ಆಯುರ್ವೇದವು ಸಾವಿರಾರು ವರ್ಷಗಳಿಂದ ಪರೀಕ್ಷಿತ ಪದ್ಧತಿಯಾಗಿದ್ದು, ಔಷಧಿಯೇ ಇಲ್ಲದೇ ರೋಗವನ್ನು ದೂರಮಾಡುವ ಪ್ರಪಂಚದ ಏಕೈಕ ಆರೋಗ್ಯ ಪದ್ಧತಿಯಾಗಿದೆ ಎಂದು ಎರಡನೇ ವಿಶ್ವ ಆಯುರ್ವೇದ ಸಮ್ಮೇಳನದ ರೂವಾರಿ ಡಾ.ಗಿರಿಧರ ಕಜೆ ಅಭಿಪ್ರಾಯಪಟ್ಟರು.

ಬೆಂಗಳೂರು : ಆಯುರ್ವೇದವು ಸಾವಿರಾರು ವರ್ಷಗಳಿಂದ ಪರೀಕ್ಷಿತ ಪದ್ಧತಿಯಾಗಿದ್ದು, ಔಷಧಿಯೇ ಇಲ್ಲದೇ ರೋಗವನ್ನು ದೂರಮಾಡುವ ಪ್ರಪಂಚದ ಏಕೈಕ ಆರೋಗ್ಯ ಪದ್ಧತಿಯಾಗಿದೆ ಎಂದು ಎರಡನೇ ವಿಶ್ವ ಆಯುರ್ವೇದ ಸಮ್ಮೇಳನದ ರೂವಾರಿ ಡಾ.ಗಿರಿಧರ ಕಜೆ ಅಭಿಪ್ರಾಯಪಟ್ಟರು.

ಎರಡನೇ ವಿಶ್ವ ಆಯುರ್ವೇದ ಸಮ್ಮೇಳನ

ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಎರಡನೇ ವಿಶ್ವ ಆಯುರ್ವೇದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆಯುರ್ವೇದ ಪದ್ಧತಿಯನ್ನು ಸಾವಿರಾರು ವರ್ಷಗಳಿಂದ ಪರೀಕ್ಷಿಸಿಕೊಂಡು ಬರಲಾಗಿದೆ. ಇಲ್ಲಿ ರೋಗ ಬಾರದಂತೆ ಮೊದಲೇ ಮುನ್ನೆಚ್ಚರಿಕೆ ಪಡೆಯಬಹುದು. ಔಷಧಿಯೇ ಇಲ್ಲದೇ ರೋಗವನ್ನು ದೂರಮಾಡುವ ಪ್ರಪಂಚದ ಏಕೈಕ ಆರೋಗ್ಯ ಪದ್ಧತಿ ಇದಾಗಿದೆ ಎಂದರು.

ದಕ್ಷಿಣ ಭಾರತದ ಊಟವೇ ಸಿಗುವುದಿಲ್ಲ

20-30 ವರ್ಷಗಳ ಹಿಂದೆ ಬೆಂಗಳೂರಿನ ಹೋಟೆಲ್‌ಗಳಲ್ಲಿ ಉತ್ತರ ಭಾರತದ ರೋಟಿಗಳು ಸಿಗುತ್ತಿರಲಿಲ್ಲ. ಇಂದು ಬೆಂಗಳೂರಿನ ಹೋಟೆಲ್‌ಗಳಲ್ಲಿ ರಾತ್ರಿ ದಕ್ಷಿಣ ಭಾರತದ ಊಟವೇ ಸಿಗುವುದಿಲ್ಲ. ಆ ಮಟ್ಟಿಗೆ ನಾವು ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡಿದ್ದೇವೆ. ಉತ್ತರ ಭಾರತದವರು ಉತ್ತರ ಭಾರತದ ಆಹಾರವನ್ನೇ ಬಳಸಬೇಕು. ದಕ್ಷಿಣದವರು ಅವರ ಆಹಾರವನ್ನೇ ಬಳಸಬೇಕು ಎಂದು ಸಲಹೆ ನೀಡಿದರು.ಆಹಾರ ಪದ್ಧತಿ ಬದಲಾವಣೆಯೇ ಕಾರಣ:

ಸಿರಿ ಧಾನ್ಯವನ್ನು ಎಲ್ಲರೂ ಬಳಸುವುದು ತಪ್ಪು. ಮೈಸೂರು ಭಾಗದವರು ರಾಗಿ ಬಳಸಬಹುದು, ಉತ್ತರ ಕರ್ನಾಟಕದವರು ಜೋಳ ಬಳಸಬಹುದು. ಸ್ಥಳೀಯವಾಗಿ ಮೊದಲಿಂದಲೂ ಮನೆಯಲ್ಲಿ ಬಳಸುವ ಧಾನ್ಯ ಬಳಸಬಹುದೇ ಹೊರತು ಎಲ್ಲರೂ ಸಿರಿ ಧಾನ್ಯ ಬಳಸಿದರೆ ಅನಾರೋಗ್ಯ ಉಂಟಾಗುತ್ತದೆ. ಆಹಾರ ಪದ್ಧತಿಯಲ್ಲಿನ ಬದಲಾವಣೆ ಇಂದಿನ ಅನಾರೋಗ್ಯ ಪೀಡಿತ ಸಮಾಜಕ್ಕೆ ಕಾರಣವಾಗಿದೆ ಎಂದು ವ್ಯಾಖ್ಯಾನಿಸಿದರು.

1980 ರ ದಶಕದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ‘ಮನೆಮನೆಗೆ ಆರೋಗ್ಯ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿತು. ಮನೆಮನೆಗೆ ಔಷಧಗಳು ತಲುಪಿದರೆ ಜಗತ್ತು ಆರೋಗ್ಯಪೂರ್ಣವಾಗುತ್ತದೆ ಎಂಬುದು ಅವರ ಚಿಂತನೆಯಾಗಿತ್ತು. ಆದರೆ ಈಗ ಮನೆಮನೆಗೆ ಔಷಧ ತಲುಪಿವೆಯಾದರೂ, ಮನೆ ಮನೆಗಳಲ್ಲಿ ಖಾಯಿಲೆಗಳೂ ತುಂಬಿವೆ ಎಂದು ವಿಷಾದಿಸಿದರು.