ಬೆಳಗಾವಿ[ಜ.19]:ನ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪಿಗೆ ನಾವು ಬದ್ಧ ಎಂದು ಮಹಾರಾಷ್ಟ್ರದ ಶಿವಸೇನೆ ನಾಯಕ, ರಾಜ್ಯಸಭಾ ಸದಸ್ಯ ಸಂಜಯ ರಾವುತ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲೇ ಇತ್ಯರ್ಥವಾಗಲಿದೆ. ಸುಪ್ರೀಂ ಕೋರ್ಟ್‌ ಉಭಯ ರಾಜ್ಯಗಳ ವಾದ ಆಲಿಸಬೇಕು. ಬಳಿಕ ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳು ಬದ್ಧರಾಗಬೇಕು ಎಂದರು.

ಬೆಳಗಾವಿಗೆ ಕಾಲಿಟ್ಟ ರಾವತ್: ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಪೊಲೀಸರು?

ದಶಕಗಳಿಂದ ವಿವಾದವಾಗಿದ್ದ ಅಯೋಧ್ಯೆ ರಾಮಮಂದಿರ ವಿವಾದ ಇತ್ಯರ್ಥವಾಗಿದೆ. ದೇಶದ ಸಂವಿಧಾನ, ಸುಪ್ರೀಂ ಕೋರ್ಟ್‌ ಎಲ್ಲಕ್ಕಿಂತ, ಎಲ್ಲರಿಗಿಂತ ದೊಡ್ಡದು. ಗಡಿ ವಿವಾದದ ಕುರಿತು ಹೇಳಿಕೆ ನೀಡದಂತೆ ನಾಯಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಪಕ್ಷದ ನಾಯಕರಿಗೆ ನಿರ್ದೇಶನ ನೀಡಿದ್ದಾರೆ. ಹಾಗಾಗಿ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಪೊಲೀಸ್‌ ಸರ್ಪಗಾವಲು:

ಬೆಳಗಾವಿ ಗೋಗಟೆ ರಂಗ ಮಂದಿರದಲ್ಲಿ ಶನಿವಾರ ಸಂಜೆ ಸಾರ್ವಜನಿಕ ವಾಚನಾಲಯ ಹಮ್ಮಿಕೊಂಡಿದ್ದ ಬ್ಯಾ.ನಾಥ ಪೈ ಅವರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಿವಸೇನೆ ನಾಯಕ ಸಂಜಯ ರಾವುತ ಶುಕ್ರವಾರವಷ್ಟೇ ತಮ್ಮ ಟ್ವಿಟರ್‌ ಖಾತೆಯಲ್ಲಿ ನಾನು ಬೆಳಗಾವಿಗೆ ಬಂದೇ ಬರುತ್ತೇನೆ. ಮುಂದೇನಾಗುತ್ತದೆ ನೋಡಿಯೇ ಬಿಡುತ್ತೇನೆ ಎಂದು ಬರೆದುಕೊಂಡಿದ್ದರು. ಶನಿವಾರ ಮಧ್ಯಾಹ್ನ 2.45ಕ್ಕೆ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ರಾವುತ್‌ ಬರುತ್ತಿದ್ದಂತೆಯೇ ಅವರನ್ನು ಸ್ವಾಗತಿಸಲು ಬಂದಿದ್ದ ಶಿವಸೇನೆ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಹಾಕಿದರು.

ಸಾವರ್ಕರ್ ವಿರೋಧಿಗಳನ್ನು ಅಂಡಮಾನ್ ಜೈಲಲ್ಲಿಡಬೇಕು: ರಾವತ್!

ಬೆಳಗಾವಿ, ಕಾರವಾರ, ನಿಪ್ಪಾಣಿ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಘೋಷಣೆ ಕೂಗಿದರು. ಬಳಿಕ ಸಂಜಯ ರಾವುತ್‌ ಅವರನ್ನು ಪೊಲೀಸರ ಸರ್ಪಗಾವಲಿನಲ್ಲಿ ಕಾಕತಿಯ ಖಾಸಗಿ ಹೋಟೆಲ್‌ವೊಂದಕ್ಕೆ ಕರೆದೊಯ್ಯಲಾಯಿತು.