ಬೆಂಗ್ಳೂರಲ್ಲಿ ಒತ್ತುವರಿ ತೆರವು ಕಾರ್ಯದಲ್ಲಿ ರಾಜಿ ಇಲ್ಲ: ಸಿಎಂ ಬೊಮ್ಮಾಯಿ
ಎಲ್ಲೆಲ್ಲಿ ರಾಜಕಾಲುವೆ ಒತ್ತವರಿಯಾಗಿದೆ, ಕಾಲುವೆಗಳ ಮೇಲೆ ಯಾರಾರಯರು ಕಟ್ಟಡ ನಿರ್ಮಾಣವಾಗಿದೆಯೋ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು. ಯಾವುದೇ ರೀತಿಯ ಒತ್ತಡಕ್ಕೂ ಒಳಗಾಗಬಾರದು: ಸಿಎಂ ಬೊಮ್ಮಾಯಿ ಸೂಚನೆ
ವಿಧಾನಸಭೆ(ಸೆ.15): ರಾಜಕಾಲುವೆ ಒತ್ತುವರಿ ತೆರವು ಕಾರ್ಯದಲ್ಲಿ ಸರ್ಕಾರ ರಾಜಿಯಾಗುವುದಿಲ್ಲ. ಮುಲಾಜಿಲ್ಲದೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜೊತೆಗೆ ಎಲ್ಲೆಲ್ಲಿ ಕಟ್ಟಿರುವ ಮನೆಗಳನ್ನು ಉಳಿಸಿ ರಾಜಕಾಲುವೆ ನಿರ್ಮಾಣ ಮಾಡಲು ಸಾಧ್ಯವಿದೆ ಅಂತಹ ಕಡೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಕೂಡ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸದನದಲ್ಲಿ ಗುರುವಾರ ನಡೆದ ಬೆಂಗಳೂರಿನಲ್ಲಿ ನೆರೆ ವಿಚಾರದ ಚರ್ಚೆಗೆ ಉತ್ತರ ನೀಡಿದ ಅವರು, ಎಲ್ಲೆಲ್ಲಿ ರಾಜಕಾಲುವೆ ಒತ್ತವರಿಯಾಗಿದೆ, ಕಾಲುವೆಗಳ ಮೇಲೆ ಯಾರಾರಯರು ಕಟ್ಟಡ ನಿರ್ಮಾಣವಾಗಿದೆಯೋ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು. ಯಾವುದೇ ರೀತಿಯ ಒತ್ತಡಕ್ಕೂ ಒಳಗಾಗಬಾರದು ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಅಧಿಕಾರಿಗಳು, ಬಿಬಿಎಂಪಿ ವಲಯ ಆಯುಕ್ತರು ಹಾಗೂ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ.
ಆಪರೇಶನ್ ರಾಜಕಾಲುವೆ: ಶ್ರೀಮಂತರ ಪರವಾಗಿ ಬಿಬಿಎಂಪಿ ಕೆಲಸ?
ಇದರ ನಡುವೆ ಕಟ್ಟಿರುವ ಮನೆಯನ್ನು ಕೆಡವುದೇ ದೊಡ್ಡ ಸಾಧನೆಯಲ್ಲ. ಮನೆಗಳನ್ನು ಉಳಿಸಿ ರಾಜಕಾಲುವೆಯನ್ನು ಅಕ್ಕ ಪಕ್ಕದಲ್ಲಿ ಮಾಡಲು ಸಾಧ್ಯವಿದ್ದರೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸಲು ಕೂಡ ಸೂಚಿಸಿದ್ದೇನೆ ಎಂದು ಹೇಳಿದರು.
ಹಿಂದಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಳೆಯಾದಾಗ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ, ಈ ವರ್ಷ ಇತಿಹಾಸದಲ್ಲೇ ಅತಿ ದೊಡ್ಡ ಮಳೆ ಬಿದ್ದಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಂತಹ ಮಳೆಯಾದರೆ ಬೆಂಗಳೂರು ಮಾತ್ರವಲ್ಲ ಮುಂಬೈ ಸೇರಿದಂತೆ ದೇಶದ ಎಲ್ಲ ದೊಡ್ಡ ದೊಡ್ಡ ಮೆಟ್ರೋಪಾಲಿಟನ್ ನಗರಗಳಲ್ಲೂ ಪ್ರವಾಹ ಆಗುತ್ತದೆ. ಈಗ ಈ ಪ್ರವಾಹ ಸ್ಥಿತಿ ಉಂಟಾಗಲು ಯಾರು ಕಾರಣ ಎಂದು ಹುಡುಕುತ್ತಾ ಕೂತರೆ ಅದಕ್ಕೆ ಕೊನೆಯೇ ಸಿಗುವುದಿಲ್ಲ. ಅದರ ಬದಲು ಇಂದಿನ ಸಮಸ್ಯೆ ಬಗೆಹರಿಸುವುದು ಹೇಗೆ ಮತ್ತು ಮುಂದೆ ಇಂತಹ ಸಮಸ್ಯೆಯಾಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕಾದ್ದು ನಮ್ಮ ಆತ್ಮಸಾಕ್ಷಿಯ ವಿಚಾರವಾಗಿದೆ ಎಂದರು.
ರಾಜ ಕಾಲುವೆ ಅಭಿವೃದ್ಧಿ
ರಾಜಕಾಲುವೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಮಾಡಲೇಬೇಕಾಗಿದೆ. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದು ಪೂರ್ಣಗೊಂಡ ಬಳಿಕ ಬಾಕಿ ಇರುವ ರಾಜಕಾಲುವೆ ಅಭಿವೃದ್ದಿ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳುತ್ತೇವೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.