ಎರಡನೇ ವಿಶ್ವ ಆಯುರ್ವೇದ ಸಮ್ಮೇಳನವೂ ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಎಂದು ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ಮುಖ್ಯಸ್ಥ ಮತ್ತು ಸಮ್ಮೇಳನದ ರೂವಾರಿಯಾದ ಡಾ.ಗಿರಿಧರ ಕಜೆ ತಿಳಿಸಿದರು.

ಬೆಂಗಳೂರು (ಡಿ.26): ಎರಡನೇ ವಿಶ್ವ ಆಯುರ್ವೇದ ಸಮ್ಮೇಳನವೂ ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಎಂದು ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ಮುಖ್ಯಸ್ಥ ಮತ್ತು ಸಮ್ಮೇಳನದ ರೂವಾರಿಯಾದ ಡಾ.ಗಿರಿಧರ ಕಜೆ ತಿಳಿಸಿದರು. ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 2ನೇ ವಿಶ್ವ ಆಯುರ್ವೇದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

ಆಯುರ್ವೇದವು ಪರ್ಯಾಯ ವೈದ್ಯಕೀಯ ಪದ್ಧತಿಯಲ್ಲ. ಅದು ಈ ನೆಲದ ವೈದ್ಯಕೀಯ ಪದ್ಧತಿ. ಹಾಗೆಯೇ ಇದು ಸಮಗ್ರ ಜೀವನ ಪದ್ಧತಿಯೂ ಹೌದು. ಈ ಸಮ್ಮೇಳನ ಹಲವು ದಾಖಲೆಗಳನ್ನು ಬರೆಯಲಿದೆ. ದೇಶ-ವಿದೇಶಗಳ 6 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು, ನೂರಾರು ಮಳಿಗೆಗಳು, ಆಯುರ್ವೇದ ಅನುಭವ ಕೇಂದ್ರಗಳು ಸೇರಿ ಹಲವು ವೈಶಿಷ್ಟ್ಯಗಳ ಮೂಲಕ ಇತಿಹಾಸ ನಿರ್ಮಿಸಲಾಗಿದೆ ಎಂದು ಡಾ.ಗಿರಿಧರ ಕಜೆ ವಿವರಿಸಿದರು.

ಆಯುರ್ವೇದ ಪದ್ಧತಿಯಷ್ಟೇ ಅಲ್ಲ, ಯಾವುದೇ ವೈದ್ಯಕೀಯ ಪದ್ಧತಿಯಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಪ್ರತಿನಿಧಿಗಳು ಈ ಹಿಂದೆ ಪಾಲ್ಗೊಂಡಿಲ್ಲ. 550ಕ್ಕೂ ಅಧಿಕ ಪ್ರಬಂಧಗಳು ಮಂಡನೆಯಾಗಿವೆ. 100ಕ್ಕೂ ಅಧಿಕ ತೀರ್ಪುಗಾರರು ಪ್ರಬಂಧಗಳನ್ನು ಪರಿಶೀಲಿಸಿ ವಿಜೇತರನ್ನು ಗುರುತಿಸಿದ್ದು, ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ ಎಂದು ಡಾ. ಗಿರಿಧರ ಕಜೆ ಮಾಹಿತಿ ಹಂಚಿಕೊಂಡರು.

ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ

ಆಯುರ್ವೇದ, ಆಹಾರ ಪದ್ಧತಿಗಳು, ಔಷಧಿಗಳು, ಜೀವನ ಪದ್ಧತಿ ಸೇರಿ ಹಲವು ಮಾಹಿತಿ ನೀಡುವ 200ಕ್ಕೂ ಅಧಿಕ ಮಳಿಗೆಗಳಿವೆ. ದೇಶ ವಿದೇಶಗಳ ತಜ್ಞರು ಪಾಲ್ಗೊಂಡು ಆಯುರ್ವೇದದ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ. 4 ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಡಾ. ಗಿರಿಧರ ಕಜೆ ತಿಳಿಸಿದರು.

ಪ್ರತಿದಿನವೂ 100 ಸಾಧಕರು ಸೇರಿ ನಾಲ್ಕು ದಿನ 400 ಸಾಧಕರನ್ನು ಸನ್ಮಾನಿಸಲಾಗುವುದು. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಯುನಾನಿ, ಹೋಮಿಯೋಪತಿ ಸೇರಿ ಹಲವು ವಿಭಾಗಗಳ ಸಾಧಕರನ್ನು ಗೌರವಿಸಲಾಗುವುದು ಎಂದು ಡಾ. ಗಿರಿಧರ ಕಜೆ ಮಾಹಿತಿ ಹಂಚಿಕೊಂಡರು.