ಅಮೆರಿಕದ ಟೆಕ್ಸಾಸ್‌ನಲ್ಲಿ ನಿರ್ಮಾಣವ ಹೊಸ ತೈಲ ಸಂಸ್ಕರಣಾಗಾರಕ್ಕಾಗಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದ ಅಮೆರಿಕಕ್ಕೆ ಇಂಧನ ಸ್ವಾವಲಂಬನೆ ನೀಡಿದರೆ, ಭಾರತಕ್ಕೆ ಮಧ್ಯಪ್ರಾಚ್ಯ ಮೇಲಿನ ಅವಲಂಬನೆ ಕಡಿಮೆ ಮಾಡಿ, ದೀರ್ಘಕಾಲ ಸಂಸ್ಕರಿತ ತೈಲ ಒದಗಿಸಲಿದೆ.
-ದಿವ್ಯಾ ಹೆಗಡೆ ಕಬ್ಬಿನಗದ್ದೆ
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ ಇಡೀ ಮಧ್ಯಪ್ರಾಚ್ಯಕ್ಕೆ ಹಬ್ಬಿ, ನಾನಾ ರೀತಿಯ ಸಂಕಷ್ಟಗಳು ಎದುರಾಗಿರುವ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ‘50 ವರ್ಷಗಳ ಬಳಿಕ ಅಮೆರಿಕದಲ್ಲಿ ನಿರ್ಮಿಸಲಾಗುತ್ತಿರುವ ತೈಲ ಸಂಸ್ಕರಣಾಗಾರದ ಜೊತೆ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಪಾಲುದಾರಿಕೆ ಮಾಡಿಕೊಂಡಿದೆ. ಸುಮಾರು 27.5 ಲಕ್ಷ ಕೋಟಿ ರು.ಗಳ (300 ಬಿಲಿಯನ್ ಡಾಲರ್) ಈ ಪಾಲುದಾರಿಕೆ ಅಮೆರಿಕದ ಇತಿಹಾಸದಲ್ಲಿಯೇ ಅತಿ ದೊಡ್ಡದು’ ಎಂದು ಘೋಷಿಸಿದ್ದಾರೆ. ಯುದ್ಧಪೀಡಿತವಾಗಿರುವ ಕೊಲ್ಲಿ ರಾಷ್ಟ್ರಗಳು, ಹೆಚ್ಚುತ್ತಿರುವ ತೈಲ ಬೇಡಿಕೆ, ಆತ್ಮನಿರ್ಭರವಾಗುವ ಭಾರತದ ತುಡಿತ, ಮೇಕ್ ಅಮೆರಿಕ ಗ್ರೇಟ್ ಅಗೇನ್ ಎಂಬ ಟ್ರಂಪ್ ಘೋಷಣೆ.. ಇವೆಲ್ಲವುಗಳ ನಡುವೆ ಈ ಒಪ್ಪಂದ ಹಲವು ರೀತಿಗಳಲ್ಲಿ ಮಹತ್ವ ಪಡೆದಿದೆ.
ಏನಿದು ಯೋಜನೆ?:
ಅಮೆರಿಕ ಫಸ್ಟ್ ರಿಫೈನಿಂಗ್ ಎಂಬ ಕಂಪನಿ ಅಮೆರಿಕ-ಮೆಕ್ಸಿಕೊ ಗಡಿಗೆ ಸಮೀಪವಿರುವ ಟೆಕ್ಸಾಸ್‌ನಲ್ಲಿ ಈ ತೈಲ ಸಂಸ್ಕರಣಾಗಾರವನ್ನು ನಿರ್ಮಿಸಲಿದೆ. ಲೈಟ್ ಶೇಲ್ ಆಯಿಲ್ ಎಂಬ ವಿಶೇಷ ಬಗೆಯ ತೈಲವನ್ನು ಸಂಸ್ಕರಿಸಲು ನಿರ್ಮಿಸಲಾಗುವ ಈ ಘಟಕ ಪ್ರತಿನಿತ್ಯ 1,68,000 ಬ್ಯಾರೆಲ್‌ಗಳಷ್ಟು ಕಚ್ಚಾತೈಲವನ್ನು ಸಿದ್ಧಪಡಿಸುವ ನಿರೀಕ್ಷೆಯಿದೆ. ‘ಯೋಜನೆಗೆ 35-40 ಸಾವಿರ ಕೋಟಿ ರು. ವೆಚ್ಚವಾಗಬಹುದು. ರಿಲಯನ್ಸ್ ಕಂಪನಿ ಇದಕ್ಕಾಗಿ 9 ಅಂಕಿಗಳ ಹೂಡಿಕೆ ಮಾಡಲಿದೆ. 1.15 ಲಕ್ಷ ಕೋಟಿ ರು. ಮೌಲ್ಯದ 120 ಕೋಟಿ ಬ್ಯಾರೆಲ್ ಅಮೆರಿಕನ್ ಲೈಟ್ ಶೇಲ್ ತೈಲವನ್ನು ಇಲ್ಲಿ ಪ್ರಕ್ರಿಯೆಗೊಳಿಸಲಾಗುವುದು’ ಎಂದು ಕಂಪನಿ ತಿಳಿಸಿದೆ. ಒಪ್ಪಂದದ ಪ್ರಕಾರ, ರಿಲಯನ್ಸ್ 20 ವರ್ಷಗಳ ಕಾಲ ಇಲ್ಲಿ ತಯಾರಾಗುವ ತೈಲವನ್ನು ಖರೀದಿಸಲಿದೆ.
ಯೋಜನೆಗೆ ಯಾಕಿಷ್ಟು ಮಹತ್ವ?
ಭಾರತದ ಅಗ್ರಗಣ್ಯ ತೈಲ ಕಂಪನಿಯಾಗಿರುವ ರಿಲಯನ್ಸ್ ಜೊತೆ ಅಮೆರಿಕ ಮಾಡಿಕೊಂಡಿರುವ ಈ ಒಪ್ಪಂದ ಭೂರಾಜಕೀಯ, ಆರ್ಥಿಕತೆ, ಇಂಧನ ಸ್ವಾವಲಂಬನೆ ಮತ್ತು ರಾಜತಾಂತ್ರಿಕವಾಗಿ ಅತಿ ಮಹತ್ವದ್ದು. ಏಕೆಂದರೆ ಪ್ರಸ್ತಾವಿತ ಘಟಕವನ್ನು ವಿಶೇಷವಾಗಿ ಲೈಟ್ ಶೇಲ್ ತೈಲವನ್ನು ಸಂಸ್ಕರಿಸಲು ನಿರ್ಮಿಸಲಾಗುತ್ತಿದೆ. ಲೈಟ್ ಶೇಲ್ ತೈಲ ಎಂದರೆ ಅಮೆರಿಕದಲ್ಲಿ ಹೇರಳವಾಗಿರುವ ಶೇಲ್ ಎಂಬ ಶಿಲೆಗಳಲ್ಲಿ ದೊರೆಯುವ ತೈಲ. ಇದು ಹಗುರವಾಗಿದ್ದು, ಸಂಸ್ಕರಣೆಯೂ ಸುಲಭ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸುಲಭವಾಗಿ ಉತ್ಪಾದಿಸಬಹುದು. ಅಮೆರಿಕದ ಒಟ್ಟು ಕಚ್ಚಾತೈಲ ಉತ್ಪಾದನೆಯ ಶೇ.64 ಇದರಿಂದಲೇ ಬರುತ್ತದೆ. ಹೀಗಾಗಿ ಅಮೆರಿಕ ಜಗತ್ತಿನ ಅತಿದೊಡ್ಡ ತೈಲ ಉತ್ಪಾದಕ ದೇಶವಾಗಿ ಮಾರ್ಪಟ್ಟಿದೆ.
ಆದರೆ ಅಮೆರಿಕದಲ್ಲಿ ಲೈಟ್ ಶೇಲ್ ತೈಲ ಹೇರಳವಾಗಿದ್ದರೂ ದಶಕಗಳ ಹಿಂದೆ ನಿರ್ಮಾಣವಾಗಿರುವ ಸಂಸ್ಕರಣಾಗಾರಗಳು ಆಮದು ಮಾಡಿಕೊಂಡ ಕಚ್ಚಾತೈಲಗಳನ್ನು ಸಂಸ್ಕರಿಸುವ ಸಾಮರ್ಥ್ಯವನ್ನಷ್ಟೇ ಹೊಂದಿವೆ. ತನ್ನಲ್ಲೇ ಇರುವ ಲೈಟ್ ಶೇಲ್ ಸಂಸ್ಕರಿಸುವ ಶಕ್ತಿ ಸದ್ಯ ಅಮೆರಿಕದಲ್ಲಿಲ್ಲ. ಹೊಸ ಯೋಜನೆ ಈ ಸಮಸ್ಯೆಯನ್ನು ಪರಿಹರಿಸಲಿದೆ.
ರಿಲಯನ್ಸ್ ಜೊತೆಗೇ ಒಪ್ಪಂದವೇಕೆ?
ಅಮೆರಿಕ ಈ ಯೋಜನೆಗಾಗಿ ರಿಲಯನ್ಸ್ ಅನ್ನೇ ಆಯ್ದುಕೊಳ್ಳಲು ಸಹ ವಿಶೇಷ ಕಾರಣವಿದೆ. ರಿಲಯನ್ಸ್ ಕೇವಲ ಯಾವುದೋ ಒಂದು ಸಾಮಾನ್ಯ ವಿದೇಶಿ ಹೂಡಿಕೆದಾರ ಕಂಪನಿಯಲ್ಲ. ಇದು ಗುಜರಾತ್‌ನ ಜಾಮನಗರದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡದಾದ ಮತ್ತು ಅತ್ಯಾಧುನಿಕವಾದ ತೈಲ ಸಂಸ್ಕರಣಾಗಾರವನ್ನು ಹೊಂದಿದೆ. ಇದು ಪ್ರತಿನಿತ್ಯ 1.24 ಮಿಲಿಯನ್ ಬ್ಯಾರೆಲ್ ತೈಲವನ್ನು ಸಂಸ್ಕರಿಸುತ್ತಿದ್ದು, ಜಾಗತಿಕ ತೈಲ ವ್ಯಾಪಾರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಉತ್ಕೃಷ್ಟ ಗುಣಮಟ್ಟದ ತೈಲ ಉತ್ಪಾದಿಸುವ ಸಂಸ್ಕರಣಾಗಾರವೊಂದರ ಸಾಮರ್ಥ್ಯವನ್ನು ನೆಲ್ಸನ್ ಕಾಂಪ್ಲೆಕ್ಸಿಟಿ ಇಂಡೆಕ್ಸ್ (ಎನ್‌ಸಿಐ) ಮೂಲಕ ಅಳೆಯಳಾಗುತ್ತದೆ. ರಿಲಯನ್ಸ್ ಜಗತ್ತಿನ ಇತರ ಘಟಕಗಳಿಗಿಂತ ಹೆಚ್ಚು, ಅಂದರೆ 21.1 ಎನ್‌ಸಿಐ ಹೊಂದಿದೆ. ಇತರ ಸಂಸ್ಕರಣಾಗಾರಗಳು ಉತ್ತಮ ಗುಣಮಟ್ಟದ ‘ಸಿಹಿ’ (ಕಡಿಮೆ ಸಲ್ಫರ್) ಕಚ್ಚಾತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದರೆ, ಜಾಮನಗರ ಘಟಕ ಸಂಸ್ಕರಣೆಗೆ ಕಷ್ಟವಾದ, ಕಳಪೆ ಗುಣಮಟ್ಟದ ಕಚ್ಚಾತೈಲವನ್ನೂ ಸಂಸ್ಕರಿಸಬಲ್ಲದು. ಇದೇ ಭಾರತವನ್ನು ಇಂಧನ ಆಮದುದಾರ ದೇಶದಿಂದ ಜಾಗತಿಕವಾಗಿ ಸಂಸ್ಕರಿತ ಇಂಧನದ ರಫ್ತುದಾರ ದೇಶವಾಗಲು ನೆರವಾಗಿದೆ. ಮುಕೇಶ್ ಅಂಬಾನಿಯವರಿಗೆ ‘ಮಾಸ್ಟರ್ ಬಿಲ್ಡರ್’ ಎಂಬ ಅಭಿದಾನವನ್ನೂ ತಂದುಕೊಟ್ಟಿದೆ.
ಈಗ ಟೆಕ್ಸಾಸ್‌ನಲ್ಲಿ ರಿಲಯನ್ಸ್‌ನ ಸಹಯೋಗದಲ್ಲಿ ಇಂಥದ್ದೇ ಘಟಕವನ್ನು ಸ್ಥಾಪಿಸಲು ಅಮೆರಿಕ ಮುಂದಾಗಿದೆ. ಇದರಿಂದ ಅಮೆರಿಕದ ಯೋಜನೆ ಎಷ್ಟು ದೂರದೃಷ್ಟಿಯುಳ್ಳದ್ದು ಮತ್ತು ಅದು ರಿಲಯನ್ಸ್ ಅನ್ನೇ ಆಯ್ದುಕೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗುತ್ತದೆ.
ಅಮೆರಿಕಕ್ಕೇನು ಲಾಭ?
ಅಧ್ಯಕ್ಷ ಟ್ರಂಪ್ ಅಮೆರಿಕವನ್ನು ಜಗತ್ತಿನಲ್ಲೇ ಅತಿ ದೊಡ್ಡ ತೈಲ ಸಂಪದ್ಭರಿತ ದೇಶವಾಗಿ ಮಾರ್ಪಡಿಸುವ ಗುರಿ ಹೊಂದಿದ್ದಾರೆ. ಇತ್ತೀಚೆಗೆ ವೆನಿಜುವೆಲಾ ಮೇಲೆ ನಡೆಸಿದ ದಾಳಿ, ಸದ್ಯ ಇರಾನ್ ಮೇಲೆ ಸಾರಿರುವ ಸಮರದ ಹಿಂದೆಯೂ ಇದೇ ಕಾರಣವಿದೆ. ಹೊಸ ಯೋಜನೆ ಟ್ರಂಪ್ ಕನಸಿಗೆ ನೀರೆರೆಯಲಿದೆ. ಅಮೆರಿಕದಲ್ಲಿ ಹೇರಳವಾಗಿರುವ ಲೈಟ್ ಶೇಲ್ ತೈಲವನ್ನು ಸ್ವದೇಶದಲ್ಲಿಯೇ ಸಂಸ್ಕರಿಸಲಾಗುವುದರಿಂದ, ಕಚ್ಚಾತೈಲವನ್ನು ರಫ್ತು ಮಾಡಿ, ಸಂಸ್ಕರಿತ ತೈಲವನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲವಾಗುತ್ತದೆ.
ಈ ಯೋಜನೆಯಿಂದ ಅಮೆರಿಕಕ್ಕೆ ಆರ್ಥಿಕವಾಗಿಯೂ ಲಾಭವಾಗಲಿದೆ. ಬೃಹತ್ ಘಟಕದ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಘಟಕ ನಿರ್ಮಾಣವಾದ ನಂತರವೂ ವಿವಿಧ ಉದ್ಯೋಗಗಳ ಅವಕಾಶ ತೆರೆದುಕೊಳ್ಳಲಿದೆ. ಇರಾನ್ ಜೊತೆ ಸಂಘರ್ಷ ಸೇರಿದಂತೆ ಜಾಗತಿಕ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಈ ಘಟಕ ದೇಶೀಯ ಇಂಧನ ಬೆಲೆಯನ್ನು ಸ್ಥಿರಗೊಳಿಸಲಿದೆ. ವಿದೇಶಗಳಿಂದ ಹೆಚ್ಚು ಹೆಚ್ಚು ಹೂಡಿಕೆಯನ್ನು ಆಕರ್ಷಿಸಿ, ವಿದೇಶ ನೀತಿಗೂ ಕೊಡುಗೆ ನೀಡಲಿದೆ.
ಭಾರತಕ್ಕಿದೆ ಪ್ರಯೋಜನ:
ಭಾರತ ಜಗತ್ತಿನಲ್ಲೇ ಅತಿ ದೊಡ್ಡ ತೈಲ ಆಮದುದಾರ ದೇಶ. ಪ್ರಸ್ತುತ ಕತಾರ್, ಸೌದಿ ಅರೇಬಿಯಾ, ಯುಎಇ ಮೊದಲಾದ ಕೊಲ್ಲಿ ರಾಷ್ಟ್ರಗಳ ಮೇಲೆ ಹೆಚ್ಚಿನ ಅವಲಂಬನೆಯಿದೆ. ಪ್ರಸ್ತುತ ಈ ರಾಷ್ಟ್ರಗಳು ಯುದ್ಧಪೀಡಿತವಾಗಿರುವುದರಿಂದ ದೇಶಕ್ಕೆ ತೈಲ ಮತ್ತು ಅನಿಲ ಕೊರತೆ ಅನುಭವಕ್ಕೆ ಬರುತ್ತಿದೆ. ಭಾರತ ಈ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ಸಹ ಕಚ್ಚಾತೈಲವನ್ನಷ್ಟೆ, ಸಂಸ್ಕರಿತ ತೈಲವನ್ನಲ್ಲ. ರಿಲಯನ್ಸ್ ಕಂಪನಿ ಅಮೆರಿಕದ ಜೊತೆ 20 ವರ್ಷಗಳ ಕಾಲ ಇಂಧನ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಅಂದರೆ, 2 ದಶಕಗಳ ಕಾಲ ಅಮೆರಿಕದ ಶುದ್ಧ, ಸಂಸ್ಕರಿತ ಇಂಧನ ಭಾರತಕ್ಕೆ ಸುಗಮವಾಗಿ ಹರಿದುಬರಲಿದೆ. ಇದರಿಂದ ಕಚ್ಚಾತೈಲವನ್ನು ಖರೀದಿಸಿ, ಅದನ್ನು ಸಂಸ್ಕರಿಸುವ ಕೆಲಸ ಮತ್ತು ವೆಚ್ಚ ಎರಡೂ ಕಡಿತವಾಗಲಿದೆ.
ಈ ಬೃಹತ್ ಪಾಲುದಾರಿಕೆ ಶಕ್ತಿ ಮತ್ತು ವ್ಯಾಪಾರ ವಲಯದಲ್ಲಿ ಅಮೆರಿಕ ಜೊತೆಗಿನ ದ್ವಿಪಕ್ಷೀಯ ಸಂಬಂಧಕ್ಕೂ ಪುಷ್ಟಿ ನೀಡಲಿದೆ. ಅಮೆರಿಕ ಮಾರುಕಟ್ಟೆಯಲ್ಲಿ ರಿಲಯನ್ಸ್ ನಿರ್ಣಾಯಕ ಪಾತ್ರ ವಹಿಸಲಿರುವುದರಿಂದ, ಇನ್ನಷ್ಟು ತಂತ್ರಜ್ಞಾನ, ಹೂಡಿಕೆ ಹಾಗೂ ಇತರ ಕ್ಷೇತ್ರಗಳಲ್ಲಿ ಭಾರತಕ್ಕೆ ಬಾಗಿಲು ತೆರೆಯಲಿದೆ. ಜಾಗತಿಕವಾಗಿ ಉದ್ಯಮಗಳನ್ನು ವಿಸ್ತರಿಸುವ ಮತ್ತು ತೈಲೋದ್ಯಮದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಅಂಬಾನಿಯವರ ಕಾರ್ಯತಂತ್ರಕ್ಕೂ ಹಲವು ರೀತಿಗಳಲ್ಲಿ ನೆರವು ನೀಡಲಿದೆ.
ಒಟ್ಟಿನಲ್ಲಿ ಭಾರತದ ಬೃಹತ್ ಕಂಪನಿಯ ಜೊತೆ ಅಮೆರಿಕ ನಿರ್ಮಿಸಲು ಮುಂದಾಗಿರುವ ಹೊಸ ತೈಲ ಸಂಸ್ಕರಣಾಗಾರ ಎರಡೂ ದೇಶಗಳಿಗೆ ಲಾಭದಾಯಕ ಎಂಬುದು ಸ್ಪಷ್ಟ. ಅಮೆರಿಕಕ್ಕೆ ದೇಶೀಯ ಸಂಸ್ಕರಣಾ ಮೂಲಸೌಕರ್ಯದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಇಂಧನ ಸ್ವಾವಲಂಬನೆಗೆ ಶಕ್ತಿ ತುಂಬಿದರೆ, ಭಾರತಕ್ಕೆ ರಷ್ಯಾ ಹಾಗೂ ಮಧ್ಯಪ್ರಾಚ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಅಮೆರಿಕದಿಂದ ದೀರ್ಘಕಾಲ ಸಂಸ್ಕರಿತ ತೈಲ ಪಡೆಯಲು ಅವಕಾಶ ನೀಡುತ್ತದೆ. ಭಾರತದ ಶಕ್ತಿ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುವುದಲ್ಲದೆ, ಭಾರತದ ಉದ್ಯಮಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನೂ ಹೆಚ್ಚಿಸಲಿದೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ದಿನೇದಿನೇ ತೀವ್ರವಾಗುತ್ತಿರುವ ಸಂಘರ್ಷ, ಕೊಲ್ಲಿ ರಾಷ್ಟ್ರಗಳಿಗೂ ಹಬ್ಬಿರುವ ಯುದ್ಧದ ಕಾವು, ಭಾರತ ಸೇರಿದಂತೆ ಹಲವು ದೇಶಗಳಿಗೆ ಎದುರಾಗಿರುವ ಇಂಧನ ಅಭಾವ.. ಈ ಎಲ್ಲ ವಿದ್ಯಮಾನಗಳ ನಡುವೆ ಸದ್ದಿಲ್ಲದೆ ನಡೆದಿರುವ ಈ ಒಪ್ಪಂದ ಮುಕೇಶ್ ಅಂಬಾನಿಯವರ ಚಾಣಾಕ್ಷ ಉದ್ಯಮಶೀಲತೆಗೆ ಉದಾಹರಣೆಯೂ ಹೌದು, ಜಾಗತಿಕವಾಗಿ ದೇಶಗಳು ಕಾಲಕಾಲಕ್ಕೆ ಆಡುವ ಚದುರಂಗದಾಟಕ್ಕೆ ಸೂಕ್ಷ್ಮ ನಿದರ್ಶನವೂ ಹೌದು.


