ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ, ಗೆಳತಿ ಹಾಗೂ ಸ್ನೇಹಿತರ ಮುಂದೆ ತಾನು ಯುವಕನಿಗೆ ಥಳಿಸಿದ್ದಾಗಿ ಬಿಲ್ಡಪ್ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕನೊಬ್ಬ 19 ವರ್ಷದ ಯುವಕನನ್ನು ಕೊಲೆ ಮಾಡಿದ್ದಾನೆ. ಹೋಳಿ ಹಬ್ಬದ ವೇಳೆ ನಡೆದ ಸಣ್ಣ ಗಲಾಟೆಯ ಬಳಿಕ ಈ ಘಟನೆ ನಡೆದಿದೆ.

ಕೀಚೈನ್‌ನಲ್ಲಿದ್ದ ಸಣ್ಣ ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕನಿಂದ ಯುವಕನ ಕೊಲೆ

ಬಾಗಲಕೋಟೆ: ಗೆಳತಿ ಹಾಗೂ ಸ್ನೇಹಿತರ ಎದುರು ಯುವಕನೋರ್ವನಿಗೆ ತಾನು ಥಳಿಸಿದ್ದಾಗಿ ಅಪ್ರಾಪ್ತ ಬಾಲಕನೋರ್ವ ಬಿಲ್ಡಪ್ ಕೊಟ್ಟಿದ್ದು, ಇದನ್ನು ಪ್ರಶ್ನಿಸಿದ 19ರ ಹರೆಯದ ಯುವಕನನ್ನೇ ಅಪ್ರಾಪ್ತ ಬಾಲಕ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಮೃತ ಯುವಕನನ್ನು 19 ವರ್ಷದ ರಾಹುಲ್ ಸಪ್ತಸಾಗರ ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ಆಚರಣೆ ವೇಳೆ ಇಬ್ಬರ ಮಧ್ಯೆ ಸಣ್ಣ ಗಲಾಟೆ ನಡೆದಿದ್ದು, ಅಪ್ರಾಪ್ತ ಬಾಲಕ ತಾನು ರಾಹುಲ್ ಸಪ್ತಸಾಗರ್‌ಗೆ ಥಳಿಸಿದ್ದಾಗಿ ಗೆಳತಿ ಹಾಗೂ ಸ್ನೇಹಿತರ ಮುಂದೆ ಬಿಲ್ಡಪ್ ನೀಡಿದ್ದಾನೆ. ಇದನ್ನು ಆತನ ಸ್ನೇಹಿತರು ಹೋಗಿ ರಾಹುಲ್ ಸಪ್ತಸಾಗರ ಬಳಿ ಹೇಳಿದ್ದಾರೆ. ಹೀಗಾಗಿ ರಾಹುಲ್ ಸಪ್ತಸಾಗರ ಈ ಬಿಲ್ಡಪ್ ಕೊಟ್ಟ ಅಪ್ರಾಪ್ತ ಬಾಲಕನ ಬಳಿ ಈ ವಿಚಾರದ ಬಗ್ಗೆ ಪ್ರಶ್ನೆ ಮಾಡುವುದಕ್ಕಾಗಿ ನಿನ್ನೆ ಇಲ್ಲಿನ ತೇರದಾಳದ ಸಿದ್ದೇಶ್ವರ ದೇವಸ್ಥಾನದ ಸಮೀಪ ಕರೆಸಿದ್ದಾನೆ.

ಬಿಲ್ಡಪ್ ಕೊಟ್ಟಿದ್ದನ್ನ ಪ್ರಶ್ನಿಸಿದ್ದಕ್ಕೆ ಕೊಲೆ

ಮಾತುಕತೆ ವೇಳೆ‌ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಇಬ್ಬರನ್ನು ಬೇರ್ಪಡಿಸಲು ಸ್ಥಳದಲ್ಲಿದ್ದ ಇನ್ನಿತರ ಸ್ನೇಹಿತರು ಪ್ರಯತ್ನಿಸಿ ವಿಫರಾಗಿದ್ದಾರೆ. ಗಲಾಟೆ ವೇಳೆ ಅರೋಪಿ ಬಾಲಕ ಬೈಕ್ ಕೀ ಚೈನ್‌ನಲ್ಲಿದ್ದ ಚಾಕುವಿನಿಂದ ರಾಹುಲ್ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮೃತ ರಾಹುಲ್ ಸೆಕೆಂಡ್ ಇಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಪ್ರೇಮಕ್ಕೆ ಮನೆಯವರ ವಿರೋಧ: ತುಂಗಭದ್ರ ನದಿಗೆ ಹಾರಿದ ಹಿಂದೂ ಹುಡುಗಿ ಮುಸ್ಲಿಂ ಹುಡುಗ

ಘಟನೆ ನಡೆದ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, ರಾಹುಲ್ ಮತ್ತು ಆರೋಪಿ ಅಪ್ರಾಪ್ತ ಬಾಲಕ ಪರಿಚಿತರಾಗಿದ್ದರು. ಹೋಳಿ ಬಣ್ಣದಾಟದಲ್ಲಿ ಸಣ್ಣ ವಿಚಾರಕ್ಕೆ ಗಲಾಟೆ ಆಗಿತ್ತು. ನಂತರ ಅಪ್ರಾಪ್ತ ಬಾಲಕ ರಾಹುಲ್ ನನ್ನ ಹೊಡೆದಿರೋದಾಗಿ ತನ್ನ ಸ್ನೇಹಿತೆ & ಸ್ನೇಹಿತರ ಮುಂದೆ (ಬಿಲ್ಡಪ್) ಹೇಳಿಕೊಂಡಿದ್ದ. ಇದನ್ನ ಸ್ನೇಹಿತರು ರಾಹುಲ್ ಗೆ ಹೇಳಿದ್ರು, ಇದನ್ನ ಪ್ರಶ್ನಿಸುವ ಸಲುವಾಗಿ ಆರೋಪಿಯನ್ನ ರಾಹುಲ್ ಕರೆಯಿಸಿದ್ದ, ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದವಾಗಿ ನಂತರ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಅಪ್ರಾಪ್ತ ತನ್ನ ಕೈಯಲ್ಲಿದ್ದ ಕೀ ಚೈನ್‌ನಲ್ಲಿದ್ದ ಚಾಕುವಿನಿಂದ ರಾಹುಲ್ ಗೆ ಇರಿದಿದ್ದಾನೆ. ಇದ್ರಿಂದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ರಾಹುಲ್ ಮೃತಪಟ್ಟಿದ್ದಾನೆ. ಈ ವಿಚಾರವಾಗಿ ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ ಎಂದ ಎಸ್ಪಿ ಸಿದ್ದಾರ್ಥ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ನೀವು ವರದಿ ಮಾಡುವಂತೆಯೇ ನಾನು ಕಾಯುತ್ತಾ ಕುಳಿತ್ತಿರುವೆ: ಡಿಕೆಶಿ