ಬೆಂಗಳೂರಿನಲ್ಲಿ ಏಪ್ರಿಲ್ 1 ರಿಂದ, ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸದ ನಾಗರಿಕರಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ದಂಡ ವಿಧಿಸಲಿದೆ. ಮೊದಲ ಬಾರಿಗೆ ₹500 ಮತ್ತು ಪುನರಾವರ್ತಿತ ಅಪರಾಧಕ್ಕೆ ₹1000 ದಂಡ ನಿಗದಿಪಡಿಸಲಾಗಿದೆ.

 ಬೆಂಗಳೂರು (ಮಾ.31): ನಗರದಲ್ಲಿ ಕಸ ವಿಂಗಡಣೆ ಮಾಡದವರ ವಿರುದ್ಧ ದಂಡ ಪ್ರಯೋಗಕ್ಕೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮುಂದಾಗಿದ್ದು, ಏ.1ರಿಂದ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸಿ ನೀಡದವರಿಗೆ ದಂಡ ವಿಧಿಸಲಿದೆ.

Add Asianetnews Kannada as a Preferred SourcegooglePreferred

ಘನತ್ಯಾಜ್ಯ ನಿರ್ವಹಣಾ ನಿಯಮ 2026 ಏ. 1ರಿಂದ ಜಾರಿಗೊಳಿಸಲಾಗುತ್ತಿದೆ. ಈ ನಿಯಮದ ಅನ್ವಯ ಪ್ರತಿಯೊಬ್ಬರೂ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ನೀಡಬೇಕು. ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಮಾಡುವವರು ಕೂಡ ಕಸ ವಿಂಗಡಿಸಿದ ನಂತರವೇ ಅದನ್ನು ಸಾಗಿಸಬೇಕು. ಈ ಕುರಿತಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಏ. 1ರಿಂದ ವಿಶೇಷ ಕಾರ್ಯಾಚರಣೆ ಆರಂಭಿಸುತ್ತಿದೆ. ಲಿಂಕ್‌ವರ್ಕರ್ಸ್‌ ಮತ್ತು ಘನತ್ಯಾಜ್ಯ ನಿರ್ವಹಣಾ ತಂಡದ ಮೂಲಕ ಈ ಕಾರ್ಯ ನಡೆಸಲಾಗುತ್ತದೆ.

ಕಾರ್ಯಾಚರಣೆ ವೇಳೆ ಕಸ ವಿಂಗಡಿಸಿ ನೀಡದವರ ವಿರುದ್ಧ ದಂಡ ವಿಧಿಸಲು ಸಂಸ್ಥೆ ನಿರ್ಧರಿಸಿದೆ. ಮೊದಲ ಬಾರಿ ತಪ್ಪು ಮಾಡಿದರೆ ಅವರಿಗೆ 500 ರು. ಹಾಗೂ ಮತ್ತೆ ಅದನ್ನು ಮುಂದುವರಿಸಿದರೆ 1 ಸಾವಿರ ರು. ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ನಾಲ್ಕು ವಿಭಾಗದಲ್ಲಿ ಕಸವನ್ನು ವಿಂಗಡಿಸಬೇಕಾಗುತ್ತದೆ. ಹಸಿ, ಒಣ, ಸ್ಯಾನಿಟರಿ ವೇಸ್ಟ್‌ ಹಾಗೂ ಸ್ಪೆಷಲ್‌ ಕೇರ್‌ ವೇಸ್ಟ್‌ಗಳನ್ನು ವಿಂಗಡಿಸಿ ನೀಡಬೇಕು ಎಂದು ಸೂಚಿಸಲಾಗಿದೆ.

ವಿಂಗಡಿಸಿದ ಕಸವನ್ನೇ ಪಡೆಯಲು ಸೂಚನೆ

ಅಲ್ಲದೆ, ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ ಚಾಲಕ ಮತ್ತು ಸಹಾಯಕರು ಕೂಡ ವಿಂಗಡಿಸಿದ ಕಸವನ್ನು ಮಾತ್ರ ಪಡೆಯಬೇಕು. ಜತೆಗೆ ತ್ಯಾಜ್ಯ ಪಡೆಯುವವರು ಸಮವಸ್ತ್ರ, ಕೈಗವಸು, ಮುಖಗವಸು, ಗಮ್‌ಬೂಟ್‌ ಸೇರಿದಂತೆ ಇನ್ನಿತರ ಸುರಕ್ಷತಾ ಪರಿಕರಗಳನ್ನು ಧರಿಸಬೇಕು ಎಂದು ಹೇಳಲಾಗಿದೆ.