ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿಲ್ಲ, ಬದಲಿಗೆ ಹಿಂದೂ ಸಮಾಜದ ಮೌಢ್ಯಗಳ ವಿರುದ್ಧ ಹೋರಾಡಿದ್ದಾರೆ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. 

ಚಿಕ್ಕೋಡಿ (ಸೆ.20): ಬಸವಣ್ಣನವರು ಹಿಂದೂ ಸಮಾಜದಲ್ಲಿನ ಮೌಢ್ಯಗಳ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿದ್ದಾರೆ. ಅವರು ಲಿಂಗಾಯಿತ ಧರ್ಮವನ್ನು ಸ್ಥಾಪನೆಯ ಮಾಡಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಚರ್ಚೆ ಹುಟ್ಟುಹಾಕಿದರು.

ಜಾತಿಗಣತಿ ವಿಚಾರವಾಗಿ ಇಂದು ಚಿಕ್ಕೋಡಿಯಲ್ಲಿ ಮಾತನಾಡಿದ ಯತ್ನಾಳ್ ಅವರು, ಈಗಾಗಲೇ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ವಿಚಾರದಲ್ಲಿ 400ರೂ ಕೋಟಿ ರೂಪಾಯಿ ನೀರಿನಲ್ಲಿ ಹಾಕಿದ್ದಾರೆ. ಜಾತಿ ಗಣತಿಯ ವಿಚಾರದಲ್ಲಿ ಸರ್ಕಾರ ತನ್ನ ಅವಧಿಯನ್ನ ಮುಗಿಸುವ ರೀತಿ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜಾತಿಗಳ ಮುಂದೆ 'ಕ್ರಿಶ್ಚಿಯನ್' ಹಿಂದೂ ಧರ್ಮ ವಿಭಜಿಸುವ ಸಂಚು?

ಜಾತಿ ಗಣತಿಯಲ್ಲಿ ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಎಂದು ಜಾತಿ ಗಣತಿ ಕಾಲಮ್ನಲ್ಲಿ ನೋಂದಣಿ ಮಾಡಿದ್ದಾರೆ. ಹಿಂದೂ ಸಮಾಜ ವಿಭಜಿಸುವುದಕ್ಕೆ ಅಲ್ಪಸಂಖ್ಯಾತರು ಷಡ್ಯಂತ್ರ ನಡೆಸಿದ್ದಾರೆ. ಈ ಸರ್ಕಾರದದಲ್ಲಿ ಅವರೇ ಹೆಚ್ಚಿರುವುದರಿಂದ ಕಾಂಗ್ರೆಸ್ ವರಿಷ್ಠ ಕೇಂದ್ರ ಮಂಡಳಿಯಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿದೆ ಎಂದು ಆರೋಪಿಸಿದ ಯತ್ನಾಳ್ ಅವರು, ಇದಕ್ಕೆ ಯಾರೂ ಮನ್ನಣೆ ನೀಡುವುದಿಲ್ಲ ಎಂದರು.

ಧರ್ಮದ ಎಂದರೆ 'ಹಿಂದೂ' ಎಂದು ಬರೆಸಿ:

ಕೆಲವು ಮಠಾಧೀಶರು ವೀರಶೈವ ಲಿಂಗಾಯತ ಎಂದು ಜಾತಿಗಣತಿಯಲ್ಲಿ ಉಲ್ಲೇಖಿಸಿದೆಯೆಂದು ಹೇಳುತ್ತಾರೆ. ಆದ್ರೆ ಕೇಂದ್ರ ಸರ್ಕಾರ ವೀರಶೈವ ಲಿಂಗಾಯತ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮಾಡುವವರೆಗೆ ಈ ರೀತಿ ನಾವು ಬರೆಸುವುದರಿಂದ ಏನೂ ಪ್ರಯೋಜನವಿಲ್ಲ. ಕೆಲವು ಮೂರ್ಖರು ಲಿಂಗಾಯತ ಸಮುದಾಯವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು. ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು ಎಂದರು.

ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿಲ್ಲ:

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್ ಅವರು, ಬಸವಣ್ಣನವರು ಲಿಂಗಾಯತ ಧರ್ಮವನ್ನು ಮಾಡಿಲ್ಲ. ಅವರು ಹಿಂದೂ ಸಮಾಜದಲ್ಲಿನ ಮೌಢ್ಯಗಳ ವಿರುದ್ಧ ಹೋರಾಟ ಮಾಡಿದ್ದಾರೆ. 'ಲಿಂಗಾಯತ ಧರ್ಮ' ಎನ್ನುವುದು ಕೆಲವು ಕಂಪನಿಗಳು ತಯಾರು ಮಾಡಿವೆ ಎಂದು ಕಿಡಿಕಾರಿದರು.

2A ಮೀಸಲಾತಿ ನಿರಂತರವಾಗಿ ನಡೆಯುತ್ತದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟದಲ್ಲಿ 2 ಸೀ 2ಡಿ ಎಂಬ ವಿಚಾರಣೆ ನಡೆಯುತ್ತಿದೆ. 'ವೀರಶೈವ ಲಿಂಗಾಯತ' ಎಂದು ಬರೆಸಿದರೆ ಮೀಸಲಾತಿ ಸಿಗುವುದಿಲ್ಲ. 'ಹಿಂದೂ ಲಿಂಗಾಯತ ಪಂಚಮಸಾಲಿ ಎಂದು ಬರೆಸಿದರೆ ಮೀಸಲಾತಿ ಸಿಗುತ್ತದೆ. ಕೆಲವು ಲಿಂಗಾಯತರು 2ಎ ದಲ್ಲಿ ಸೇರಿದ್ದಾರೆ. ಸರ್ಕಾರದಲ್ಲಿ ಮೀಸಲಾತಿಗೆ ಸೇರಿದವರು ಹಿಂದೂ ಎಂದು ಉಲ್ಲೇಖಿಸಿ ತಮ್ಮ ಉಪಜಾತಿಯನ್ನು ಬರೆಸಿದ್ದಾರೆ. ವೀರಶೈವ ಲಿಂಗಾಯತ ಇದು ಧರ್ಮ ಅಂತ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎಂದರು.

ಹಿಂದೂಗಳ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ:

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಿಂದೂಗಳ ಮೇಲೆ ದಬ್ಬಾಳಿಕೆ ದಿನೇದಿನೆ ಹೆಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳರು. ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದ ಮುಸ್ಲಿಮರ ದೌರ್ಜನ್ಯವೂ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರದ ಕಚೇರಿಗಳಲ್ಲಿ ಆ ಸಮುದಾಯವೇ ತುಂಬಿಕೊಂಡಿದೆ. ಆಫೀಸ್‌ನಲ್ಲಿ ಆಯಾಕಟ್ಟಿನ ಜಾಗದಲ್ಲಿ ಅವರೇ ಇದ್ದಾರೆ. ಸಿಎಂ ಸಿದ್ದರಾಮಯ್ಯರ ಹಿಂದೂ ಧರ್ಮದ ಮೇಲಿನ ದ್ವೇಷದಿಂದ ಜನ ರೊಚ್ಚಿಗೆದ್ದಿದ್ದಾರೆ. ನಾನು ಹಿಂದೂಗಳ ಪರವಾಗಿ ಗಟ್ಟಿಯಾಗಿ ನಿಂತಿರುವುದರಿಂದ ರಾಯಚೂರು ಮದ್ದೂರುಗೆ ಹೋದಾಗ ಅಲ್ಲಿ ಲಿಂಗಾಯತರ ಹೊರತಾಗಿಯೂ ಸಾವಿರಾರು ಜನ ಸೇರಿದ್ದರು. ಇದರಿಂದಲೇ ಗೊತ್ತಾಗುತ್ತೆ ಹಿಂದೂಗಳ ಪರವಾಗಿ ಗಟ್ಟಿಯಾಗಿ ನಿಲ್ಲುವ ಲೀಡರ್ ಬೇಕಾಗಿದ್ದಾರೆಂಬುದು. ಆದರೆ ಈ ಕಾಂಗ್ರೆಸ್ ಸರ್ಕಾರ ಜಾತಿ-ಜಾತಿಗಳ ನಡುವೆ ಸಂಘರ್ಷ ತಂದಿಡುವ ಮೂಲಕ ಹಿಂದೂಗಳನ್ನ ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಗುಡ್‌ನ್ಯೂಸ್‌ಗೆ ನಾನು ಯಾವತ್ತೂ ಬಿಜೆಪಿ ಮನೆ ಬಾಗಿಲಿಗೆ ಹೋಗುವುದಿಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದರು.