ಅಂಜನಾದ್ರಿ ಬೆಟ್ಟದ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ಹಿಂದಿನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಆಗಸ್ಟ್ 11 ರಂದು ಆನ್‌ಲೈನ್ ಮೂಲಕ ಹಾಜರಾಗುವಂತೆ ಸೂಚಿಸಲಾಗಿದೆ.
ಕೊಪ್ಪಳ (ಆ.06): ಹನುಮನ ಜನ್ಮಸ್ಥಳವೆಂದೇ ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ಹಿಂದಿನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರಿಗೆ ಆಗಸ್ಟ್ 11 ರಂದು ಆನ್‌ಲೈನ್ ಮೂಲಕ ಖುದ್ದು ಹಾಜರಾಗುವಂತೆ ಸರ್ವೋಚ್ಚ ನ್ಯಾಯಾಲಯ ತಾಕೀತು ಮಾಡಿದೆ.
ವಿವಾದದ ಹಿನ್ನೆಲೆ:
ಅಂಜನಾದ್ರಿ ಬೆಟ್ಟದ ಮೇಲಿರುವ ಆಂಜನೇಯ ದೇವಸ್ಥಾನದ ಪೂಜಾ ಹಕ್ಕಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಿವಾದವಿದೆ. ಈ ದೇವಸ್ಥಾನವು ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದೆ. ಹಲವು ವರ್ಷಗಳಿಂದ ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾದಾಸ್ ಬಾಬಾ ಅವರು, ತಮಗೇ ಪೂಜೆಯ ಹಕ್ಕು ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ವಿದ್ಯಾದಾಸ್ ಬಾಬಾ ಅವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಮಧ್ಯಂತರ ಆದೇಶ ನೀಡಿತ್ತು. ಅಲ್ಲದೆ, ಅವರಿಗೆ ಬೆಟ್ಟದ ಮೇಲೆ ಮೂಲಭೂತ ಸೌಕರ್ಯಗಳಿರುವ ಕೊಠಡಿ ಒದಗಿಸುವಂತೆಯೂ ಸೂಚಿಸಿತ್ತು.
ಆದರೆ, ಇತ್ತೀಚೆಗೆ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಅಂಜನಾದ್ರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೇರೊಬ್ಬ ಅರ್ಚಕರು ಪೂಜೆ ಸಲ್ಲಿಸಿದ್ದರು. ಇದನ್ನು ವಿದ್ಯಾದಾಸ್ ಬಾಬಾ ವಿರೋಧಿಸಿದ್ದರು. ಜೊತೆಗೆ, ಬೇರೊಬ್ಬ ಅರ್ಚಕರು ಪೂಜೆ ಸಲ್ಲಿಕೆ ಮಾಡಿದ್ದನ್ನು ವಿಡಿಯೋ ಮಾಡಿಟ್ಟುಕೊಂಡು, ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದರು. ಇದಾದ ಬಳಿಕ, ದೇವಸ್ಥಾನದ ಹುಂಡಿ ಹಣದ ವಿಚಾರವಾಗಿಯೂ ವಿದ್ಯಾದಾಸ್ ಬಾಬಾ ಮತ್ತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ರಾವ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವಿದ್ಯಾದಾಸ್ ಬಾಬಾ ಅವರು ತಮ್ಮ ವಕೀಲ ವಿಷ್ಣು ಶಂಕರ್ ಜೈನ್ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ಜಿಲ್ಲಾಡಳಿತವು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಲಾಗಿತ್ತು.
ಸುಪ್ರೀಂ ಕೋರ್ಟ್ ಆದೇಶ:
ವಿದ್ಯಾದಾಸ್ ಬಾಬಾ ಅವರ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ನಡೆಸಿತು. ವಾದ-ಪ್ರತಿವಾದಗಳನ್ನು ಆಲಿಸಿದ ಪೀಠವು, ಜಿಲ್ಲಾಡಳಿತವು ನ್ಯಾಯಾಲಯದ ಆದೇಶವನ್ನು ಪಾಲಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ 11 ರಂದು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಆನ್‌ಲೈನ್ ಮೂಲಕ ಖುದ್ದು ಹಾಜರಾಗಿ ವಿವರಣೆ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಪ್ರಕರಣವು ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ಸುಪ್ರೀಂ ಕೋರ್ಟ್‌ನ ಮುಂದಿನ ಆದೇಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
