ಹಬ್ಬದ ಬಳಿಕ ಕೆಲವೆಡೆ ಸೋಂಕು ಏರಿಕೆ: 2ನೇ ಅಲೆಯ ಭೀತಿ!| ಕರ್ನಾಟಕ, ಮಹಾರಾಷ್ಟ್ರ ಸೇರಿ 4-5 ರಾಜ್ಯಗಳಲ್ಲಿ ಸೋಂಕು ದಿಢೀರ್ ಹೆಚ್ಚಳ| ಗುಜರಾತ್, ಹರ್ಯಾಣ, ಮುಂಬೈನಲ್ಲಿ ಶಾಲೆ ಪುನಾರಂಭ ಮುಂದೂಡಿಕೆ| ದಿಲ್ಲಿಗೆ ವಿಮಾನ, ರೈಲು ಸೇವೆ ಸ್ಥಗಿತಗೊಳಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ
ನವದೆಹಲಿ(ನ.21):: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವ ಭರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಕೊರೋನಾ ಸುರಕ್ಷಾ ನಿಯಮಗಳನ್ನು ಜನರು ಗಾಳಿಗೆ ತೂರಿದ ಪರಿಣಾಮ ಎಂಬಂತೆ ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಕೊರೋನಾ ಅಬ್ಬರ ಹೆಚ್ಚಾಗ ತೊಡಗಿದೆ. ಸೆಪ್ಟೆಂಬರ್ ಬಳಿಕ ದಿನೇ ದಿನೇ ಕೊರೋನಾ ಸೋಂಕು ಹಾಗೂ ಸಾವಿನ ಸಂಖ್ಯೆ ಕುಸಿತದಂತಹ ಆಶಾದಾಯಕ ಬೆಳವಣಿಗೆಗೆ ಸಾಕ್ಷಿಯಾಗಿದ್ದ ದೇಶದ ಮೇಲೆ ಈಗ 2ನೇ ಅಲೆಯ ಕಾರ್ಮೋಡ ದಟ್ಟವಾಗತೊಡಗಿದೆ. 47 ದಿನಗಳ ಬಳಿಕ ಸಕ್ರಿಯ ಪ್ರಕರಣಗಳನ್ನು ಹೊಸ ಸೋಂಕಿತರ ಸಂಖ್ಯೆ ಹಿಂದಿಕ್ಕಿರುವುದು ಕಳವಳಕ್ಕೆ ಕಾರಣವಾಗಿದೆ.
ಏಪ್ರಿಲ್‌ಗೆ ಆಕ್ಸ್‌ಫರ್ಡ್ ಲಸಿಕೆ ಮಾರುಕಟ್ಟೆಗೆ: 1000 ರೂ.ದರ?
ಜನರ ನಿರ್ಲಕ್ಷ್ಯದಿಂದಾಗಿ ಮಾಲಿನ್ಯಪೀಡಿತವಾಗಿರುವ ದೆಹಲಿಯಲ್ಲಿ ಈಗಾಗಲೇ ಮೂರನೇ ಅಲೆ ರುದ್ರನರ್ತನಗೈಯ್ಯುತ್ತಿದೆ. ಇನ್ನು ಗುಜರಾತಿನ ಅಹಮದಾಬಾದ್, ರಾಜಕೋಟ್, ಸೂರತ್, ವಡೋದರಾ, ಮಧ್ಯಪ್ರದೇಶದ ಇಂದೋರ್, ಭೋಪಾಲ, ಗ್ವಾಲಿಯರ್, ವಿದಿಶಾ, ರತ್ಲಂ, ಮಹಾರಾಷ್ಟ್ರದ ಮುಂಬೈ, ಪುಣೆ ಸೇರಿ ಹಲವು ನಗರಗಳಲ್ಲಿ ದೀಪಾವಳಿ ಬಳಿಕ ಹೊಸ ಕೊರೋನಾ ಕೇಸಲ್ಲಿ ದಿಢೀರ್ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸೋಂಕು ಹೆಚ್ಚಿದ ನಗರಗಳಲ್ಲಿ ಕಫ್ರ್ಯೂ ಹೇರಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಅಗತ್ಯ ವಸ್ತುಗಳು, ಕಾರ್ಖಾನೆ ನೌಕರರನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆ, ಚಟುವಟಿಕೆಗಳು ಸ್ತಬ್ಧವಾಗಲಿವೆ. ಇನ್ನು ರಾಜಸ್ಥಾನ ಸರ್ಕಾರ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಶನಿವಾರದಿಂದಲೇ ಜಾರಿಗೆ ಬರುವಂತೆ ರಾಜ್ಯದಾದ್ಯಂತ ನಿಷೇಧಾಜ್ಞೆ ಹೇರಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ.
ಶಾಲೆ ಮುಂದೂಡಿಕೆ:
ಈ ನಡುವೆ ನ.23 ರಿಂದ ಶಾಲಾ ಕಾಲೇಜುಗಳನ್ನು ಆರಂಭಿಸುವುದಾಗಿ ಹೇಳಿದ್ದ ಗುಜರಾತ್‌ನಲ್ಲಿ ಮುಂದಿನ ಆದೇಶದವರೆಗೂ ಶಾಲಾ ಕಾಲೇಜುಗಳು ಬಂದ್ ಆಗಿರಲಿವೆ ಎಂದು ಸರ್ಕಾರ ಹೇಳಿದೆ. ಇನ್ನು ನ.23ರಂದು ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆ ಪುನಾರಂಭಿಸುವುದಾಗಿ ಹೇಳಿದ್ದ ಬೃಹನ್ಮುಂಬೈ ಮಹಾನಗರ ಪಾಲಿಕೆ ತನ್ನ ನಿರ್ಧಾರವನ್ನು ಡಿ.31ರ ವರೆಗೆ ಮುಂದೂಡಿದೆ. ಹರ್ಯಾಣದಲ್ಲಿ 150 ಮಕ್ಕಳಿಗೆ ಕೋವಿಡ್ ಧೃಢವಾಗುತ್ತಿದ್ದಂತೆ ತೆರೆಯಲಾಗಿದ್ದ 9-12ನೇ ತರಗತಿಗಳನ್ನು ನ.30ರ ವರೆಗೆ ಮುಚ್ಚಿ ಎಂದು ಸರ್ಕಾರ ಆದೇಶಿಸಿದೆ.
ಒಂದೇ ದಿನ ಕೋಟಿ ದಾಟಲಿದೆ ಕೊರೋನಾ ವೈರಸ್ ಟೆಸ್ಟ್! ಶೇ.2ಕ್ಕಿಂತ ಕಡಿಮೆಯಾದ ಪಾಸಿಟಿವಿಟಿ
ವಿಮಾನ, ರೈಲು ಬಂದ್:
ಮತ್ತೊಂದೆಡೆ ದೆಹಲಿಯಲ್ಲಿ ಕೊರೋನಾ ಸ್ಥಿತಿಯ ಹಿನ್ನೆಲೆಯಲ್ಲಿ ಮುಂಬೈ-ದೆಹಲಿ ನಡುವಣ ವಿಮಾನ ಹಾಗೂ ರೈಲು ಸಂಚಾರ ರದ್ಧತಿಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಏನು ಕಾರಣ?
- ಹಬ್ಬದ ಸಂದರ್ಭ ಜನ ಸಾಮಾಜಿಕ ಅಂತರ, ಮಾಸ್ಕ್, ಸುರಕ್ಷತೆ ಮರೆತದ್ದು
- ಹಬ್ಬಕ್ಕಾಗಿ ನಗರಗಳಿಂದ ಊರುಗಳಿಗೆ, ನಗರಗಳಿಂದ ನಗರಗಳಿಗೆ ವಲಸೆ
- ಕೊರೋನಾ ಉಪೇಕ್ಷಿಸಿ ಜನರು ಮಾರುಕಟ್ಟೆ, ಸಮಾರಂಭಕ್ಕೆ ಮುಗಿಬಿದ್ದದ್ದು
ಏಲ್ಲಿ ಏನಾಯ್ತು?
47000 ಕೇಸ್: ದೇಶದಲ್ಲಿ 32ರಿಂದ 40 ಸಾವಿರ ಇರುತ್ತಿದ್ದ ನಿತ್ಯ ಪ್ರಕರಣ ಈಗ 47000ಕ್ಕೇರಿಕೆ
1800 ಕೇಸ್: ಕರ್ನಾಟಕದಲ್ಲಿ ದೀಪಾವಳಿ ವೇಳೆಗೆ 1300-1500 ಕೇಸ್. ಈಗ 1800 ಕೇಸ್
8500 ಕೇಸ್: ದೆಹಲಿಯಲ್ಲಿ ದೀಪಾವಳಿ ವೇಳೆಗೆ 3200-4000 ಕೇಸ್. ಈಗ 8500 ಕೇಸ್
5600 ಕೇಸ್: ಮಹಾರಾಷ್ಟ್ರದಲ್ಲಿ ದೀಪಾವಳಿ ವೇಳೆಗೆ 2500-3000 ಕೇಸ್. ಈಗ 5600 ಕೇಸ್
1000 ಕೇಸ್: ಗುಜರಾತ್‌ನಲ್ಲಿ ದೀಪಾವಳಿ ವೇಳೆಗೆ 900-1000 ಕೇಸ್. ಈಗ 1300 ಕೇಸ್
1500 ಕೇಸ್: ಮಧ್ಯಪ್ರದೇಶದಲ್ಲಿ ದೀಪಾವಳಿ ವೇಳೆಗೆ 600-850 ಕೇಸ್. ಈಗ 1500 ಕೇಸ್
