ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲೆ, ಸಂಸ್ಕೃತಿ ಸಂಘಗಳಿಗೆ ಸಹಾಯಧನ ಹಂಚಿಕೆ ತಾರತಮ್ಯ ಆಗುತ್ತಿದೆ. ಇಲಾಖೆಯಲ್ಲಿ ಅವೈಜ್ಞಾನಿಕ ಮಾರ್ಗಸೂಚಿ ಅನುಸರಿಸಲಾಗುತ್ತಿದೆ ಎಂದು ಹಿರಿಯ ಕಲಾವಿದರು, ಸಾಹಿತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಡಿ.08): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲೆ, ಸಂಸ್ಕೃತಿ ಸಂಘಗಳಿಗೆ ಸಹಾಯಧನ ಹಂಚಿಕೆ ತಾರತಮ್ಯ ಆಗುತ್ತಿದೆ. ಇಲಾಖೆಯಲ್ಲಿ ಅವೈಜ್ಞಾನಿಕ ಮಾರ್ಗಸೂಚಿ ಅನುಸರಿಸಲಾಗುತ್ತಿದೆ ಎಂದು ಹಿರಿಯ ಕಲಾವಿದರು, ಸಾಹಿತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮೂರು ದಿನಗಳಲ್ಲಿ ಇಂಥ ಧೋರಣೆ ಬದಲಿಸಿಕೊಳ್ಳುವ ಕುರಿತು ತೀರ್ಮಾನ ಕೈಗೊಳ್ಳದಿದ್ದರೆ ಡಿ.12ರಂದು ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರು, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟದಿಂದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಮುಖರು, ಕಲಾವಿದರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ನಿರ್ಧಾರಕ್ಕೆ ಬರಬೇಕು. ಇಲ್ಲದಿದ್ದರೆ ಹಿರಿಯ ಕಲಾವಿದ ವೈ.ಕೆ.ಮುದ್ದುಕೃಷ್ಣ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ. ವೇಷ ಭೂಷಣದೊಂದಿಗೆ ಮೆರವಣಿಗೆ, ಮೌನ ಪ್ರತಿಭಟನೆ ನಡೆಸುತ್ತೇವೆ ಎಂದರು.

ಕೊಡಗಿನಾದ್ಯಂದ ಹುತ್ತರಿ ಹಬ್ಬ: ಧಾನ್ಯಲಕ್ಷ್ಮಿಯ ಮನೆ ತುಂಬಿಕೊಂಡ ಜನರು

ಒಕ್ಕೂಟದ ಅಧ್ಯಕ್ಷ ಕುಮಾರ್‌ ಕೆ.ಎಚ್‌. ಮಾತನಾಡಿ, ನಿಜವಾಗಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿರುವವರಿಗೆ ಇಲಾಖೆಯ ಸೌಲಭ್ಯ ಸಿಗುತ್ತಿಲ್ಲ. ಯೋಜನೆಗಳು ಭ್ರಷ್ಟರ ಪಾಲಾಗುತ್ತಿವೆ. ಪ್ರಾಮಾಣಿಕ ಸಂಘಗಳಿಗೆ 2 ಲಕ್ಷ ರು. ಧನ ಸಹಾಯ ನೀಡಿದರೆ ಕೆಲವು ವ್ಯಕ್ತಿಗತ, ಮಠ ಮಾನ್ಯಗಳಿಗೆ ಕೋಟ್ಯಂತರ ರುಪಾಯಿ ನೀಡಲಾಗುತ್ತಿದೆ. ಕಲಾವಿದರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ದೂರಿದರು.

ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡುವಾಗ ಏಕರೂಪದ ಮಾರ್ಗಸೂಚಿ ಪಾಲಿಸಬೇಕು. ಕ್ರಮ ಸಂಖ್ಯೆ 9ರಂತೆ ಸರ್ಕಾರ ಸೂಚಿಸುವ ಕಾರ್ಯಕ್ರಮಕ್ಕೆ ಧನ ಸಹಾಯ ನೀಡಬೇಕು. ಆರ್‌ಟಿಜಿಎಸ್‌ ಪದ್ಧತಿ ರದ್ದುಗೊಳಿಸಬೇಕು. ಅವೈಜ್ಞಾನಿಕವಾದ ಕಲಾತಂಡ ಆ್ಯಪ್‌ ರದ್ದುಪಡಿಸಿ, ಕಲಾ ಸಂಸ್ಥೆಗಳಿಗೆ ಅನುಕೂಲ ಆಗುವಂತೆ ಮಾರ್ಗಸೂಚಿ ಸರಳಗೊಳಿಸಬೇಕು ಎಂದರು.

ಅಸಂಘಟಿತ ಕಲಾವಿದರಿಗೆ ಜ್ಯೇಷ್ಠತೆ ಆಧಾರದಲ್ಲಿ ವೇಷಭೂಷಣ, ವಾದ್ಯ ಪರಿಕರ, ರಂಗ ಪರಿಕರ ಧನ ಸಹಾಯವನ್ನು 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸಬೇಕು. ಕಷ್ಟಕರ ಸ್ಥಿತಿಯಲ್ಲಿರುವ ಕಲಾವಿದರಿಗೆ ವೈದ್ಯಕೀಯ ವೆಚ್ಚವನ್ನು ಏಕಗವಾಕ್ಷಿ ವ್ಯವಸ್ಥೆಯಡಿ ತಕ್ಷಣ ಭರಿಸಬೇಕು. ವಿಶೇಷ ಘಟಕ ಯೋಜನೆ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡದೆ ಹಿಂತಿರುಗಿಸುವ ವಿಷಯ ನಿರ್ವಾಹಕರನ್ನು ಅಮಾನತ್ತುಗೊಳಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಆಯುಷ್ಮಾನ್‌ ಭಾರತಕ್ಕೆ ಡಿಜಿಟಲ್‌ ವೇಗದ ಸ್ಪರ್ಶ: ಸಚಿವ ಸುಧಾಕರ್‌

ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಸೇವಾಸಿಂಧು ಪೋರ್ಟಲ್‌ ಮೂಲಕ ಸಮರ್ಪಕ ದಾಖಲೆ ನೀಡಿದರೂ ವ್ಯವಸ್ಥಿತವಾಗಿ ಕಲಾವಿದರನ್ನು ದೂರವಿಡುವ ಕೆಲಸ ಆಗುತ್ತಿರುವ ಸಂಶಯವಿದೆ. ಕಲಾವಿದರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಬಗ್ಗೆಯೂ ಕ್ರಮ ಆಗಬೇಕಿದೆ ಎಂದು ಒತ್ತಾಯಿಸಿದರು. ಈ ವೇಳೆ ಕಲಾವಿದರಾದ ಬಸವರಾಜ ಸಬರದ, ಸಾಹಿ ವೆಂಕಟೇಶ್‌, ಮಾಲತಿ ಸುಧೀರ್‌, ಡಾ.ಜಯಸಿಂಹ ಎಸ್‌. ಸೇರಿ ಇತರರಿದ್ದರು.