ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ಸಂಘರ್ಷ ಏರ್ಪಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗ (ನ.28): ಪ್ರಸ್ತುತ ರಾಜ್ಯದಲ್ಲಿ ರಾಜಕಾರಣ ಗೊಂದಲದಲ್ಲಿ ಇದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ಸಂಘರ್ಷ ಏರ್ಪಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಸಮಸ್ಯೆ ಹಾಗೆಯೇ ಇದೆ. ಸಮಸ್ಯೆಗಳನ್ನು ಬಗೆಹರಿಸಿ ಜನರ ಏಳಿಗೆಗೆ ಸರ್ಕಾರ ಶ್ರಮಿಸುತ್ತಿಲ್ಲ. ಆದರೆ, ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಮುಂದುವರಿದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ, ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಬಹುದು. ಮುಂದಿನ ಬೆಳವಣಿಗೆಗಳನ್ನು ಕಾದು ನೋಡೋಣ ಎಂದರು.
ಬಾರುಕೋಲು ಹಿಡಿದು, ಎತ್ತಿನ ಬಂಡಿಯೇರಿದ ಬಿವೈವಿ
ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಎತ್ತಿನ ಬಂಡಿಯನ್ನೇರಿ, ಬಾರುಕೋಲನ್ನು ಬೀಸುತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಎತ್ತಿನ ಬಂಡಿಯನ್ನೇರಿದ ಬಿ.ವೈ.ವಿಜಯೇಂದ್ರ, ವಿಪ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರು ಕೈಯಲ್ಲಿ ಬಾರುಕೋಲು ಹಿಡಿದು, ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಜತೆಗೆ ರೈತರ ಸಮಸ್ಯೆ ಪರಿಹರಿಸುವಂತೆ ರಾಜ್ಯ ಸರ್ಕಾರಕ್ಕೆ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಎತ್ತಿನ ಬಂಡಿಯಲ್ಲೇ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು.
ನಂತರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನಾನಿರತ ಮುಖಂಡರು, ಕಾರ್ಯಕರ್ತರು, ರೈತರನ್ನುದ್ದೇಶಿಸಿ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯವ್ಯಾಪಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧಾರ. ಕಳೆದ ಕೆಲ ತಿಂಗಳಿನಿಂದ ರಾಜ್ಯದ ರೈತರ ಪರಿಸ್ಥಿತಿ ಏನಾಗಿದೆಯೆಂಬುದನ್ನು ಎಲ್ಲರೂ ಗಮನಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಬಂದಾಗಿನಿಂದ ಸಿಎಂ ಸಿದ್ದರಾಮಯ್ಯಗೆ ಒಂದು ರೀತಿ ವಕ್ರದೃಷ್ಟಿ, ರೈತರನ್ನು ಕಂಡರೆ ಅಸಹನೆಯೆಂಬಂತೆ ಕಾಣುತ್ತದೆ ಎಂದರು.
ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟಕ್ಕೆ ಇಂದು ದಾವಣಗೆರೆಯಲ್ಲಿ ಚಾಲನೆ ನೀಡಿದ್ದೇವೆ. ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸದಿರುವುದು ಅಕ್ಷಮ್ಯ ಅಪರಾಧ. ರೈತ ವಿರೋಧಿಯಾದ ಅನಿಷ್ಟ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದಿಂದಾಗಿ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥವಾಗಿಲ್ಲ. ಮೆಕ್ಕೆಜೋಳದ ರೈತರೂ ಹೋರಾಟ ನಡೆಸಿದ್ದಾರೆ. ಲಕ್ಷ್ಮೇಶ್ವರದಲ್ಲಿ ರೈತ ಹೋರಾಟ ನಡೆದಿದೆ. ನವಲಗುಂದಲ್ಲಿ ರೈತ ಮುಖಂಡ ಶಂಕರಣ್ಣ ಅಂಬಳಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ ಎಂದು ತಿಳಿಸಿದರು.


