ಗದ ಸಕ್ರೆಬೈಲು ಸಾಕಾನೆ ಶಿಬಿರದಿಂದ 2 ಆನೆಗಳನ್ನು ಕರೆತಂದು ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ.

Belagavi: ಬ್ಯಾಂಡ್ ಬಾರಿಸಿದ್ರು, ಸಿಡಿಮದ್ದು ಹಾರಿಸಿದ್ರು, ಏರ್‌ಗನ್ ಫೈರ್ ಮಾಡಿದ್ರು ಚಿರತೆ ಸುಳಿವಿಲ್ಲ!

ಆ.5ರಂದು ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿತ್ತು. ಚಿರತೆ ಹೋಯಿತು ಎಂದು ಜನ ನಿಟ್ಟುಸಿರುಬಿಡುತ್ತಿರುವಾಗಲೇ, ಆ.7, 8ರಂದು ಗಾಲ್‌್ಫ ಮೈದಾನದಲ್ಲಿ ಚಿರತೆ ಇರುವುದು ಸಿಸಿಟಿವಿ ಕ್ಯಾಮೆರಾಗಳಿಂದ ದೃಢಪಟ್ಟಿತ್ತು. ಪರಿಶೀಲನೆ ನಡೆಸಿದಾಗ ಬೆಳಗಾವಿ-ಬಾಚಿ ರಾಜ್ಯ ಹೆದ್ದಾರಿ ಪಕ್ಕವೇ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ದಟ್ಟಮರಗಳು ಇರುವ ಪ್ರದೇಶದಲ್ಲೂ ಹೆಜ್ಜೆ ಗುರುತುಗಳು ಕಂಡುಬಂದಿದ್ದವು. ಹಿಂಡಲಗಾ ಗ್ರಾಮದ ಕಡೆಯಿಂದ ಬೆಳಗಾವಿ ನಗರಕ್ಕೆ ಬರುತ್ತಿದ್ದ ಚಿರತೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿ ಆತಂಕಕ್ಕೆ ಕಾರಣವಾಗಿತ್ತು. ಗಾಲ್‌್ಫ ಮೈದಾನದ ಎದುರುಗಡೆ ಇರುವ ರಕ್ಷಣಾ ಇಲಾಖೆಗೆ ಸೇರಿದ ಜಾಗಕ್ಕೆ ಅಲ್ಲಿಂದ ಜನವಸತಿ ಪ್ರದೇಶದತ್ತ ಚಿರತೆ ನುಗ್ಗಿತ್ತು. ಬಳಿಕ ಮತ್ತೆ ಗಾಲ್ಫ್ ಮೈದಾನದಲ್ಲಿ ಚಿರತೆ ಕಂಡುಬಂದಿದೆ.

ಇದೀಗ ಗಾಲ್ಫ್ ಕ್ಲಬ್‌ ರಸ್ತೆಯಲ್ಲಿ ಅರಣ್ಯ ಇಲಾಖೆಯ 120ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರ್ಯಾಚರಣೆ ಸ್ಥಳದಲ್ಲಿ ಅರಣ್ಯ, ಪೊಲೀಸ್‌, ಅರಿವಳಿಕೆ ತಜ್ಞರೂ ಸೇರಿದಂತೆ ಅಂದಾಜು 200ಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಅಷ್ಟೂಮಂದಿ ಸೋಮವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಚಿರತೆ ಮಾತ್ರ ಸಿಗಲೇ ಇಲ್ಲ. ಬೆಳಗ್ಗೆ ಅರಣ್ಯ, ಪೊಲೀಸ್‌ ಸಿಬ್ಬಂದಿ ಮುಂದೆಯೇ ಕಾಣಿಸಿಕೊಂಡ ಚಿರತೆ ಬಲೆ ಬೀಸುವರಷ್ಟರಲ್ಲೇ ತಪ್ಪಿಸಿಕೊಂಡಿದೆ.

ಕಾಟಾಚಾರದ ಕಾರ್ಯಾಚರಣೆ: ಚಿರತೆ ದಾಳಿ ನಡೆದ ಬಳಿಕ ಅದರ ಶೋಧಕ್ಕೆ ಅರಣ್ಯ ಮತ್ತು ಪೊಲೀಸ್‌ ಇಲಾಖೆ ಕಾಟಾಚಾರಕ್ಕೆಂಬಂತೆ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದವು. ಆ ವೇಳೆ ಚಿರತೆ ಸಿಗದ್ದರಿಂದ ಅದು ಬೇರೆ ಕಡೆಗೆ ಹೋಗಿರಬಹುದು ಎನ್ನುವ ತೀರ್ಮಾನಕ್ಕೆ ಬರಲಾಗಿತ್ತು. ಈ ಬಗ್ಗೆ ಗಂಭೀರವಾಗಿ ಪರಿಗಣನೆ ಮಾಡಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿರುವ ಚಿರತೆ ದೃಶ್ಯಗಳು ಬೆಳಗಾವಿಯದ್ದು ಅಲ್ಲವೇ ಅಲ್ಲ. ಅದು ಬೇರೆ ಕಡೆಯದ್ದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೆ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಇದು ಬೆಳಗಾವಿಯದ್ದೇ ಎಂಬುದು ದೃಢಪಟ್ಟಿತ್ತು.

ಸಕ್ರೆಬೈಲಿನಿಂದ ಆನೆ ಕರೆಸಿ ಕಾರ್ಯಾಚರಣೆ: ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಿಂದ ಎರಡು ಆನೆಗಳನ್ನು ಕರೆತಂದು ಚಿರತೆ ಕಾರ್ಯಾಚರಣೆ ನಡೆಸಿ ಶೀಘ್ರವೇ ಚಿರತೆ ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಸಚಿವ ಉಮೇಶ ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಪೊಲೀಸ್‌ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿರತೆ ಕಾರ್ಯಾಚರಣೆಗೆ 120 ಅರಣ್ಯ ಇಲಾಖೆ ಹಾಗೂ 80 ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು. ಕಳೆದ 20 ದಿನಗಳಿಂದ ಬೆಳಗಾವಿ ಜಿಲ್ಲೆಯ ನಾಲ್ಕು ಕಡೆ ಚಿರೆತೆಗಳ ಹಾವಳಿ ಕಂಡುಬಂದಿತ್ತು. 

ಚಿರತೆ ಭೀತಿಯಿಂದ 12 ಶಾಲೆಗಳಿಗೆ ರಜೆ: ಗ್ರಾಮಸ್ಥರಲ್ಲಿ ಭಯ

ಚಿಕ್ಕೋಡಿಯಲ್ಲಿ ಭಾಗದಲ್ಲಿ ಕಂಡುಬಂದಿದ್ದ ಚಿರತೆ ಅಥಣಿ ಮೂಲಕ ಮಹಾರಾಷ್ಟ್ರಕ್ಕೆ ಹೋಗಿರುವ ಮಾಹಿತಿ ಇದೆ. ಮೂಡಲಗಿ ಹಾಗೂ ಸವದತ್ತಿಯಲ್ಲಿ 10 ದಿನಗಳಿಂದ ಕಂಡು ಬಂದಿಲ್ಲ. ಬೆಳಗಾವಿ ಗಾಲ್‌್ಫನಲ್ಲಿ ಕಣ್ಮರೆಯಾಗಿದ್ದ ಚಿರತೆ ಸೋಮವಾರ ಬೆಳಗ್ಗೆ ಸ್ಥಳೀಯರಿಗೆ ಕಾಣಿಸಿಕೊಂಡಿದೆ. ಈ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ನುರಿತ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅರಿವಳಿಕೆ ತಜ್ಞರನ್ನು ಸಹ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದು ಮದ್ದು ನೀಡಿ ಎರಡ್ಮೂರು ದಿನದಲ್ಲಿ ಹಿಡಿಯಲಾಗುವುದು ಎಂದು ಭರವಸೆ ನೀಡಿದರು.