B.S. Yediyurappa sexual harassment case:ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್‌ ಮೌಖಿಕವಾಗಿ ಹೇಳಿದೆ.

 ಬೆಂಗಳೂರು (ಅ.11): ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿ ಎರಡನೇ ಬಾರಿ ಅಧೀನ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ಪುರಸ್ಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿದೆ.

ಈ ಕುರಿತು ಯಡಿಯೂರಪ್ಪ ಮತ್ತು ಪ್ರಕರಣದ ಸಹ ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರ ಪೀಠ ಹೀಗೆ ನುಡಿಯಿತು.

ಇದನ್ನೂ ಓದಿ: ಗಣತಿಯಿಂದಾಗಿ ನಗರದ 30 ಸಾವಿರ ಸರ್ಕಾರಿ ನೌಕರರಿಗೆ ಸಂಬಳವೇ ಆಗಿಲ್ಲ

ಯಡಿಯೂರಪ್ಪ ಅವರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, ಸಂತ್ರಸ್ತೆ ಮತ್ತು ಕೃತ್ಯ ನಡೆದ ಸ್ಥಳದಲ್ಲಿ ಹಾಜರಿದ್ದವರ ಹೇಳಿಕೆ ಮತ್ತು ಪ್ರತಿ ಹೇಳಿಕೆಯನ್ನು ಅಧೀನ ನ್ಯಾಯಾಲಯ ಪರಿಗಣಿಸಬೇಕಿತ್ತು ಎಂಬ ಅಂಶದ ಸುತ್ತ ಮಾತ್ರ ವಾದ ಮಂಡಿಸಿದ್ದಾರೆ. ಇತರೆ ವಿಚಾರಗಳ ಕುರಿತು ಅವರು ವಾದಿಸಿಲ್ಲ. ಹೀಗಿರುವಾಗ ಅರ್ಜಿ ಪುರಸ್ಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಉತ್ತರಿಸಲು ಸಿ.ವಿ.ನಾಗೇಶ್‌ ಅವರನ್ನು ಕರೆತನ್ನಿ ಎಂದು ವಿಚಾರಣೆ ವೇಳೆ ಯಡಿಯೂರಪ್ಪ ಪರ ಹಾಜರಿದ್ದ ವಕೀಲೆ ಸ್ವಾಮಿನಿ ಗಣೇಶ್‌ ಅವರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಅ.23ಕ್ಕೆ ಮುಂದೂಡಿತು.