ಏಪ್ರಿಲ್‌ಗೆ ಆಕ್ಸ್‌ಫರ್ಡ್‌ ಲಸಿಕೆ ಮಾರುಕಟ್ಟೆಗೆ: 1000ರೂ. ದರ?| ಆರೋಗ್ಯ ಸಿಬ್ಬಂದಿಗೆ ಫೆಬ್ರವರಿಗೇ ಲಭ್ಯ ಸಾಧ್ಯತೆ| ಲಸಿಕೆ ತಯಾರಕ ಸೀರಂ ಸಂಸ್ಥೆ ಮುಖ್ಯಸ್ಥ ಹೇಳಿಕೆ| 

ನವದೆಹಲಿ(ನ.21): ಕೊರೋನಾ ವೈರಸ್‌ ಬಾರದಂತೆ ಉತ್ತಮವಾಗಿ ಹೋರಾಡುವ ಭರವಸೆ ಮೂಡಿಸಿರುವ ಆಕ್ಸಫರ್ಡ್‌ ಯೂನಿವರ್ಸಿಟಿ ಲಸಿಕೆ ಕೋವಿಶೀಲ್ಡ್‌ 2021ರ ಏಪ್ರಿಲ್‌ನಲ್ಲಿ ಭಾರತದ ಜನಸಾಮಾನ್ಯರಿಗೆ ಲಭಿಸಲು ಆರಂಭವಾಗುವ ಸಾಧ್ಯತೆಯಿದೆ. ಇದರ ಎರಡು ಡೋಸ್‌ಗೆ ಗರಿಷ್ಠ 1000 ರು. ನಿಗದಿಯಾಗುವ ಸಾಧ್ಯತೆಯಿದ್ದು, ಆರೋಗ್ಯ ಕಾರ್ಯಕರ್ತರಿಗೆ 2021ರ ಫೆಬ್ರವರಿಯಲ್ಲೇ ಲಸಿಕೆ ಸಿಗಬಹುದು ಎಂದು ಈ ಲಸಿಕೆಯನ್ನು ತಯಾರಿಸುತ್ತಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್‌ ಪೂನಾವಾಲಾ ಹೇಳಿದ್ದಾರೆ.

ಆದರೆ, 3ನೇ ಹಂತದ ಪರೀಕ್ಷೆಯಲ್ಲಿ ಲಸಿಕೆ ಯಾವ ಫಲಿತಾಂಶ ನೀಡುತ್ತದೆ ಎಂಬುದರ ಮೇಲೆ ಇದು ನಿಂತಿದೆ. ಮೊದಲೆರಡು ಹಂತದ ಪರೀಕ್ಷೆಯಲ್ಲಿ ಕೋವಿಶೀಲ್ಡ್‌ ಲಸಿಕೆ ಪಾಸಾಗಿದೆ. ಸದ್ಯ 3ನೇ ಹಂತದ ಪರೀಕ್ಷೆ ನಡೆಯುತ್ತಿದೆ. ಅದರಲ್ಲೂ ಶೀಘ್ರದಲ್ಲೇ ಉತ್ತಮ ಫಲಿತಾಂಶ ಬಂದರೆ ಸರ್ಕಾರದ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮತಿ ಪಡೆದು ಲಸಿಕೆ ವಿತರಣೆ ಆರಂಭಿಸಬಹುದಾಗಿದೆ.

ಕೋವಿಡ್‌ನಿಂದ ಬಹು ಅಂಗಾಂಗ ವೈಫಲ್ಯ: ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಮುಂದಿನ ವರ್ಷದ ಏಪ್ರಿಲ್‌ ವೇಳೆಗೆ ಲಸಿಕೆ ವಿತರಣೆ ಆರಂಭವಾದರೂ ದೇಶದ ಎಲ್ಲಾ ಜನರಿಗೂ ತ್ವರಿತವಾಗಿ ಲಸಿಕೆ ಸಿಗುವುದಿಲ್ಲ. ಸಮಸ್ತ ಭಾರತೀಯರಿಗೆ 2024ರೊಳಗೆ ಲಸಿಕೆ ಸಿಗಬಹುದು ಎಂದೂ ಅವರು ಹಿಂದುಸ್ತಾನ್‌ ಟೈಮ್ಸ್‌ ಲೀಡರ್‌ಶಿಪ್‌ ಸಮಿಟ್‌ನಲ್ಲಿ ಗುರುವಾರ ಹೇಳಿದ್ದಾರೆ.

ಕೊರೋನಾಗೆ ಲಸಿಕೆ ತಯಾರಿಸಿದರಷ್ಟೇ ಸಾಲದು. ಹಣ, ಸಾಗಣೆ ವ್ಯವಸ್ಥೆ, ಸಂಗ್ರಹ ವ್ಯವಸ್ಥೆ, ಮೂಲಸೌಕರ್ಯ ಹಾಗೂ ಲಸಿಕೆ ತೆಗೆದುಕೊಳ್ಳಲು ಜನರು ಒಪ್ಪುವುದು - ಹೀಗೆ ಸಾಕಷ್ಟುಸಂಗತಿಗಳು ಕೂಡಿಬರಬೇಕಿದೆ. ಎಲ್ಲರೂ ಎರಡು ಡೋಸ್‌ ಲಸಿಕೆ ತೆಗೆದುಕೊಳ್ಳಲು ಒಪ್ಪಿದರೆ 2024ರ ವೇಳೆಗೆ ಶೇ.80-90ರಷ್ಟುಭಾರತೀಯರಿಗೆ ಲಸಿಕೆ ನೀಡಲು ಸಾಧ್ಯವಾಗಬಹುದು. ಎರಡು ಡೋಸ್‌ ಲಸಿಕೆಗೆ ಗರಿಷ್ಠ 1000 ರು. ಮಾರಾಟ ದರ (ಒಂದು ಡೋಸ್‌ಗೆ 5ರಿಂದ 6 ಡಾಲರ್‌) ನಿಗದಿಯಾಗಬಹುದು. ಆದರೆ, ಸರ್ಕಾರ ಇದನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿರುವುದರಿಂದ ಅದಕ್ಕೆ 3-4 ಡಾಲರ್‌ಗೆ ಒಂದು ಡೋಸ್‌ ಲಭಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಪುತ್ರನಿಗೆ ಕೊರೋನಾ ಪಾಸಿಟಿವ್..!

ಬ್ರಿಟನ್‌ ಹಾಗೂ ಯುರೋಪಿಯನ್‌ ಯೂನಿಯನ್‌ನಲ್ಲಿ ಈ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕ ತಕ್ಷಣ ನಾವು ಭಾರತ ಸರ್ಕಾರಕ್ಕೆ ಇದರ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುತ್ತೇವೆ. ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿದರೆ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಹಿರಿಯ ನಾಗರಿಕರಿಗೆ ಮಾತ್ರ ಮೊದಲಿಗೆ ಲಸಿಕೆ ನೀಡಬಹುದು. ಆಕ್ಸಫರ್ಡ್‌ ಲಸಿಕೆಯನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಶೇಖರಿಸಬಹುದು. ಫೆಬ್ರವರಿಯಿಂದ ಪ್ರತಿ ತಿಂಗಳಿಗೆ ನಾವು 10 ಕೋಟಿ ಡೋಸ್‌ ತಯಾರಿಸಲಿದ್ದೇವೆ ಎಂದೂ ಅವರು ಹೇಳಿದ್ದಾರೆ.