ಸಾವರ್ಕರ್ ವಿರೋಧಿಗಳನ್ನು ಅಂಡಮಾನ್ ಜೈಲಲ್ಲಿಡಬೇಕು: ರಾವತ್!
‘ಸಾವರ್ಕರ್ ವಿರೋಧಿಗಳು ಎರಡು ದಿನ ಅಂಡಮಾನ್ ಜೈಲಿನಲ್ಲಿರಲಿ’| ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಹೇಳಿಕೆ| ‘ಸಾವರ್ಕರ್’ಗೆ ಭಾರತ ರತ್ನ ವಿರೋಧಿಸುವವರು ಅಂಡಮಾನ್ ಜೈಲಲ್ಲಿ ಇರಲಿ’| ‘ಸಾವರ್ಕರ್ ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನದ ಅರ್ಥವಾಗಬೇಕಾದರೆ ಅಂಡಮಾನ್ ಜೈಲಿಗೆ ಹೋಗಿ’| ವೀರ ಸಾವರ್ಕರ್’ಗೆ ಭಾರತ ರತ್ನ ನೀಡಲು ಕಾಂಗ್ರೆಸ್ ವಿರೋಧ|
ಮುಂಬೈ(ಜ.18): ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಅವರನ್ನು ವಿರೋಧಿಸುವವರನ್ನು ಎರಡು ದಿನ ಅಂಡಮಾನ್ ಜೈಲಿನಲ್ಲಿ ಇಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ವಿರೋಧಿಸುವವರು ಎರಡು ದಿನ ಅಂಡಮಾನ್ ಜೈಲಿನಲ್ಲಿ ಇದ್ದು ಬರಲಿ ಎಂದು ರಾವತ್ ಗುಡುಗಿದ್ದಾರೆ.
ಸಾವರ್ಕರ್ ವಿರೋಧಿಗಳನ್ನು ಎರಡು ದಿನ ಅಂಡಮಾನ್ ಜೈಲಿನಲ್ಲಿ ಇಟ್ಟರೆ, ಅವರ ತ್ಯಾಗ ಬಲಿದಾನ ಹಾಗೂ ಅವರು ದೇಶಕ್ಕಾಗಿ ನೀಡಿದ ಕೊಡುಗೆ ಅರ್ಥವಾಗಲಿದೆ ಎಂದು ಸಂಜಯ್ ರಾವತ್ ಹರಿಹಾಯ್ದಿದ್ದಾರೆ.
ಸಾವರ್ಕರ್ ಬಗ್ಗೆ ಮಾತಾಡಿದ್ರೆ ಹುಷಾರ್: ಕಾಂಗ್ರೆಸ್’ಗೆ ಎಚ್ಚರಿಸಿದ ಶಿವಸೇನೆ!
ವೀರ ಸಾವರ್ಕರ್ ಅಂಡಮಾನ್ ಜೈಲಿನಿಂದ ಬಿಡುಗಡೆಗಾಗಿ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಭಾರತ ರತ್ನ ನೀಡಬಾರದು ಎಂದು ಶಿವಸೇನೆಯ ಮಿತ್ರಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.
ಇನ್ನು ಸಂಜಯ್ ರಾವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ಕಾಂಗ್ರೆಸ್-ಶಿವಸೇನೆ ನಡುವೆ ರಾಜಕೀಯ ಭಿನ್ನಾಭಿಪ್ರಾಯವಿದ್ದರೂ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.