Asianet Suvarna News Asianet Suvarna News

BBMP: ಮಹದೇವಪುರದಲ್ಲಿ ಇಂದಿನಿಂದ ಡೆಮಾಲಿಷನ್

  • ಮಹದೇವಪುರ ವ್ಯಾಪ್ತಿ ಸರ್ವೇ ಕಾರ‍್ಯ ಪೂರ್ಣ:
  • ಇಂದಿನಿಂದ ಆಪರೇಷನ್‌ ಡೆಮಾಲಿಷನ್‌ ಆರಂಭ
  • -2 ದಿನದಿಂದ ರಾಜಕಾಲುವೆ ಒತ್ತುವರಿ ಸರ್ವೇ ಪೂರ್ಣಗೊಳಿಸಿದ ಬಿಬಿಎಂಪಿ
  • ದೊಡ್ಡ ಕಟ್ಟಡಗಳ ತೆರವು
BBMP Demolition in Mahadevpur from today bengaluru rav
Author
First Published Sep 19, 2022, 6:45 AM IST

ಬೆಂಗಳೂರು (ಸೆ.19) : ಮಹದೇವಪುರ ವಲಯದಲ್ಲಿ ನಡೆದಿರುವ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆಯನ್ನು ಸೋಮವಾರದಿಂದ (ಸೆ.19) ತೀವ್ರಗೊಳಿಸಲು ಬಿಬಿಎಂಪಿ ನಿರ್ಧರಿಸಿದ್ದು, ಒತ್ತುವರಿ ಮಾಡಿರುವ ದೊಡ್ಡ ಕಟ್ಟಡಗಳ ತೆರವು ಮಾಡಲಿದೆ. ಈ ಕುರಿತು ವಿವರಣೆ ನೀಡಿದ ಮಹದೇವಪುರ ವಲಯದ ಆಯುಕ್ತ ಡಾ ತ್ರಿಲೋಕಚಂದ್ರ, ಕಳೆದ ಎರಡು ದಿನದಿಂದ ಮಹದೇವಪುರ ವಲಯದಲ್ಲಿ ಎಂಟು ಸರ್ವೇ ಅಧಿಕಾರಿಗಳಿಂದ ರಾಜಕಾಲುವೆ ಒತ್ತುವರಿ ಸರ್ವೇ ಕಾರ್ಯ ನಡೆಸಲಾಗಿದೆ. ಈವರೆಗೆ 40 ಕಡೆಗಳಲ್ಲಿ ಆಗಿದ್ದ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ. ಹೊಸದಾಗಿ 48 ಕಡೆ ಮಾರ್ಕಿಂಗ್‌ ಮಾಡಲಾಗಿದ್ದು, ಈವರೆಗೆ ಖಾಲಿ ನಿವೇಶನ ಹಾಗೂ ಕಾಂಪೌಂಡ್‌ ಸೇರಿದಂತೆ ಸಣ್ಣ ಪ್ರಮಾಣದ ಒತ್ತುವರಿ ತೆರವು ಮಾಡಿ ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಬೇಕಾದ ಕೆಲಸ ಮಾಡಲಾಯಿತು. ಸೋಮವಾರದಿಂದ ದೊಡ್ಡ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

 

Bengaluru: ಆಪರೇಷನ್‌ ಡೆಮಾಲಿಷ್‌ಗೆ ಹೆದರಿ ನಿವಾಸಿಗಳಿಂದಲೇ ಒತ್ತುವರಿ ತೆರವು..!

ಯಾವುದೇ ಪ್ರಭಾವಕ್ಕೆ ಒಳಗಾಗುವ ಪ್ರಶ್ನೆ ಇಲ್ಲ. ರಾಜಕಾಲುವೆ ಒತ್ತುವರಿ ಮಾಡಿಕೊಂಡ ಎಲ್ಲವನ್ನೂ ತೆರವು ಮಾಡುವ ಮೂಲಕ ನೀರು ಸರಾಗವಾಗಿ ರಾಜಕಾಲುವೆಯಿಂದ ಕೆರೆಗೆ ಸೇರಬೇಕು. ಅದಕ್ಕೆ ಯಾವುದೇ ಅಡೆತಡೆ ಉಂಟಾಗದಂತೆ ಕ್ರಮ ಕೈಗೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ರೈನ್‌ ಬೋ ಲೇಔಟ್‌ ಸೇರಿದಂತೆ ಹಲವು ಬಡಾವಣೆ ಸಂಸ್ಥೆಗಳಿಗೆ ಕಂದಾಯ ಇಲಾಖೆಯಿಂದ ನೋಟಿಸ್‌ ನೀಡಲಾಗಿದೆ. ನೋಟಿಸ್‌ ನೀಡಿ ಏಳು ದಿನ ಸೋಮವಾರಕ್ಕೆ ಮುಕ್ತಾಯಗೊಳ್ಳಲಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಸೋಮವಾರ ಯಾವ ಸೂಚನೆ ನೀಡುತ್ತಾರೋ ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಒತ್ತುವರಿದಾರರಿಂದಲೇ ವೆಚ್ಚ ವಸೂಲಿ: ಪಾಲಿಕೆ:

ರಾಜಕಾಲುವೆ ಒತ್ತುವರಿ ತೆರವಿಗೆ ಆದ ವೆಚ್ಚವನ್ನು ಒತ್ತುವರಿದಾರರಿಂದಲೇ ವಸೂಲಿ ಮಾಡಲು ಉದ್ದೇಶಿಸಲಾಗಿದೆ. ಈ ತೆರವು ಕಾರ್ಯಚರಣೆಗೆ ಜೆಸಿಬಿ, ಹಿಟಾಚಿ ಯಂತ್ರ, ಕಾರ್ಮಿಕರು ಸೇರಿದಂತೆ ಪ್ರತಿ ದಿನ ಲಕ್ಷಾಂತರ ರುಪಾಯಿ ವೆಚ್ಚವಾಗುತ್ತಿದೆ. ಈ ವೆಚ್ಚವನ್ನು ಒತ್ತುವರಿದಾರರಿಂದಲೇ ವಸೂಲಿ ಮಾಡಲಾಗುವುದು ಎಂದು ತ್ರಿಲೋಕಚಂದ್ರ ಮಾಹಿತಿ ನೀಡಿದರು. ಬೆಂಗ್ಳೂರಲ್ಲಿ ಒತ್ತುವರಿ ತೆರವು ಕಾರ್ಯದಲ್ಲಿ ರಾಜಿ ಇಲ್ಲ: ಸಿಎಂ ಬೊಮ್ಮಾಯಿ

Follow Us:
Download App:
  • android
  • ios