ಸಂಪತ್‌ ತರೀಕೆರೆ

ಬೆಂಗಳೂರು(ಆ.07): ಅರ್ಕಾವತಿ ಬಡಾವಣೆ ನಿರ್ಮಿಸಲು 337.10 ಎಕರೆ ಭೂಮಿ ಕೊಟ್ಟು ತಮಗೆ 50:50 ಅನುಪಾತದಲ್ಲಿ ಅಭಿವೃದ್ಧಿಗೊಳಿಸಲಾದ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಕೋರ್ಟ್‌ನಲ್ಲಿ ದಾವೆ ಹೂಡಿರುವ ರೈತರೊಂದಿಗೆ ರಾಜೀ ಸಂಧಾನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ನ್ಯಾಯಲಯದ ಹೊರಗೆ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ಅರ್ಕಾವತಿ ಬಡಾವಣೆ ನೀಡಿದ ಭೂಮಿಯ ಪೈಕಿ 337.10 ಎಕರೆ ಜಾಗದ ಪರಿಹಾರ ಪಡೆಯುವ ಬಗ್ಗೆ ಭೂ ಮಾಲಿಕರು ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಸುಮಾರು 14 ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಇದರಿಂದಾಗಿ ನಿಗದಿತ ಯೋಜನೆಯೂ ಪೂರ್ಣಗೊಂಡಿಲ್ಲ ಹಾಗೂ ಭೂಮಾಲಿಕರಿಗೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಡಿಎ ಆಯುಕ್ತ ಡಾ. ಮಹದೇವ್‌ ಅವರು ರಾಜೀ ಸಂಧಾನಕ್ಕೆ ಮುಂದಾಗಿದ್ದು ಭೂಮಾಲಿಕ ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ಶ್ರೀರಾಮಪುರ ಮತ್ತು ಸಂಪಿಗೆಹಳ್ಳಿಯ ಭೂ ಮಾಲಿಕ ರೈತರಲ್ಲಿ ಹಲವರೊಂದಿಗೆ ಬಿಡಿಎ ಆಯುಕ್ತರು ಈಗಾಗಲೇ ಚರ್ಚಿಸಿದ್ದು, ಮೌಖಿಕ ಸಮ್ಮತಿ ಸಿಕ್ಕಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕೊರೊನಾ ಮಧ್ಯೆಯೇ ಬಿಡಿಎದಿಂದ 2 ನೇ ಬಿಡ್ಡಿಂಗ್; ಸೈಟ್‌ ಮಾರಾಟಕ್ಕೆ ಇ- ಮ್ಯಾಪಿಂಗ್..!

ನ್ಯಾಯಾಲಯದ ಹೊರಗೆ ರಾಜೀ ಸಂಧಾನಕ್ಕೆ ಒಪ್ಪುವ ಭೂ ಮಾಲಿಕರಿಗೆ 60:40 ಅನುಪಾತದಲ್ಲಿ ಅಭಿವೃದ್ಧಿಗೊಳಿಸಲಾದ ಬಡಾವಣೆಯಲ್ಲಿ ಶೇ.40 ರಷ್ಟು ಜಾಗವನ್ನು ನೀಡುವುದರ ಜತೆಗೆ ಎರಡು ತಿಂಗಳಲ್ಲಿ ರೈತರಿಗೆ ಭೂಮಿಯ ರಿಜಿಸ್ಪ್ರೇಷನ್‌ ಮಾಡಿಕೊಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ರೈತರು ಬಿಡಿಎಗೆ ಅಲೆದಾಡದಂತೆ ಎಲ್ಲವೂ ಏಕಗವಾಕ್ಷಿ ಮಾದರಿಯಲ್ಲೇ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಬಿಡಿಎ ಆಯುಕ್ತರು ನೀಡಿದ್ದಾರೆ ಎಂದು ಜಕ್ಕೂರಿನ ಭೂ ಮಾಲಿಕರಾದ ರೇಣುಕಾ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅರ್ಕಾವತಿ ಬಡಾವಣೆ ರಚಿಸಲು ಜಕ್ಕೂರು, ಸಂಪಿಗೆಹಳ್ಳಿ, ಥಣಿಸಂದ್ರ, ಕೆಂಪಾಪುರ, ನಾಗವಾರ, ರಾಜೇನಹಳ್ಳಿ ಸೇರಿದಂತೆ 16 ಗ್ರಾಮಗಳ 1766.07 ಎಕರೆಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 967 ಎಕರೆ ವಿಸ್ತೀರ್ಣದಲ್ಲಿ 459 ಎಕರೆಯಲ್ಲಿ ಬಡಾವಣೆ ಮಾಡಲಾಗಿದ್ದು, ಸುಮಾರು 8286 ನಿವೇಶನಗಳನ್ನು ರಚಿಸಲಾಗಿದೆ. ಅದರಲ್ಲಿ 883 ಮೂಲೆ ನಿವೇಶನಗಳನ್ನು ರಚಿಸಲಾಗಿದೆ. ಜತೆಗೆ 45 ಎಕರೆ ಸಗಟು ಹಂಚಿಕೆ ಮಾಡಲಾಗಿದ್ದು, 132 ಎಕರೆ ರೆವೆನ್ಯೂ ಆವೃತ ಪ್ರದೇಶವಾಗಿದೆ. ಉಳಿದಂತೆ 337.10 ಎಕರೆ ವಿಸ್ತೀರ್ಣದ ಜಾಗದ ಪರಿಹಾರದ ಕುರಿತು ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದರಲ್ಲಿ ಕಂದಾಯ ಬಡಾವಣೆಗಳು ಹಾಗೂ ಅಭಿವೃದ್ಧಿಪಡಿಸಿರುವ ಪ್ರದೇಶಗಳಿವೆ.

ಅರ್ಕಾವತಿ ಬಡಾವಣೆ ವಿವರ:

ದಾಸರಹಳ್ಳಿ, ಭೈರತಿಖಾನೆ, ಚೇಳಕೆರೆ, ಗೆದ್ದಲಹಳ್ಳಿ, ಕೆ.ನಾರಾಯಣಪುರ, ರಾಚೇನಹಳ್ಳಿ, ಥಣಿಸಂದ್ರ, ಅಮೃತಹಳ್ಳಿ, ಜಕ್ಕೂರು, ಕೆಂಪಾಪುರ, ಸಂಪಿಗೆಹಳ್ಳಿ, ಶ್ರೀರಾಂಪುರ, ವೆಂಕಟೇಶಪುರ, ಹೆಣ್ಣೂರು, ಹೆಬ್ಬಾಳ, ನಾಗವಾರ ಗ್ರಾಮಗಳು ಅರ್ಕಾವತಿ ಬಡಾವಣೆ ವ್ಯಾಪ್ತಿಗೆ ಬರಲಿವೆ.