ಬೆಂಗಳೂರು[ಫೆ.23]: ರಾಜಧಾನಿಯ ಫ್ರೀಡಂ ಪಾರ್ಕ್ನಲ್ಲಿ ಪಾಕಿಸ್ತಾನ ಪರ ವಿದ್ಯಾರ್ಥಿನಿ ಅಮೂಲ್ಯ ಲಿಯೋನ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಿಬಿಎಂಪಿ ಜೆಡಿಎಸ್‌ ಸದಸ್ಯ ಹಾಗೂ ಅಂದಿನ ಕಾರ್ಯಕ್ರಮದ ಆಯೋಜಕ ಇಮ್ರಾನ್‌ ಪಾಷಾ ಅವರನ್ನು ಶನಿವಾರ Aru ತಾಸು ಉಪ್ಪಾರಪೇಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪೊಲೀಸರ ನೋಟಿಸ್‌ ಹಿನ್ನೆಲೆಯಲ್ಲಿ ವಿಚಾರಣೆಗೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಪಾಷಾ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿದ ತನಿಖಾಧಿಕಾರಿಗಳು, ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ರಾತ್ರಿ 9 ಗಂಟೆಗೆ ಕಳುಹಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಕಾರ್ಯಕ್ರಮ ಆಯೋಜಿಸಿದ್ದೆವು. ಈ ಕಾರ್ಯಕ್ರಮಕ್ಕೆ ನಾನು ಅಮೂಲ್ಯಳನ್ನು ಆಹ್ವಾನಿಸಿರಲಿಲ್ಲ. ಆದರೂ ಸಭೆ ಮಧ್ಯೆ ಆಕೆ ಹೇಗೆ ಬಂದಳು ಎಂಬುದು ನನಗೆ ಗೊತ್ತಿಲ್ಲ ಎಂದು ಪಾಷಾ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

ಘೋಷಣೆ ಕೂಗಿದ ತಕ್ಷಣವೇ ವೇದಿಕೆಯಲ್ಲೇ ಆಕೆಗೆ ವಿರೋಧ ವ್ಯಕ್ತಪಡಿಸಿದ್ದೇನೆ. ಕಾನೂನು ರೀತಿಯಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಆದರೆ ದೇಶದ ದ್ರೋಹ ಕೃತ್ಯ ಎಸಗಿಲ್ಲ. ಆ ರೀತಿ ನಡೆದುಕೊಳ್ಳುವವರನ್ನು ನಾನು ಸಹಿಸುವುದಿಲ್ಲ ಎಂದು ಪಾಷಾ ಸ್ಪಷ್ಟಪಡಿಸಿರುವುದಾಗಿ ಮೂಲಗಳು ಹೇಳಿವೆ.

ಆದರೆ ಇಮ್ರಾನ್‌ ಪಾಷಾ ಹೇಳಿಕೆಗೆ ತೃಪ್ತರಾಗದ ಪೊಲೀಸರು, ನಿಮಗೆ ಅರಿವಿಲ್ಲದೆ ಆಕೆ ಕಾರ್ಯಕ್ರಮದ ವೇದಿಕೆಗೆ ಬರಲು ಹೇಗೆ ಸಾಧ್ಯ? ಆಕೆಗೆ ವಿಐಪಿ ಪಾಸ್‌ ಕೊಟ್ಟಿದ್ದು ಯಾರು? ಎಂದೆಲ್ಲಾ ಪ್ರಶ್ನಿಸಿದ್ದಾರೆ. ಇವುಗಳಿಗೆ ಪಾಷಾ ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಅವರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಮಂದಿಗೆ ನೋಟಿಸ್‌:

ಪಾಕಿಸ್ತಾನ ಪರವಾಗಿ ಅಮೂಲ್ಯ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಿಬಿಎಂಪಿ ಸದಸ್ಯನ ವಿಚಾರಣೆ ಬೆನ್ನಲ್ಲೇ ಪೊಲೀಸರು ಮತ್ತಷ್ಟುಮಂದಿಯನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಆಯೋಜಕರ ತಂಡದ ಮುಖ್ಯಸ್ಥರಾಗಿ ಪಾಷಾ ಇದ್ದರು. ಆದರೆ ಸಿಎಎ ವಿರೋಧಿ ಹೋರಾಟದಲ್ಲಿರುವ ಕೆಲವರು, ಅಮೂಲ್ಯಳಿಗೆ ಆಹ್ವಾನ ನೀಡಿರಬಹುದು. ಹೀಗಾಗಿ ಆಕೆಯ ಸ್ನೇಹ ವಲಯದಲ್ಲಿದ್ದವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಪಿ ಮಟ್ಟದಲ್ಲಿ ತನಿಖಾ ರಚನೆ:

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಪಿ ರಮೇಶ್‌ ಬಾನೋತ್‌ ಅವರು, ಪ್ರಕರಣದ ತನಿಖೆಗೆ ಚಿಕ್ಕಪೇಟೆ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದಾರೆ. ಇದರಲ್ಲಿ ಮೂವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 15 ಮಂದಿ ಇದ್ದಾರೆ. ಪ್ರಕರಣದ ಸಂಬಂಧ ಅಮೂಲ್ಯ ಪೂರ್ವಾಪರ ಮಾಹಿತಿ ಕಲೆ ಹಾಕಲು ಮುಂದಾಗಿರುವ ತನಿಖಾ ತಂಡವು, ಸೋಮವಾರ ಚಿಕ್ಕಮಗಳೂರಿಗೆ ತೆರಳಿ ಆಕೆಯ ಪೋಷಕರನ್ನು ಸಹ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ಪ್ರಕರಣದ ಸಂಬಂಧ ಪೊಲೀಸರ ತನಿಖೆ ಮುಕ್ತವಾಗಿ ಸಹಕರಿಸಿದ್ದೇನೆ. ತನಿಖಾಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದು, ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ.

-ಇಮ್ರಾನ್‌ ಪಾಷಾ, ಬಿಬಿಎಂಪಿ ಜೆಡಿಎಸ್‌ ಸದಸ್ಯ