Asianet Suvarna News Asianet Suvarna News

ಸೊರಬ ತಾಲೂ​ಕಲ್ಲಿ ಮರಳು ದಂಧೆಗೆ ಕೃಷಿ ಜಮೀ​ನು​ಗಳು ಬಲಿ!

ತಾಲೂಕಿನ ದಂಡಾವತಿ-ವರದಾ ನದಿಗಳ ತೀರ ಪ್ರದೇಶ ಮತ್ತು ತರಿ ಜಮೀನಿನಲ್ಲಿ ನೀರು ಹಾಯಿಸಿ ಮರಳು ತೆಗೆಯುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇದ​ರಿಂದಾಗಿ ಜಮೀನುಗಳೆಲ್ಲ ಸತ್ವ ಕಳೆದುಕೊಂಡು ಗುಂಡಿ-ಗೊಟರುಗಳಿಂದ ಕೂಡಿ ಕೃಷಿ ಚಟುವಟಿಕೆ ನಡೆಸಲು ಯೋಗ್ಯತೆ ಕಳೆ​ದು​ಕೊ​ಳ್ಳು​ತ್ತಿವೆ.

Agricultural lands  destroyed due to sand trading in soraba at shivamogga rav
Author
First Published Jul 24, 2023, 12:28 PM IST

ಎಚ್‌.ಕೆ.ಬಿ. ಸ್ವಾಮಿ

ಸೊರಬ (ಜು.24) :  ತಾಲೂಕಿನ ದಂಡಾವತಿ-ವರದಾ ನದಿಗಳ ತೀರ ಪ್ರದೇಶ ಮತ್ತು ತರಿ ಜಮೀನಿನಲ್ಲಿ ನೀರು ಹಾಯಿಸಿ ಮರಳು ತೆಗೆಯುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇದ​ರಿಂದಾಗಿ ಜಮೀನುಗಳೆಲ್ಲ ಸತ್ವ ಕಳೆದುಕೊಂಡು ಗುಂಡಿ-ಗೊಟರುಗಳಿಂದ ಕೂಡಿ ಕೃಷಿ ಚಟುವಟಿಕೆ ನಡೆಸಲು ಯೋಗ್ಯತೆ ಕಳೆ​ದು​ಕೊ​ಳ್ಳು​ತ್ತಿವೆ.

ಆಹಾರ ಧಾನ್ಯ ಬೆಳೆಯುವ ಭೂಮಿಯಲ್ಲಿ ಶರವೇಗದಲ್ಲಿ ಆರ್ಥಿಕವಾಗಿ ಸಬಲರಾಗಬೇಕೆನ್ನುವ ಲಾಲಾಸೆಯಿಂದ ಸಣ್ಣಪುಟ್ಟಹಳ್ಳಗಳೂ ಸೇರಿದಂತೆ ತಾಲೂಕಿನ ಜೀವನದಿಗಳಾದ ದಂಡಾವತಿ ಮತ್ತು ವರದಾ ನದಿ ಪ್ರದೇಶದ ಹಲವೆಡೆ ತರಿ ಜಮೀನಿನಲ್ಲಿ ನೀರು ಹಾಯಿಸಿ ಮರಳು ಸೋಸುವ ಕಾಯಕಕ್ಕೆ ಕೃಷಿ​ಕರು ಮುಂದಾಗಿದ್ದಾರೆ. ಇದೊಂದು ಖರ್ಚು ವೆಚ್ಚವಿಲ್ಲದ ಹಣ ಗಳಿಕೆಯ ಸುಲಭ ದಂಧೆ ಎಂದು ಅವ​ರು ತಿಳಿ​ದಂತಿದೆ.

‘ಮರಳು ಕಳ್ಳ’ರಿಗೆ ಕಲಬುರಗಿಯಲ್ಲಿ ಯಾರ ಭಯವೂ ಇಲ್ರಿ!

ಕೆಲ ರೈತರು ಆಹಾರ ಬೆಳೆ ಬೆಳೆಯುವ ಶ್ರಮ ಖರ್ಚು ವೆಚ್ಚಕ್ಕಿಂತಲೂ ಮರಳು ತೆಗೆಯುವ ಕೆಲಸವೇ ಲಾಭದಾಯಕ ಎಂದು​ಕೊಂಡಿ​ದ್ದಾರೆ. ಆದರೆ, ಇದರ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಬೇಕಾದ ಕಂದಾಯ ಇಲಾಖೆ ಕಂಡೂ ಕಾಣದಂತಿದೆ. ಪರಿ​ಣಾಮ ನದಿ ತಿರುವು ಬದಲಿಸಿ, ಕೃಷಿ ಜಮೀನಿಗೆ ನೀರು ಹಾಯಿಸಿ, ಮರಳು ಬಗೆಯುವ ಅನಧಿಕೃತ ಕ್ವಾರೆಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ. ಇಂತಹ ಪ್ರಕರಣಗಳ ಬಗ್ಗೆ ಯಾರೂ ಕೂಡ ದೂರು ಅಥವಾ ಹೇಳಿಕೆ ಕೊಡಲಾಗದಷ್ಟುಬಲಿಷ್ಠ ದಂಧೆ​ಯಾಗಿ ಮಾರ್ಪ​ಡು​ತ್ತಿದೆ. ಇದು ಹೀಗೆಯೇ ಮುಂದುವರಿದರೆ ನದಿ ಮತ್ತು ಸಣ್ಣಪುಟ್ಟಹಳ್ಳ-ಕೊಳ್ಳಗಳ ತಿರುವುಗಳೇ ಬದಲಾಗಿ, ಕೃಷಿ ಜಮೀನುಗಳು ಅಕ್ರಮ ಮರಳು ಸೋಸುವ ಚಟುವಟಿಕೆಗಳ ತಾಣವಾಗುವ ಲಕ್ಷಣಗಳು ಎದುರಾಗಿವೆ.

ಈಗಾ​ಗಲೇ ಒಂದು ಕೆರೆ ನಾಶ:

ತಾಲೂಕಿನ ಜಡೆ ಹೋಬಳಿ ವರದಾ ನದಿ ತೀರದ ಅನೇಕ ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಕಾನಗೋಡು ಮುಂತಾದ ಕಡೆ ಮರಳು ದಂಧೆ ವ್ಯಾಪಕವಾಗಿ ಹರಡಿದೆ. ಚಂದ್ರಗುತ್ತಿ ಸಮೀಪದ ಕತವಾಯಿ ಭಾಗದಲ್ಲಿ ಈ ದಂಧೆಗಾಗಿ ಒಂದು ಕೆರೆ ನಾಶ ಆಗಿರುವ ಬಗ್ಗೆ ಸ್ಥಳೀಯರ ಅಳಲು ತೋಡಿಕೊಂಡಿದ್ದಾರೆ. ಚಂದ್ರಗುತ್ತಿ ಹೋಬಳಿ ಕೋಡಂಬಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಳು ಮತ್ತು ಬಿಳಿಗಲ್ಲು, ಕ್ವಾರೆಗಳು ಸಕ್ರಿಯವಾಗಿವೆ. ಕೋಡಂಬಿ ಸ.ನಂ.7, 22, 24, 36, 47 ಭೂಮಿ ಮರಳು ಗಣಿಗಾರಿಕೆಗೆ ಸೀಮಿತವಾಗಿರುವ ಬಗ್ಗೆ ಮಾಹಿತಿ ಇದ್ದು, ಸಮೀಪದ ಮಾವಿನಬಳ್ಳಿಕೊಪ್ಪ ಗ್ರಾಮದಲ್ಲೂ ಅಡೆತಡೆ ಇಲ್ಲದೆ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.

ಜಾಗ ಲೀಸ್‌ಗೆ ಪಡೆದು ದಂಧೆ

ವರದಾ ನದಿ ಪಾತ್ರದ ಗ್ರಾಮಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ. ನದಿ ಅಂಚಿನ ದಡ ವಿರೂಪಗೊಂಡು ಧಕ್ಕೆ ಆಗುತ್ತಿರುವ ಬಗ್ಗೆ ಈ ಹಿಂದೆ ‘ಕನ್ನಡಪ್ರಭ’ ವರದಿ ಮಾಡಿದ ಹಿನ್ನೆಲೆ ಅಕ್ರಮ ಮರಳು ಗಣಿಗಾರಿಕೆ ಕುರಿತು ಜಿಲ್ಲಾಡಳಿತ ಎಚ್ಚೆತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಜೊತೆಗೆ ಮರಳು ನೀತಿಯನ್ನು ಶಿಸ್ತುಬದ್ಧವಾಗಿ ಜಾರಿಗೆ ತರಲು ಯತ್ನಿಸುತ್ತಿದೆ. ಈ ಕಾರಣದಿಂದ ಅಕ್ರಮ ಮರಳು ದಂಧೆಕೋರರು ನದಿ ತೀರದ ಕೃಷಿ ಜಮೀನುಗಳ ಮೇಲೆ ಕಣ್ಣು ಹಾಕಿ​ದ್ದಾರೆ. ರೈತರಿಂದ ಜಮೀನು ಜಾಗ ಲೀಸ್‌ಗೆ ಪಡೆದು ನದಿ-ಕೆರೆ ನೀರನ್ನು ಗದ್ದೆ ಹಾಯಿಸುತ್ತಾರೆ. ಮರಳು ಸೋಸುವ ಮೂಲಕ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚುವ ತಂತ್ರಗಾರಿಕೆ ಕಂಡು​ಕೊಂಡಿ​ದ್ದಾರೆ. 

 

ಅಕ್ರಮ ಮರಳುಗಾರಿಕೆ ವಿರುದ್ದ ಧ್ವನಿ ಎತ್ತಿದ್ರೆ ಹುಷಾರ್!, ಉಡುಪಿಯಲ್ಲಿ ವ್ಯಕ್ತಿ ಮೇಲೆ ಹಲ್ಲೆ

ವರದಾ ಮತ್ತು ದಂಡಾವತಿ ನದಿಪಾತ್ರದ ಜಮೀನು ಹಾಗೂ ಕೆರೆಯಂಚಿನ ತರಿ ಜಮೀನುಗಳಲ್ಲಿ ಕೃಷಿಗೆ ಬದಲಾಗಿ ನದಿ ಮತ್ತು ಕೆರೆ ನೀರನ್ನು ಜಮೀನುಗಳಿಗೆ ಹಾಯಿಸಿ ಮರಳು ಬಸಿಯಲಾಗುತ್ತಿದೆ. ಇದರಿಂದ ಕೃಷಿಗೆ ಯೋಗ್ಯ ಜಮೀನುಗಳು ಗುಂಡಿಗಳಿಂದ ಕೂಡಿ, ಮ​ಣ್ಣಿ​ನ ಸತ್ವವನ್ನು ಕಳೆದುಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಕೃಷಿಕರು ತಮ್ಮ ಭೂಮಿ ಬೆಲೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನದಿಗಳ ಹರವಿನ ದಿಕ್ಕು ಬದಲಾಯಿಸುತ್ತಿರುವುದರಿಂದ ನದಿ ಮುಂದೆ ಸಾಗುವುದಕ್ಕೆ ಧಕ್ಕೆ ಉಂಟಾಗಿದೆ. ಆದ್ದರಿಂದ ಪರಿಸರ ಇಲಾಖೆ ಮತ್ತು ಸಂಬಂಧಪಟ್ಟಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ.

- ಎಂ.ಆರ್‌.ಪಾಟೀಲ್‌, ಅಧ್ಯಕ್ಷ, ಪರಿಸರ ಜಾಗೃತಿ ಟ್ರಸ್ಟ್‌, ಸೊರಬ

Follow Us:
Download App:
  • android
  • ios