ಬೆಂಗಳೂರಿನ ಬಸವ ಸಂಸ್ಕೃತಿ ಅಭಿಯಾನ ಸಮಾರೋಪಕ್ಕೆ ಸಿಎಂ ಸಿದ್ದರಾಮಯ್ಯನವರು ಹಾಜರಾಗಬಾರದು ಎಂದು ವೀರಶೈವ ಲಿಂಗಾಯತ ಮಠಾಧೀಶರು ಎಚ್ಚರಿಸಿದ್ದಾರೆ. ಇದು ಸಮಾಜ ವಿಭಜಿಸುವವರ ಕಾರ್ಯಕ್ರಮವಾಗಿದ್ದು, ಸಿಎಂ ಭಾಗವಹಿಸಿದರೆ ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿಯಾಗಲಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಬಾಗಲಕೋಟೆ (ಅ.5): ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಸಿಎಂ ಹೋದರೆ ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿಯಾಗಲಿದೆ ಎಂದು ವೀರಶೈವ ಲಿಂಗಾಯತ ಮಠಾಧೀಶರು, ಸ್ವಾಮೀಜಿಗಳು ಎಚ್ಚರಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಕುರಿತು ಬಾಗಲಕೋಟೆಯಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ದಿಂಗಾಲೇಶ್ವರ ಸ್ವಾಮೀಜಿ, ಭಾನುವಾರ ಅರಮನೆ ಮೈದಾನದಲ್ಲಿ ನಡೆಯುವುದು ಪ್ರತ್ಯೇಕ ಲಿಂಗಾಯತವಾದಿಗಳ ಕಾರ್ಯಕ್ರಮವಾಗಿದೆ. ಬಹುಶಃ ಇದು ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿ ಹಾಡುತ್ತೆ ಎನ್ನುವ ಪೂರ್ವ ಸೂಚನೆ ಕಾಣುತ್ತಿದೆ.

ಇದನ್ನೂ ಓದಿ: 'ಬಸವಣ್ಣವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿಲ್ಲ' ಹೊಸ ವಿವಾದ ಸೃಷ್ಟಿಸಿದ ಯತ್ನಾಳ್!

 ಸಿಎಂ ಅವರ ಬಗ್ಗೆ ಗೌರವ ಇದೆ. ಆ ಟೀಂನಿಂದ ಹಿಂದೆಯೂ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ವಿ. ಈಗಲೂ ಅಂತರ ಕಾಯ್ದುಕೊಳ್ಳಿ ಎಂದು ಹೇಳುತ್ತೇವೆ. ಸಮಾಜ ವಿಘಟನೆ ಮಾಡುತ್ತಿರುವ ಗುಂಪಿನಲ್ಲಿ ರಾಜ್ಯದ ಸಿಎಂ ಪಾಲ್ಗೊಳ್ಳೋದು ಸೂಕ್ತವಲ್ಲ ಎಂದು ಹೇಳಿದರು.

ಬಸವ ಸಂಸ್ಕೃತಿ ಸಮಾರೋಪ ಸಮಾರಂಭಕ್ಕೆ ಸಿದ್ದರಾಮಯ್ಯ ಹೋದರೆ ಸಿಎಂ ಸ್ಥಾನಕ್ಕೆ ಕುತ್ತು ಬರುತ್ತೆ ಎಂದು ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಹೇಳಿದರು.