Anti Conversion Bill : 'ಸಿಎಂ ಬೊಮ್ಮಾಯಿ ಹೇಗೂ ಹೋಗುತ್ತಿದ್ದಾರೆ : ಒಳ್ಳೇದು ಮಾಡಿ ಹೋಗಲಿ'

  • ಮತಾಂತರ ನಿಷೇಧ ಕಾನೂನಿಗೆ ವಿರೋಧವಾಗಿದೆ.  ಪರಿಷತ್ ನಲ್ಲಿ‌ ಮಸೂದೆ ಮಂಡಿಸುವುದು ಬೇಡ
  • ಬಿಜೆಪಿಯವರು ದಾರಿ ತಪ್ಪಿದ ಮಕ್ಕಳು. ಅವರಿಗೆ ಏನೂ‌ ಹೇಳಲು ಆಗುವುದಿಲ್ಲ
Anti Conversion Bill  Against Indian Law Says MLC C M  Ibrahim snr

ಬೆಳಗಾವಿ (ಡಿ.21):  ಮತಾಂತರ ನಿಷೇಧ (  Anti Conversion Bill ) ಕಾನೂನಿಗೆ  ವಿರೋಧವಾಗಿದೆ.  ಪರಿಷತ್ ನಲ್ಲಿ‌ ಮಸೂದೆ ಮಂಡಿಸಿದರೆ ಬೇಡ ಎಂದು ನಾವು ಅದನ್ನು ವಿರೋಧ ಮಾಡುತ್ತೇವೆ. ಬಿಜೆಪಿಯವರು (BJP) ದಾರಿ ತಪ್ಪಿದ ಮಕ್ಕಳು. ಅವರಿಗೆ ಏನೂ‌ ಹೇಳಲು ಆಗುವುದಿಲ್ಲ ಎಂದು  ಎಂಎಲ್‌ಸಿ (MLC) ಸಿಎಂ ಇಬ್ರಾಹಿಂ  (CM Ibrahim) ಸುವರ್ಣ ಸೌಧದಲ್ಲಿಂದು ಹೇಳಿದರು.  ಮತಾಂತರ ಮಸೂದೆ ಮಂಡನೆಗೆ ಬಿಜೆಪಿ ನಿರ್ಧಾರವಾಗಿದೆ.  ಬಿಜೆಪಿಯವರು ಈಗಾಗಳೇ ದಾರಿ ತಪ್ಪಿ ಹೋಗಿದ್ದಾರೆ.  ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು  ಹೇಗೂ ಹೋಗುತ್ತಿದ್ದಾರೆ.  ಅವರು ಹೋಗುವ ಮುನ್ನ ಒಳ್ಳೆ ಕೆಲಸ ಮಾಡಿ ಹೋಗಲಿ ಎಂದು ಇಬ್ರಾಹಿಂ ಹೇಳಿದರು. 

ಮತಾಂತರ ತಡೆ ಮಸೂದೆ ತರುವ  ಮುನ್ನ ವಿದೇಶಿ‌ ಕನ್ನಡಿಗರ (Kannadigas) ಬಗ್ಗೆಯೂ ಸರ್ಕಾರ ಯೋಚಿಸಲಿ. ಇಲ್ಲಿ ಆ ಕಾಯ್ದೆ ತಂದರೆ ವಿದೇಶಗಳಲ್ಲಿ ಕನ್ನಡಿಗರು ನೆಮ್ಮದಿಯಾಗಿ ಇರಲು‌ ಸಾಧ್ಯವೇ?  ಜೊತೆಗೆ ಈ ಕಾನೂನು ಕ್ರಿಶ್ಚಿಯನ್ (Christian community ) ಸಮುದಾಯ ಗುರಿಯಾಗಿಸಿಕೊಂಡು ತರುತ್ತಿದ್ದಾರೆ. ಆದರೆ ಬಿಜೆಪಿ (BJP) ಮುಖಂಡರೆ ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಇದರಿಂದ ಅವರ ವಿರುದ್ಧವೇ ಕಾನೂನು ತರುತ್ತಿರೋದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. 

ಮತಾಂತರ ನಿಷೇಧ ಜತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ. ಹೊರಗಿಂದ ಬಂದು ಪಕ್ಷ ಸೇರಿದವರು ಆರು ತಿಂಗಳು ಮಂತ್ರಿಗಳಾಗುವಂತಿಲ್ಲ‌ ಎಂದು ಕಾನೂನು‌ ತರಲಿ. ಈ ಹಿಂದೆ ಆರು‌ ಜನ ಮಂತ್ರಿಗಳು ವಿಡಿಯೋ ಪ್ರಸಾರಕ್ಕೆ ಸ್ಟೇ ತಂದಿದ್ದಾರೆ. ಮೊದಲು ಆ ಸ್ಟೇ ತೆರವು‌ ಮಾಡಲಿ ಎಂದು ವಲಸಿಗ ಮುಖಂಡರಿಗೂ ಈ ವೇಳೆ ಸಿಎಂ ಇಬ್ರಾಹಿಂ ಟಾಂಗ್ ನೀಡಿದರು. 

ಕಾಯ್ದೆಯಲ್ಲಿ ಏನಿದೆ..?  :  ರಾಜ್ಯದಲ್ಲಿ ಒತ್ತಾಯ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದನ್ನು ನಿಷೇಧಿಸಲು, ಮತಾಂತರ ಆರೋಪ ಸಾಬೀತಾದರೆ ಕನಿಷ್ಠ 3ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸುವ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಮಸೂದೆ - 2021’ಕ್ಕೆ (Karnataka Anti Conversion Bill )ಸೋಮವಾರ ಸಚಿವ ಸಂಪುಟ(Cabinet) ಸಭೆ ಒಪ್ಪಿಗೆ ನೀಡಿದ್ದು, ಮಂಗಳವಾರ ಅಥವಾ ಬುಧವಾರ ಸದನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ(Winter Session) ತೀವ್ರ ಕುತೂಹಲ ಕೆರಳಿಸಿರುವ ವಿವಾದಾತ್ಮಕ ಮಸೂದೆ ಮಂಡಿಸಲು ಸುವರ್ಣಸೌಧದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉಭಯ ಸದನಗಳಲ್ಲಿ ಮಸೂದೆಗೆ ಒಪ್ಪಿಗೆ ದೊರೆತು ಕಾಯಿದೆ ಅನುಷ್ಠಾನಗೊಂಡರೆ ರಾಜ್ಯದಲ್ಲಿ ಒತ್ತಾಯ ಪೂರ್ವಕ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವ ಚಟುವಟಿಕೆಗಳು ನಿಷೇಧವಾಗಲಿವೆ.

ಪ್ರಸ್ತಾವಿತ ಮಸೂದೆಯಲ್ಲಿ ಒತ್ತಾಯ, ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ನಿಷೇಧಿಸುವ ಪ್ರಸ್ತಾಪ ಇದೆ. ಪರಿಶಿಷ್ಟಜಾತಿ, ಪಂಗಡ, ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದವನಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವವರೆಗೆ ಜೈಲು, 50 ಸಾವಿರ ರು. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇತರ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ವರ್ಷದಿಂದ 5 ವರ್ಷದವರೆಗೆ ಜೈಲು ಮತ್ತು 25 ಸಾವಿರ ರು. ದಂಡ, ಸಾಮೂಹಿಕ ಮತಾಂತರ ಮಾಡಿದವನಿಗೆ 3 ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರು. ದಂಡ ವಿಧಿಸಲು ಅವಕಾಶವಿದೆ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಆಸ್ಪತ್ರೆ, ಧಾರ್ಮಿಕ ಮಿಷನರಿಗಳು, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಸೇರಿದಂತೆ ನಿರ್ದಿಷ್ಟಸಂಸ್ಥೆಗಳು ಇಬ್ಬರು ಅಥವಾ ಹೆಚ್ಚು ಮಂದಿಯ ಸಾಮೂಹಿಕ ಮತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಅಂಥ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಯಾವುದು ಕಾನೂನು ಬಾಹಿರ:
ಮಸೂದೆಯ ಪ್ರಕಾರ, ಯಾವುದೇ ರೀತಿಯ ವಸ್ತು ಅಥವಾ ಹಣದ ರೂಪದಲ್ಲಿ ಉಡುಗೊರೆ, ಯಾವುದೇ ಧರ್ಮದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ, ಉಚಿತ ಶಿಕ್ಷಣ, ವಿವಾಹವಾಗುವುದಾಗಿ ಆಮಿಷ ಅಥವಾ ಉತ್ತಮ ಜೀವನಶೈಲಿ, ಭಾವನಾತ್ಮಕವಾಗಿ ಸೆಳೆದು ಬಲವಂತವಾಗಿ ಮತಾಂತರ ಮಾಡುವುದು ಕಾನೂನು ಬಾಹಿರ.

ಪರಿಹಾರಕ್ಕೂ ಅವಕಾಶ:
ಒಂದೊಮ್ಮೆ ಮತಾಂತರಗೊಳಿಸಿರುವುದು ನ್ಯಾಯಾಲಯದಲ್ಲಿ ಸಾಬೀತಾದರೆ, ಮತಾಂತರಕ್ಕೆ ಒಳಗಾದವನಿಗೆ ಮತಾಂತರ ಮಾಡಿದವನು ಸೂಕ್ತ ಪರಿಹಾರ ನೀಡಲು ಕೂಡ ಅವಕಾಶ ಕಲ್ಪಿಸಲು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ 5 ಲಕ್ಷ ರು. ಪರಿಹಾರ ನೀಡಬೇಕು. ಅಲ್ಲದೆ ಹೆಚ್ಚುವರಿಯಾಗಿ ದಂಡ ನೀಡಬೇಕು ಎಂಬ ಅಂಶಗಳಿವೆ. ಈ ಹಿಂದೆಯೂ ಮತಾಂತರ ಮಾಡಿದ್ದರೆ, ಅಂಥವರಿಗೆ ಎರಡು ಪಟ್ಟು ಶಿಕ್ಷೆ ವಿಧಿಸಲು ಕೂಡ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಅಂತಹ ವಿವಾಹವನ್ನು ಅಸಿಂಧು ಎಂದು ಘೋಷಿಸಲು ಕುಟುಂಬ ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ, ಮತಾಂತರ ಅಪರಾಧವನ್ನು ಜಾಮೀನುರಹಿತ ಹಾಗೂ ಸಂಜ್ಞೆಯ ಅಪರಾಧ (ನೇರವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು) ಎಂದು ಪರಿಗಣಿಸಬಹುದು. ಒತ್ತಾಯಪೂರ್ವಕವಾಗಿ ಮತಾಂತರ ಮಾಡುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದು. ಒತ್ತಾಯದ ಮತಾಂತರ ಅಸಿಂಧುವಾಗುತ್ತದೆ ಎಂದು ಮಸೂದೆಯಲ್ಲಿದೆ.

ವಿವಾಹ ಅಸಿಂಧುಗೊಳ್ಳುವ ಬಗ್ಗೆ ಕೆಲ ಸಂಪುಟ ಸದಸ್ಯರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ, ಅಂತಿಮವಾಗಿ ಯಾವುದೇ ಬದಲಾವಣೆ ಇಲ್ಲದೆ ಕರಡಿಗೆ ಅನುಮೋದನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಕಾನೂನು ಆಯೋಗ ಶಿಫಾರಸು:
ಸಂವಿಧಾನದ ಅನುಚ್ಛೇದ 25ರಲ್ಲಿ ಎಲ್ಲರಿಗೂ ಅವರವರ ಧರ್ಮವನ್ನು ಅನುಸರಿಸಲು ಮತ್ತು ಪ್ರಚಾರ ಮಾಡಲು ಅವಕಾಶ ನೀಡಲಾಗಿದೆ. ಆದರೆ, ರೆವರೆಂಡ್‌ ಸ್ಟೇನಿಲಡ್‌ ವರ್ಸಸ್‌ ಮಧ್ಯಪ್ರದೇಶ ಸರ್ಕಾರ ಪ್ರಕರಣದಲ್ಲಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌, ಧರ್ಮದ ಪ್ರಚಾರ ಮಾಡಬಹುದು ಎಂಬ ಕಾರಣಕ್ಕೆ ಮತಾಂತರಕ್ಕೆ ಅವಕಾಶ ಇದೆಯೆಂದು ಹೇಳಲಾಗದು ಎಂದು ಸ್ಪಷ್ಟವಾಗಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಅನುಚ್ಛೇದ 25ನ್ನು ದುರ್ಬಳಕೆ ಮಾಡಿಕೊಂಡು ಮತಾಂತರ ಮಾಡಿರುವ ಹಲವು ಪ್ರಕರಣಗಳು ನಡೆದಿವೆ. ಹೀಗಾಗಿ ರಾಜ್ಯ ಕಾನೂನು ಆಯೋಗವು ಈ ಬಗ್ಗೆ ಅಧ್ಯಯನ ಮಾಡಿ ಕಾನೂನು ರೂಪಿಸಲು ಶಿಫಾರಸು ಮಾಡಲಿದೆ ಎನ್ನಲಾಗಿದೆ.

ಮತಾಂತರಕ್ಕೂ ಪಕ್ರಿಯೆ?
ಯಾವುದೇ ವ್ಯಕ್ತಿ ಧರ್ಮ ಬದಲಿಸುವುದಾದರೆ ಜಿಲ್ಲಾಧಿಕಾರಿಗಳಿಗೆ 60 ದಿನಗಳ ಮೊದಲು ನಮೂನೆ-1ರಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಜಿಲ್ಲಾಧಿಕಾರಿಯು ಮತಾಂತರಗೊಳ್ಳುವವನನ್ನು ಮತ್ತು ಮತಾಂತರ ಮಾಡುವವನನ್ನು ಪೊಲೀಸರ ನೆರವಿನಿಂದ ವಿಚಾರಣೆ ನಡೆಸಬೇಕು. ನಮೂನೆ -3ರಲ್ಲಿ ಮಾಹಿತಿ ಪಡೆದುಕೊಳ್ಳಬೇಕು. ಬಳಿಕ ಜಿಲ್ಲಾಧಿಕಾರಿಗಳು ಮತಾಂತರಗೊಂಡ ವ್ಯಕ್ತಿಯ ಶಾಲೆ, ಕಾಲೇಜುಗಳ ಸಕ್ಷಮ ಪ್ರಾಧಿಕಾರಕ್ಕೆ ಮತ ಬದಲಾವಣೆಗೆ ಸೂಚಿಸಬೇಕು ಎಂದು ಹೇಳಲಾಗಿದೆ.

ಮೀಸಲಾತಿ, ಸೌಲಭ್ಯ ಸ್ಥಗಿತಕ್ಕೆ ಅಪಸ್ವರ?
ಮತಾಂತರವನ್ನು ತಡೆಯಲುಮತಾಂತರಗೊಂಡ ಪರಿಶಿಷ್ಟರಿಗೆ ಸಿಗುವ ಜಾತಿ ಮೀಸಲಾತಿ ಮತ್ತು ಇತರ ಸೌಲಭ್ಯಗಳು ಸ್ಥಗಿತಗೊಳ್ಳಲು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಬಗ್ಗೆ ಸಂಪುಟ ಸದಸ್ಯರಲ್ಲೇ ಆಕ್ಷೇಪ ವ್ಯಕ್ತವಾಗಿದೆ. ಸುಪ್ರೀಂ ಕೋರ್ಟ್‌ ಮತಾಂತರಗೊಂಡವರಿಗೆ ಸಿಗುವ ಮೀಸಲಾತಿ ಸೌಲಭ್ಯ ಸ್ಥಗಿತಗೊಳಿಸಬಾರದು ಎಂದು ಆದೇಶ ಹೊರಡಿಸಿದೆ. ಹೀಗಾಗಿ ಈ ನಿಯಮ ಕೈಬಿಡುವಂತೆಯೂ ಸೋಮವಾರದ ಸಂಪುಟ ಸಭೆಯಲ್ಲಿ ಸಲಹೆ ಕೇಳಿ ಬಂದಿದೆ. ಅಂತಿಮ ಮಸೂದೆ ಪ್ರತಿಯಲ್ಲಿ ಸರ್ಕಾರ ಈ ನಿಯಮವನ್ನು ಪ್ರಸ್ತಾಪಿಸಲಿದೆಯೇ ಅಥವಾ ಕೈ ಬಿಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

Latest Videos
Follow Us:
Download App:
  • android
  • ios