ವಾಲ್ಮೀಕಿ ನಿಗಮದ 89 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ, ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ನಾಗೇಂದ್ರ ಬೇನಾಮಿ ಕಾರು ಖರೀದಿ, ಟೆಂಡರ್‌ನಲ್ಲಿ ಲಂಚ ಪಡೆದಿದ್ದು ಹಾಗೂ ಇತರೆ ಇಲಾಖೆಗಳ ಹಗರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ದೃಢ.

ಆರೋಪಪಟ್ಟಿಯಲ್ಲಿ ಏನಿದೆ?

  • ವಾಲ್ಮೀಕಿ ನಿಗಮದಲ್ಲಿ ನಡೆದ 89 ಕೋಟಿ ರು. ಅಕ್ರಮ ಹಣ ವರ್ಗ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆ
  • ಅಕ್ರಮವಾಗಿ ವರ್ಗ ಆದ ಹಣ ಬಳಸಿ ಮಾಜಿ ಸಚಿವ ನಾಗೇಂದ್ರರಿಂದ ಬೇನಾಮಿ ಹೆಸರಲ್ಲಿ ಕಾರು ಖರೀದಿ
  • -ಇಲಾಖೆ ಟೆಂಡರ್‌ನಲ್ಲಿ ಆಪ್ತ ನೆಕ್ಕುಂಟಿ ಮೂಲಕ 1.20 ಕೋಟಿ ರು. ಲಂಚ ಸ್ವೀಕರಿಸಿದ್ದು ತನಿಖೆಯಲ್ಲಿ ಪತ್ತೆ
  •  ವಾಲ್ಮೀಕಿ ನಿಗಮ ಜತೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲೂ ಹಗರಣ ನಡೆಸಿದ್ದು ದೃಢ
  • ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಯಲ್ಲೂ ಮಾಜಿ ಸಚಿವ ನಾಗೇಂದ್ರ ವಂಚನೆ ಪತ್ತೆ
  • ಸಚಿವರ ಆಪ್ತ ನೆಕ್ಕುಂಟಿ ನಾಗರಾಜ್ ಸಹ 5.72 ಕೋಟಿ ರು. ಪಡೆದುಕೊಂಡಿದ್ದು ತನಿಖೇಲಿ ದೃಢ

ಬೆಂಗಳೂರು (ಜೂ.3): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ(Karnataka Valmiki Corporation) ನಿಯಮಿತದ ಬಹುಕೋಟಿ ಹಗರಣದ ತನಿಖೆ ಪೂರ್ಣಗೊಳಿಸಿರುವ ಕೇಂದ್ರೀಯ ತನಿಖಾ ಸಂಸ್ಥೆಯು (CBI) ಆರೋಪಿಗಳಾದ ಮಾಜಿ ಸಚಿವ ಬಿ.ನಾಗೇಂದ್ರ(Former minister B Nagendra), ಎಂ.ಜಿ.ರಸ್ತೆ(MG Raod)ಯ ಯೂನಿಯನ್‌ ಬ್ಯಾಂಕ್‌ ಇಂಡಿಯಾ(Union Bank India)ದ ಮೂವರು ಅಧಿಕಾರಿಗಳು ಸೇರಿ ಇತರೆ ಆರೋಪಿಗಳ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ(CBI Special Court)ಕ್ಕೆ ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಎಂ.ಜಿ.ರಸ್ತೆಯ ಯೂನಿಯನ್‌ ಬ್ಯಾಂಕ್‌ ಇಂಡಿಯಾದ ಶಾಖೆಯ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ವರ್ಗಾವಣೆಯಾದ 89.63 ಕೋಟಿ ರು. ಪೈಕಿ ಮಾಜಿ ಸಚಿವ ಬಿ.ನಾಗೇಂದ್ರ ಬೇನಾಮಿ ಕಾರು ಖರೀದಿಸಿದ್ದಾರೆ. ಇಲಾಖೆಯ ಟೆಂಡರ್‌ವೊಂದರಲ್ಲಿ ಆಪ್ತ ಸಹಾಯಕ ನೆಕ್ಕುಂಟಿ ನಾಗರಾಜ್‌ ಮುಖಾಂತರ 1.20 ಕೋಟಿ ರು. ಪಡೆದುಕೊಂಡಿದ್ದಾರೆ. ಅಂತೆಯೇ ಈ ನೆಕ್ಕುಂಟಿ ನಾಗರಾಜ್ ಸಹ 5.72 ಕೋಟಿ ರು. ಪಡೆದುಕೊಂಡಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಿಬಿಐ ತನಿಖೆ ವೇಳೆ ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮಾತ್ರವಲ್ಲದೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ನಡೆದ ವಂಚನೆ ಸಹ ಬೆಳಕಿಗೆ ಬಂದಿದೆ. ಈ ಮೂರೂ ವಂಚನೆ ಪ್ರಕರಣಗಳಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಭಾಗಿಯಾಗಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಹೈಕೋರ್ಟ್‌ ಸೂಚನೆ ಮೇರೆಗೆ ಪ್ರತ್ಯೇಕ ತನಿಖೆ ನಡೆಸಿರುವ ಸಿಬಿಐ ಅಧಿಕಾರಿಗಳು ಇದೀಗ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮೂರು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಪಿತೂರಿ ಮಾಡಿ ವಂಚನೆ:

ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಅಂದಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಬಿ.ನಾಗೇಂದ್ರ, ಅವರ ಆಪ್ತ ಸಹಾಯಕ ನೆಕ್ಕುಂಟಿ ನಾಗರಾಜ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಹಾಗೂ ಇತರರ ಪೂರ್ವ ನಿಯೋಜಿತ ವಂಚನೆ ಪಿತೂರಿ ಸಿಬಿಐ ತನಿಖೆಯಲ್ಲಿ ಬಯಲಾಗಿದೆ. ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಈ ವಂಚನೆ ಕಾರ್ಯಗತಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳುವ ಉದ್ದೇಶದಿಂದ ಸತ್ಯನಾರಾಯಣ ವರ್ಮಾ ಮತ್ತು ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷ ಇಟಕಾರಿ ಸತ್ಯನಾರಾಯಣ ನಕಲಿ ನೋಂದಣಿ ಪ್ರಮಾಣಪತ್ರಗಳು ಮತ್ತು ನಕಲಿ ಇ-ಕೆವೈಸಿ ದಾಖಲೆಗಳನ್ನು ಬಳಸಿಕೊಂಡು ನಕಲಿ ಕಂಪನಿಗಳ ಹೆಸರಿನಲ್ಲಿ 18 ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದರು.

ವಂಚನೆಗೆ ಬ್ಯಾಂಕ್‌ ಅಧಿಕಾರಿಗಳ ಸಹಕಾರ:

ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಸಚಿವರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್‌, ಎಂ.ಜಿ.ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆ ಅಧಿಕಾರಿಗಳು ಸೇರಿಕೊಂಡು ಮಾದರಿ ಸಹಿಗಳು, ಬ್ಯಾಂಕಿನ ಮಾಹಿತಿಗಳನ್ನು ಈ ಸತ್ಯನಾರಾಯಣ ವರ್ಮಾನೊಂದಿಗೆ ಹಂಚಿಕೊಂಡಿದ್ದರು. ನಿಗಮದ ವ್ಯವಸ್ಥಾಪಕ ನಿರ್ದೇಶಕನ ಮತ್ತು ಆಡಳಿತಾಧಿಕಾರಿ ನಕಲಿ ರಬ್ಬರ್‌ ಸೀಲುಗಳನ್ನು ಹೈದರಾಬಾದ್‌ನಲ್ಲಿ ನಕಲಿ ಮಾಡಿ ವಂಚನೆಯ ಬ್ಯಾಂಕಿಂಗ್‌ ವಹಿವಾಟುಗಳಿಗೆ ಬಳಸಲಾಗುತ್ತಿತ್ತು.

ಬೇನಾಮಿ ಹೆಸರಿನಲ್ಲಿ ಕಾರು ಖರೀದಿ:

ಎಂ.ಜಿ.ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ತೆರೆಯಲಾಗಿದ್ದ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಲ್ಲಿದ್ದ 187 ಕೋಟಿ ರು. ಹಣವಿತ್ತು. ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್‌ ವಹಿವಾಟುಗಳ ಮುಖಾಂತರ ಹೈದರಾಬಾದ್‌ನ 18 ನಕಲಿ ಖಾತೆಗಳಿಗೆ 89.63 ಕೋಟಿ ರು. ವರ್ಗಾಯಿಸಿದ್ದರು. ಬಳಿಕ ಈ 18 ಖಾತೆಗಳಿಂದ ಸುಮಾರು 600 ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ಬಳಿಕ ಆರೋಪಿಗಳು ನಗದು, ಬೆಳ್ಳಿ, ಐಷಾರಾಮಿ ವಾಹನಗಳ ಖರೀದಿಗೆ ಈ ಹಣ ಬಳಸಿಕೊಂಡಿದ್ದರು ಎಂಬುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಹಣದ ಪೈಕಿ ಮಾಜಿ ಸಚಿವ ನಾಗೇಂದ್ರ ಬೇನಾಮಿ ಹೆಸರಿನಲ್ಲಿ ವಾಹನ ಖರೀದಿಸಿದ್ದರು. ಅಂತೆಯೇ ಅವರ ಆಪ್ತ ಸಹಾಯಕ ನೆಕ್ಕುಂಟಿ ನಾಗರಾಜ್‌ ಮತ್ತು ಅವರ ಸಂಬಂಧಿಕರು ಈ ವಂಚನೆ ಹಣ ಸ್ವೀಕರಿಸಿದ್ದರು ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಸಚಿವ ನಾಗೇಂದ್ರಗೆ ಟೆಂಡರ್‌ನಲ್ಲಿ 1.20 ಕೋಟಿ ರು.:

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ರೊಟ್ಟಿ ತಯಾರಿಸುವ ಯಂತ್ರಗಳಿಗಾಗಿ 13.95 ಕೋಟಿ ರು. ಮೌಲ್ಯದ ಟೆಂಡರ್‌ ಕರೆಯಲಾಗಿತ್ತು. ಈ ಟೆಂಡರ್‌ ಅನ್ನು ನೆಕ್ಕುಂಟಿ ನಾಗರಾಜ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕೆ.ಶ್ರೀನಿವಾಸ ರೆಡ್ಡಿ ಮಾಲೀಕತ್ವದ ಬೆಂಗಳೂರಿನ ಎಸ್‌ಕೆಆರ್‌ ಇನ್ಫ್ರಾಸ್ಟ್ರಕ್ಚರ್‌ಗೆ ನೀಡಲಾಗಿತ್ತು. ಈ ವೇಳೆ ನೆಕ್ಕುಂಟಿ ನಾಗರಾಜ್‌ ಮುಖಾಂತರ ಸಚಿವ ಬಿ.ನಾಗೇಂದ್ರ ಅವರು 1.20 ಕೋಟಿ ರು. ಪಡೆದುಕೊಂಡಿದ್ದರು.

ಈ ಹಣವನ್ನು ತಮ್ಮ ಸಹೋದರಿ, ಭಾವ, ಬಳ್ಳಾರಿ ಫಾರ್ಮ್‌ಹೌಸ್‌ ಮಾಲೀಕರ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಅಂತೆಯೇ ಈ ನೆಕ್ಕುಂಟಿ ನಾಗರಾಜ್‌ ಖುದ್ದು ಎಸ್‌ಕೆಆರ್‌ ಇನ್ಫ್ರಾಸ್ಟ್ರಕ್ಚರ್‌ ಕಂಪನಿ ಮತ್ತು ಅದರ ಸೋದರ ಕಂಪನಿಗಳಿಂದ 5.72 ಕೋಟಿ ರು. ಪಡೆದುಕೊಂಡಿದ್ದರು ಎಂಬುದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ.

ಟೆಂಡರ್‌ನಲ್ಲಿ ಲಂಚ ಸ್ವೀಕಾರ:

ಎಸ್‌ಸಿ-ಎಸ್ಟಿ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮವು ಸಚಿವ ನಾಗೇಂದ್ರ ಸೂಚನೆ ಮೇರೆಗೆ 4.90 ಕೋಟಿ ರು. ಮೌಲ್ಯದ ಕೌಶಲ್ಯ ಅಭಿವೃದ್ಧಿ ತರಬೇತಿ ಕೆಲಸವನ್ನು ಬೆಂಗಳೂರಿನ ಕೆಜಿಟಿಟಿಐಗೆ ನೀಡಿತ್ತು. ಯಾವುದೇ ಟೆಂಡರ್‌ ಪ್ರಕ್ರಿಯೆ ಇಲ್ಲದೆ ಸದ್ಗುರು ಶಿಕ್ಷಣ ಟ್ರಸ್ಟ್‌ ಮತ್ತು ಸದ್ಗುರು ಸೆಲ್ಯೂಷನ್ಸ್‌ಗೆ ಉಪಗುತ್ತಿಗೆ ನೀಡಿತ್ತು. ಇದರಿಂದ ನಾಗರಾಜ್‌ ಕುಟುಂಬಕ್ಕೆ 64 ಲಕ್ಷ ರು. ಸಂದಾಯವಾಗಿತ್ತು. ಎಸ್‌ಟಿ ಕಲ್ಯಾಣ ಸಚಿವಾಲಯದ ಅಧಿಕಾರಿ ಎನ್‌.ಪ್ರಕಾಶ್‌ಗೆ 15.50 ಲಕ್ಷ ರು. ಲಂಚ ಸಂದಾಯವಾಗಿತ್ತು ಎಂಬುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಈ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ, ಅವರ ಆಪ್ತ ಸಹಾಯಕ ನೆಕ್ಕುಂಟಿ ನಾಗರಾಜ್‌, ನಿಗಮದ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಯೂನಿಯನ್‌ ಬ್ಯಾಂಕ್‌ ಇಂಡಿಯಾದ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳು ಸೇರಿದಂತೆ 30 ಜನರ ಪಾತ್ರವನ್ನು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.