ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ. ಈ ಘಟನೆಯು ರಾಜಕೀಯ ಸಮರಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಬೆಂಗಳೂರು/ಬಳ್ಳಾರಿ (ಜ.02): ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿಯ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವು ಪ್ರಕರಣ ಈಗ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಅದು ಯಾರ ಬಂದೂಕಿನಿಂದ ಬಂದ ಬುಲೆಟ್ ಎಂಬುದು ತನಿಖೆಯಿಂದ ತಿಳಿಯಬೇಕಿದೆ' ಎಂದು ಹೇಳುವ ಮೂಲಕ ತನಿಖೆಗೆ ಆದೇಶಿಸಿದ್ದಾರೆ.

ತನಿಖೆಯ ನಂತರ ಸತ್ಯಾಂಶ

ಸಿಎಂ ಸಿದ್ದರಾಮಯ್ಯ ಬಳ್ಳಾರಿ ಘಟನೆ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿದ ಸಿಎಂ, 'ರಾಜಶೇಖರ್ ಸಾವನ್ನಪ್ಪಿರುವುದು ವಿಷಾದನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ. ಆ ಗನ್ ಬುಲೆಟ್ ಬಿಜೆಪಿಯವರದ್ದಾ ಅಥವಾ ಕಾಂಗ್ರೆಸ್‌ನವರದ್ದಾ ಎಂಬುದು ಪತ್ತೆಯಾಗಬೇಕು. ಸಾಮಾನ್ಯವಾಗಿ ಭದ್ರತೆಗಾಗಿ ಗನ್ ಇಟ್ಟುಕೊಂಡಿರುತ್ತಾರೆ, ಸೆಕ್ಯೂರಿಟಿ ಸಲುವಾಗಿ ಏರ್ ಫೈರ್ ಆಗಿರುವ ಸಾಧ್ಯತೆಯೂ ಇದೆ. ತನಿಖೆಯ ನಂತರವೇ ಎಲ್ಲವೂ ಸ್ಪಷ್ಟವಾಗಲಿದೆ' ಎಂದರು.

ನಮ್ಮ ಒಳ್ಳೆಯ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, 'ಈ ಘಟನೆ ನಡೆಯಬಾರದಿತ್ತು. ರಾಜಶೇಖರ್ ತುಂಬಾ ಒಳ್ಳೆಯ ವ್ಯಕ್ತಿ, ಸಮಾಜ ಸೇವೆಯಲ್ಲಿ ತೊಡಗಿದ್ದರು. ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಈ ಗಲಭೆ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದೇನೆ. ಯಾರು ಫೈರಿಂಗ್ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಹೊರಬರಲಿದೆ. ನಾನು ಇಂದು ಸಂಜೆ ಬಳ್ಳಾರಿಗೆ ಭೇಟಿ ನೀಡಲಿದ್ದೇನೆ' ಎಂದು ತಿಳಿಸಿದರು.

ಸಿದ್ದರಾಮಯ್ಯಗೆ ರಾಜೀನಾಮೆ ಸವಾಲು:

ಇದೀಗ ಬಿಜೆಪಿ ನಿಯೋಗದಿಂದ ಡಿಜಿಗೆ ದೂರು ನೀಡಿದ್ದೇವೆ. ಸಂಜೆಯೊಳಗೆ ಮಾಹಿತಿ ಕೊಡ್ತೇನೆ ಎಂದು ಡಿಜಿ ಹೇಳಿದ್ದಾರೆ. ನಾಳೆ ಸಿದ್ದರಾಮಯ್ಯ ಇದು ಮಿಸ್ ಫೈರ್, ಮಿಸ್ ಆಗಿ ವ್ಯಕ್ತಿ ಸತ್ತೋದ ಹೇಳಬಹುದು. ನಾಳೆ ಅವರು ಹೇಳಬಹುದಾದ ಮಾತನ್ನು ನಾನೆ ಇವತ್ತು ಹೇಳುತ್ತಿದ್ದೇನೆ. ಕಾಂಗ್ರೆಸ್‌ನ ಕೊಲೆಗಾರ ಯಾರು? ಯಾಕೆ ಶಾಸಕನ ಇನ್ನೂ ಬಂದಿಸಿಲ್ಲ. ಒಂದು ವೇಳೆ ನಾಳೆ ಕಾಂಗ್ರೆಸ್ ಶಾಸಕರ ಕಡೆಯಿಂದಲೇ ಫೈರ್ ಆಗಿದ್ದು ಪ್ರೂವ್ ಆದ್ರೆ ಸಿದ್ದರಾಮಯ್ಯ ರಾಜೀನಾಮೆ ನೀಡ್ತಿರಾ? ಎಂದು ಸಿದ್ದರಾಮಯ್ಯಗೆ ಅಶೋಕ್ ಸವಾಲು ಹಾಕಿದರು..

ಬಿಜೆಪಿ ಸದಸ್ಯರ ನಿಯೋಗದಿಂದ ದೂರು

ಬಳ್ಳಾರಿ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಬಿಜೆಪಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಬೆಂಬಲಿಗರ ವಿರುದ್ಧ ಕ್ರಮಕ್ಕೆ ದೂರು ನೀಡಿದ್ದಾರೆ. ಡಿಜಿಪಿಗೆ ದೂರು ನೀಡಲು ಬಿಜೆಪಿ ಶಾಸಕರ ನಿಯೋಗವು ತೆರಳಿತ್ತು. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಸುನೀಲ್ ಕುಮಾರ್, ಸಿಸಿ ಪಾಟೀಲ್, ಸಿದ್ದು ಸವದಿ, ಮಹೇಶ್ ಟೆಂಗಿನಕಾಯಿ ಹಾಗೂ ಪರಿಷತ್ ಸದಸ್ಯ ಕೇಶವ ಪ್ರಸಾದ್ ರ ನಿಯೋಗದಿಂದ ದೂರು ಕೊಡಲಾಗಿದೆ.