61 ವರ್ಷ ಪ್ರಾಯದ ಹನುಮ ಭಕ್ತರೊಬ್ಬರು ಜೋಳ ತುಂಬಿದ್ದ 102 ಕೇಜಿ ತೂಕದ ಮೂಟೆಯನ್ನು ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ. ಬೆನ್ನ ಮೇಲೆಮೂಟೆ ಹೊತ್ತು ಅವರು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲನ್ನು ಏರಿ ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಬಾಗಲಕೋಟೆ/ಕೊಪ್ಪಳ: ಇತ್ತೀಚೆಗೆ ಎಳೆಯ ಪ್ರಾಯದ ಯುವಕ/ಯುವತಿಯರೇ ಯಾವುದೇ ಭಾರವನ್ನು ಹೊರದೇ ಬರಿಗೈಲಿ ಬೆಟ್ಟ ಹತ್ತೋದಕ್ಕೆ ಸುಸ್ತಾಗಿ ಬಿಡ್ತಾರೆ. 3 ರಿಂದ 4 ಮಹಡಿಯ ಕಟ್ಟಡದಲ್ಲೂ ಇತ್ತೀಚೆಗೆ ಲಿಫ್ಟ್ ಇರೋದನ್ನು ಇಂದು ನೋಡಬಹುದು. ಜನ ಆಧುನಿಕತೆಯ ತಂತ್ರಜ್ಞಾನದ ಎಲ್ಲಾ ಸವಲತ್ತುಗಳನ್ನು ಬಳಸುತ್ತಾ ಬಳಸುತ್ತಾ ದೇಹಕ್ಕೆ ವ್ಯಾಯಾಮ ಇಲ್ಲದಂತಾಗಿ ಇನ್ನಷ್ಟು ಮತ್ತಷ್ಟು ದುರ್ಬಲರಾಗುತ್ತಿದ್ದಾರೆ. ದೈನಂದಿನ ಕೆಲಸ ಚಟುವಟಿಕೆಗಳನ್ನೇ ವ್ಯಾಯಾಮದಂತೆ ಮಾಡುವ ಬದಲು ಎಲ್ಲವನ್ನು ಯಂತ್ರಗಳಿಗೆ ಒಪ್ಪಿಸಿ ಜಿಮ್‌ಗಳಲ್ಲಿ ಹಣ ಕೊಟ್ಟು ಬೆವರಿಳಿಸಿಕೊಳ್ಳುತ್ತಿದ್ದಾರೆ. ಆದರೆ ಹಳ್ಳಿಯಲ್ಲಿ ಹೊಲದಲ್ಲಿ ದುಡಿಮೆ ಮಾಡುವ ರೈತ ತನ್ನ ಕಾಯಕದಲ್ಲೇ ದೇಹಕ್ಕೆ ಬೇಕಾಗುವ ವ್ಯಾಯಾಮವನ್ನು ಮಾಡುತ್ತಿದ್ದು, ಇಳಿ ವಯಸ್ಸಿನಲ್ಲೂ ಸಧೃಡ ಮೈಕಟ್ಟಿನ ಜೊತೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ಜಮಖಂಡಿಯ ರೈತ ನಿಂಗಪ್ಪ ಸಾವನೂರ.

102 ಕೇಜಿ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ರೈತ

ಹೌದು ಜಮಖಂಡಿಯ ಹುನ್ನೂರು ಗ್ರಾಮದ ರೈತರೊಬ್ಬರ ತಮ್ಮ ಶಕ್ತಿ ಸಾಮರ್ಥ್ಯದ ಮೂಲಕ ಈಗ ರಾಜ್ಯದೆಲ್ಲೆಡೆ ಸುದ್ದಿಯಾಗುತ್ತಿದ್ದಾರೆ. ಹೌದು 61 ವರ್ಷ ಪ್ರಾಯದ ಹನುಮ ಭಕ್ತರೊಬ್ಬರು ಜೋಳ ತುಂಬಿದ್ದ 102 ಕೇಜಿ ತೂಕದ ಮೂಟೆಯನ್ನು ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ. ಬೆನ್ನ ಮೇಲೆ 102 ಕೇಜಿ ತೂಕದ ಮೂಟೆ ಹೊತ್ತು ಅವರು ಅಂಜನಾದ್ರಿ ಬೆಟ್ಟ 575 ಮೆಟ್ಟಿಲನ್ನು ಏರಿ ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಯುವಕರಿಗೆ ಸ್ಪೂರ್ತಿಯಾಗುತ್ತಿದ್ದಾರೆ.

View post on Instagram

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಅಂದಹಾಗೆ ಇಷ್ಟೊಂದು ಭಾರದ ಮೂಟೆ ಹೊತ್ತು 575 ಮೆಟ್ಟಿಲನ್ನು ಬರೀಗಾಲಲ್ಲಿ ಏರಿ ಸಾಧನೆ ಮಾಡಿದವರು ಜಮಖಂಡಿಯ ಹುನ್ನೂರು ಗ್ರಾಮದ ರೈತ 61 ವರ್ಷದ ನಿಂಗಪ್ಪ ಸವನೂರ ಎಂಬುವವರು. ಇವರು ಜುಲೈ 22 ರಂದು ಅಂದರೆ ನಿನ್ನೆ ಈ ಭಾರಿ ತೂಕದ ಜೋಳದ ಮೂಟೆಯನ್ನು ಹೊತ್ತು, ಎಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳದೇ ಕೇವಲ ಒಂದು ಗಂಟೆಯಲ್ಲಿ ಅಂಜನಾದ್ರಿ ಬೆಟ್ಟದ ತುದಿ ತಲುಪಿದ್ದಾರೆ. ನಿಂಗಪ್ಪ ಅವರು ಜೋಳದ ಮೂಟೆ ಹೊತ್ತು ಮೆಟ್ಟಿಲುಗಳನ್ನು ಹತ್ತುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಹನುಮಂತನ ಜನ್ಮ ಸ್ಥಳ ಅಂಜನಾದ್ರಿ

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವೂ ಹನುಮಂತನ ಜನ್ಮ ಸ್ಥಳವೆಂದು ಖ್ಯಾತಿ ಪಡೆದಿದ್ದು, ಪ್ರತಿದಿನವೂ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರಸ್ತುತ ಈ ಅಂಜನಾದ್ರಿ ಬೆಟ್ಟಕ್ಕೆ ಮೆಟ್ಟಿಲುಗಳನ್ನು ಏರಿಯೇ ಸಾಗಬೇಕು ಹೀಗಾಗಿ ವೃದ್ದರು ಅನಾರೋಗ್ಯಪೀಡಿತರು, ಅಸಕ್ತರಿಗೆ ಇಲ್ಲಿನ ಬೆಟ್ಟವನ್ನು ಏರುವುದಕ್ಕೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.

View post on Instagram

ಅಂಜನಾದ್ರಿ ಬೆಟ್ಟಕ್ಕೆ ರೋಪ್‌ ವೇ

ಈ ಬೇಡಿಕೆಯ ಹಿನ್ನೆಲೆಯಲ್ಲಿ ಈ ಅಂಜನಾದ್ರಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಿಸುವುದಕ್ಕೆ ಅನುಮೋದನೆಯೂ ಸಿಕ್ಕಿದ್ದು, ಮೂರು ಕಿಲೋ ಮೀಟರ್ ರೋಪ್‌ ವೇಯನ್ನು 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎನ್ನಲಾಗುತ್ತಿದ್ದು, ಈ ರೋಪ್ ವೇ ನಿರ್ಮಾಣವಾದರೆ ಒಂದು ಗಂಟೆಯಲ್ಲಿ 800 ಭಕ್ತರು ಅಂಜನಾದ್ರಿ ಬೆಟ್ಟವನ್ನು ತಲುಪಿ ಆಂಜನೇಯನ ದರ್ಶನ ಪಡೆಯಬಹುದಾಗಿದೆ.

ಒಟ್ಟಿನಲ್ಲಿ ನಿಂಗಪ್ಪ ಸಾವನೂರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಅವರ ಶಕ್ತಿ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಲಿಯುಗದ ಬಾಹುಬಲಿ ಎಂದು ನಿಂಗಪ್ಪ ಅವರನ್ನು ಬಣ್ಣಿಸುತ್ತಿದ್ದಾರೆ.