Asianet Suvarna News Asianet Suvarna News

ಆಯುಷ್ಮಾನ್‌ ಭಾರತಕ್ಕೆ ಡಿಜಿಟಲ್‌ ವೇಗದ ಸ್ಪರ್ಶ: ಸಚಿವ ಸುಧಾಕರ್‌

2019ರ ಮೇ ತಿಂಗಳಿಂದ ಬೆರಳಚ್ಚು ಆಧರಿಸಿ ಕಾರ್ಡ್‌ ನೀಡುವ ಕ್ರಮ ಜಾರಿ ತರಲಾಗಿದೆ. ಆದರೆ ವೃದ್ಧರು, ಮಕ್ಕಳು, ಕುಷ್ಠರೋಗಿಗಳು ಸೇರಿದಂತೆ ಕೆಲ ವರ್ಗಕ್ಕೆ ಬೆರಳಚ್ಚು ವ್ಯವಸ್ಥೆಯಿಂದ ತೊಂದರೆಯಾಗುತ್ತಿದೆ ಎಂದು ತಿಳಿದುಬಂದಿತ್ತು. ಇದಕ್ಕಾಗಿ ಕಣ್ಣಿನ ಐರಿಸ್‌ ಸ್ಕ್ಯಾ‌ನ್‌ ಮಾಡಿ ಕಾರ್ಡ್‌ ಬಳಸುವ ವ್ಯವಸ್ಥೆ ಜಾರಿ ಮಾಡಲಾಗಿದೆ.

special article by minister dr k sudhakar over ayushman bharat yojana gvd
Author
First Published Dec 8, 2022, 6:04 AM IST

ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ಸರ್ವರಿಗೂ ಆರೋಗ್ಯ ಎಂಬ ಉದ್ದೇಶವನ್ನು ಇಟ್ಟುಕೊಂಡು ಆರಂಭವಾದ ಆಯುಷ್ಮಾನ್‌ ಭಾರತ್‌ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಸಂಜೀವಿನಿಯಾಗಿದೆ. ‘ಪ್ರಧಾನ ಸೇವಕರಾಗಿ’ ಅಧಿಕಾರ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರು ತಂದ ಅತ್ಯಂತ ಜನಪ್ರಿಯ ಯೋಜನೆ ಆಯುಷ್ಮಾನ್‌ ಭಾರತ್‌. ಈ ಯೋಜನೆ ದೇಶದ ಪ್ರತಿ ಪ್ರಜೆಗೆ ಆರೋಗ್ಯದ ಖಾತರಿ ನೀಡುತ್ತದೆ. ಈ ದೇಶದ ಪ್ರಜೆಯಾದ ನಾನು ಸರ್ಕಾರಿ ವ್ಯವಸ್ಥೆಯಲ್ಲೇ ದುಬಾರಿ ದರದ ಚಿಕಿತ್ಸೆಯನ್ನು ಸುಲಭವಾಗಿ ಪಡೆಯಬಹುದು ಎಂಬ ವಿಶ್ವಾಸವನ್ನು ಜನರಿಗೆ ನೀಡುತ್ತದೆ. ಅದೇ ರೀತಿ ‘ಕಾಮನ್‌ ಮ್ಯಾನ್‌’ ಆಗಿ ಅಧಿಕಾರ ಹಿಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಈಗ ಆಯುಷ್ಮಾನ್‌ ಯೋಜನೆಗೆ ವೇಗದ ಹೊಸ ಸ್ಪರ್ಶ ನೀಡಿದೆ.

ಡಿಸೆಂಬರ್‌ 8ರಂದು ರಾಜ್ಯ ಸರ್ಕಾರದಿಂದ 1.10 ಕೋಟಿಗೂ ಅಧಿಕ ಜನರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಈಗಾಗಲೇ ಎಲ್ಲಾ ಸ್ಮಾರ್ಟ್‌ ಕಾರ್ಡ್‌ಗಳನ್ನು ಸಿದ್ಧಪಡಿಸಿದ್ದು, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 1,000 ಸ್ಮಾರ್ಟ್‌ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಮುಂದಿನ ತಿಂಗಳು ಜನವರಿ ಅಂತ್ಯಕ್ಕೆ ರಾಜ್ಯದ 5 ಕೋಟಿ ಜನರಿಗೆ ಕಾರ್ಡ್‌ಗಳನ್ನು ನೀಡುವ ಗುರಿ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ರೂಪದ ಯೋಜನೆಗೆ ಚಾಲನೆ ನೀಡಿದ್ದರು. ಇದೇ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತೊಂದು ಮೇಲಿನ ಹಂತಕ್ಕೆ ಒಯ್ದಿದೆ.

ಸರ್ಕಾರಿ ಆಸ್ಪತ್ರೆ ವ್ಯವಸ್ಥೆಯೇ ಸರಿ ಇಲ್ಲ ಅನ್ನೋದು ತಪ್ಪು: ಸಚಿವ ಸುಧಾಕರ್‌

ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದಿವೆ. ಆದರೆ ಇಷ್ಟುವರ್ಷಗಳಲ್ಲೂ ಜನರಿಗೆ ದುಬಾರಿ ಚಿಕಿತ್ಸೆಯಿಂದಾಗಿ ಅತಿ ಹೆಚ್ಚು ಆರ್ಥಿಕ ಹೊರೆಯಾಗುತ್ತಿದೆ ಎಂದು ಹಿಂದಿನ ಯಾವ ಸರ್ಕಾರಗಳೂ ಆಲೋಚನೆ ಮಾಡಿರಲಿಲ್ಲ. ಆದರೆ ಅತಿ ಸಣ್ಣ ವಯಸ್ಸಿನಲ್ಲೇ ದೇಶ ಪರ್ಯಟನೆ ಮಾಡಿ, ಜನರ ನಾಡಿಮಿಡಿತವನ್ನು ಅರಿತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಆ ನಿಟ್ಟಿನಲ್ಲಿ ಚಿಂತನೆ ಮಾಡಿದ್ದರು. ದೇಶದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು 1/3 ಭಾಗದಷ್ಟುಜನಸಂಖ್ಯೆಯನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿವೆ ಎಂಬ ಅಂಶವನ್ನು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ. ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ತಳಮಟ್ಟದಿಂದಲೇ ದಶಕಗಳ ಕಾಲ ಕೆಲಸ ಮಾಡಿದ ಪ್ರಧಾನಿಗಳಿಗೆ ಇದರ ಅನುಭವವಿತ್ತು. ಆದ್ದರಿಂದ ಅವರು 50 ಕೋಟಿ ಜನರ ಆರೋಗ್ಯ ರಕ್ಷಣೆಯ ಗುರಿ ಇರಿಸಿಕೊಂಡು 2018ರ ಸೆಪ್ಟೆಂಬರ್‌ 23ರಂದು ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿ ಮಾಡಿದರು.

ಎಪಿಎಲ್‌ಗೂ ಯೋಜನೆ!: ಈ ಹಿಂದೆ ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಎಂಬ ಯೋಜನೆ ಜಾರಿಯಲ್ಲಿತ್ತು. ಇದನ್ನೇ ಆಯುಷ್ಮಾನ್‌ ಭಾರತ್‌ ಜೊತೆ ಸೇರಿಸಿ, ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕವಾಗಿಸಿ, ಬಿಪಿಎಲ್‌ ಕುಟುಂಬಗಳಿಗೆ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿ ತರಲಾಯಿತು. 2018ರ ಅಕ್ಟೋಬರ್‌ 30ರಂದು ಜಾರಿಯಾದ ಈ ಯೋಜನೆ ಇಂದು ಅನೇಕ ಕುಟುಂಬಗಳು ಆರೋಗ್ಯಕ್ಕಾಗಿ ಅತಿಯಾಗಿ ಹಣ ಖರ್ಚು ಮಾಡುವುದನ್ನು ತಪ್ಪಿಸಿದೆ. ಇಷ್ಟೇ ಅಲ್ಲದೆ, ಈ ಯೋಜನೆಯನ್ನು ಇನ್ನಷ್ಟುವಿಸ್ತರಿಸುವ ಸಲುವಾಗಿ, ಎಪಿಎಲ್‌ ಕಾರ್ಡ್‌ ಹೊಂದಿರುವವರಿಗೂ ಯೋಜನೆಯ ಲಾಭ ನೀಡಲಾಗಿದೆ. 

ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಈ ಕ್ರಮ ಜಾರಿಯಾಗಿದೆ ಎಂಬುದು ಗಮನಾರ್ಹ. ಈ ಮೂಲಕ ‘ಸಾರ್ವತ್ರಿಕ ಆರೋಗ್ಯ ಸೇವೆ’ ಎಂಬ ಅಂಶವನ್ನು ಎತ್ತಿ ಹಿಡಿಯಲಾಗಿದೆ. ಈ ಯೋಜನೆಯಲ್ಲಿ ಎಪಿಎಲ್‌ ಕುಟುಂಬಕ್ಕೆ ವರ್ಷಕ್ಕೆ 1.50 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ ದೊರೆಯುತ್ತದೆ. 16 ಜಿಲ್ಲಾಸ್ಪತ್ರೆ, 20 ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, 2,440 ಪ್ರಾಥಮಿಕ ಆರೋಗ್ಯ ಕೇಂದ್ರ, 211 ಸಮುದಾಯ ಆರೋಗ್ಯ ಕೇಂದ್ರ, 575 ಖಾಸಗಿ ಆಸ್ಪತ್ರೆ ಸೇರಿದಂತೆ ಒಟ್ಟು 3,443 ಆಸ್ಪತ್ರೆಗಳಲ್ಲಿ 1,650 ಬಗೆಯ ಉಚಿತ ಸೇವೆ ದೊರೆಯುತ್ತಿದೆ. ಅಲ್ಲದೆ, ಕೋವಿಡ್‌ ಸಮಯದಲ್ಲಿ 788 ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿ ಸೇವೆ ನೀಡಲು ನೋಂದಾಯಿಸಿಕೊಂಡಿವೆ. ಇದು ಇಡೀ ದೇಶದಲ್ಲೇ ಅತಿ ಹೆಚ್ಚು ಸಂಖ್ಯೆ ಎಂಬುದು ಮತ್ತೊಂದು ಶ್ಲಾಘನೀಯ ಸಂಗತಿ.

ಕೋವಿಡ್‌ನಲ್ಲಿ ಕೈಹಿಡಿದ ಯೋಜನೆ: ಕೋವಿಡ್‌ ಸಾಂಕ್ರಾಮಿಕ ಕೇವಲ ಆರೋಗ್ಯ ಸಮಸ್ಯೆಯನ್ನು ತರಲಿಲ್ಲ. ಇದು ಜನರ ಆರ್ಥಿಕ ಹಾಗೂ ಸಾಮಾಜಿಕ ಬದುಕಿನ ಮೇಲೂ ತೀವ್ರ ಪರಿಣಾಮ ಬೀರಿತು. ಇಂತಹ ಸಂದರ್ಭದಲ್ಲಿ ರಾಜ್ಯದ ಜನರ ಪಾಲಿಗೆ ಆಶಾಕಿರಣವಾಗಿ ಗೋಚರಿಸಿದ್ದೇ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ. 2020-21 ಹಾಗೂ 2021-22ನೇ ಸಾಲಿನಲ್ಲಿ ಇದೇ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 1,49,101 ಕೊರೋನಾ ರೋಗಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,38,453 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಒಟ್ಟು 2,87,554 ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಿದ್ದು, ಅದಕ್ಕಾಗಿ 1,286.3 ಕೋಟಿ ರು. ವೆಚ್ಚ ಭರಿಸಲಾಗಿದೆ.

ಡಿಜಿಟಲ್‌ ಆರೋಗ್ಯ ಕ್ರಾಂತಿ: ಐಟಿ ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ, ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್‌ ಇಂಡಿಯಾದ ಪರಿಕಲ್ಪನೆಯನ್ನು ಆರೋಗ್ಯ ವಲಯದಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸಿದೆ. ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿ ಕುಟುಂಬಗಳ ದತ್ತಾಂಶವನ್ನು ಒಂದೆಡೆ ಸಂಗ್ರಹಿಸಿಡಲು ಇ-ಕುಟುಂಬ ಕಾರ್ಯಕ್ರಮ ಜಾರಿಯಾಗಿದೆ. ಇದರಡಿ ಪ್ರತಿ ಕುಟುಂಬದ ರೇಷನ್‌ ಕಾರ್ಡ್‌ ಸಂಖ್ಯೆ ಆಧರಿಸಿ ಒಂದು ಡಿಜಿಟಲ್‌ ಗುರುತು ನೀಡಲಾಗಿರುತ್ತದೆ. ಈ ವ್ಯವಸ್ಥೆಯನ್ನು ಆಯುಷ್ಮಾನ್‌ ಕಾರ್ಡ್‌ನೊಂದಿಗೂ ಸಂಪರ್ಕಿಸಲಾಗಿದೆ.

ಸಮಾಜದ ಎಲ್ಲಾ ಕ್ಷೇತ್ರಗಳೂ ತಾಂತ್ರಿಕತೆ ಅವಲಂಬಿಸಿವೆ: ಸಚಿವ ಸುಧಾಕರ್‌

2019ರ ಮೇ ತಿಂಗಳಿಂದ ಬೆರಳಚ್ಚು ಆಧರಿಸಿ ಕಾರ್ಡ್‌ ನೀಡುವ ಕ್ರಮ ಜಾರಿ ತರಲಾಗಿದೆ. ಆದರೆ ವೃದ್ಧರು, ಮಕ್ಕಳು, ಕುಷ್ಠರೋಗಿಗಳು ಸೇರಿದಂತೆ ಕೆಲ ವರ್ಗಕ್ಕೆ ಬೆರಳಚ್ಚು ವ್ಯವಸ್ಥೆಯಿಂದ ತೊಂದರೆಯಾಗುತ್ತಿದೆ ಎಂದು ತಿಳಿದುಬಂದಿತ್ತು. ಇದಕ್ಕಾಗಿ ಕಣ್ಣಿನ ಐರಿಸ್‌ ಸ್ಕ್ಯಾ‌ನ್‌ ಮಾಡಿ ಕಾರ್ಡ್‌ ಬಳಸುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 408 ಐರಿಸ್‌ ಸ್ಕ್ಯಾನರ್‌ಗಳನ್ನು ಅಳವಡಿಸಿದ್ದು, 13,048 ಕಾರ್ಡ್‌ಗಳನ್ನು ಈ ವಿಶೇಷ ವರ್ಗದ ಫಲಾನುಭವಿಗಳಿಗೆ ವಿತರಿಸಲಾಗಿದೆ. ಕೋವಿಡ್‌ ಸಮಯದಲ್ಲಿ ಬೆರಳಿನಿಂದ ಸೋಂಕು ಹರಡುವ ಸಾಧ್ಯತೆ ಇದ್ದ ಸಂದರ್ಭದಲ್ಲಿ ಇದು ಹೆಚ್ಚು ಪರಿಣಾಮಕಾರಿ ವ್ಯವಸ್ಥೆಯಾಗಿ ಹೆಸರು ಪಡೆದಿದೆ.

ಸಾರ್ವತ್ರಿಕ ಆರೋಗ್ಯ ಎಂದರೆ ಜನರಿಗೆ ಕೇವಲ ಆರೋಗ್ಯ ಸೌಲಭ್ಯಗಳನ್ನು ನೀಡುವುದಲ್ಲ. ಇದು ಡಿಜಿಟಲ್‌ ಸೇರಿದಂತೆ ಎಲ್ಲಾ ಬಗೆಯ ಸಾಧನಗಳನ್ನು ಬಳಸಿಕೊಂಡು ರಾಜ್ಯದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಸಿಕ್ಕಿದೆಯೇ ಎಂದು ಖಾತರಿಪಡಿಸಿಕೊಳ್ಳುವ ಜನ ಕೇಂದ್ರಿತ ಪರಿಕಲ್ಪನೆ. ‘ಪ್ರತಿಯೊಬ್ಬರಿಗೂ ಆರೋಗ್ಯ’ ಎಂಬುದನ್ನು ಮತ್ತೊಮ್ಮೆ ದೃಢಪಡಿಸಲು ಈಗ 1.10 ಕೋಟಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸುವ ಮೂಲಕ ಇನ್ನೊಂದು ಮೈಲುಗಲ್ಲಿನ ಹೆಜ್ಜೆ ಇರಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.

Follow Us:
Download App:
  • android
  • ios