ಕೋವಿಡ್ ಬೆಡ್‌ಗಳ ದುರ್ಬಳಕೆ ತಡೆಯಲು ಆಧಾರ್ ವ್ಯವಸ್ಥೆ ‘ಆಧಾರ್‌’ ಆಧಾರಿತ ಬಯೋಮೆಟ್ರಿಕ್‌ ವ್ಯವಸ್ಥೆ  ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಮಾಹಿತಿ

ಬೆಂಗಳೂರು (ಮೇ.09) : ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಮತ್ತು ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸುವ ಸಂಬಂಧ ವಾರ್ಡ್‌ ಮಟ್ಟದ ಸಮಿತಿ ರಚನೆ, ಹಾಸಿಗೆ ದುರ್ಬಳಕೆ ತಡೆಯಲು ‘ಆಧಾರ್‌’ ಆಧಾರಿತ ಬಯೋಮೆಟ್ರಿಕ್‌ ವ್ಯವಸ್ಥೆ, ರೋಗ ಲಕ್ಷಣ ನೋಡಿಕೊಂಡು ಆಸ್ಪತ್ರೆ ಇಲ್ಲವೇ ಆರೈಕೆ ಕೇಂದ್ರಕ್ಕೆ ದಾಖಲು ಮಾಡಲು ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸಿಗೆಗಳ ದುರ್ಬಳಕೆ ತಡೆಯಲು ಇನ್ನು ಮುಂದೆ ‘ಆಧಾರ್‌’ ಆಧಾರಿತ ಬಯೋಮೆಟ್ರಿಕ್‌ ವ್ಯವಸ್ಥೆ ತರಲಾಗುತ್ತದೆ. ಆಸ್ಪತ್ರೆಗೆ ರೋಗಿಗಳು ದಾಖಲಾಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್‌ನಲ್ಲಿ ನಮೂದಿಸಬೇಕು. ಇದರಿಂದ ಒಬ್ಬರಿಗೆ ಹಂಚಿಕೆಯಾದ ಹಾಸಿಗೆಯನ್ನು ಬೇರೆಯವರು ಆಕ್ರಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ದುರ್ಬಳಕೆಯೂ ಸಾಧ್ಯವಿಲ್ಲ ಎಂದು ಹೇಳಿದರು.

DRDO 2-DG ಔಷಧ ಎಲ್ಲಿ ಸಿಗುತ್ತದೆ? ತೆಗೆದುಕೊಳ್ಳುವುದು ಬಹಳ ಸುಲಭ! ...

ವಾರ್ಡ್‌ ಸಮಿತಿಯಲ್ಲಿ ಕನಿಷ್ಠ 50 ಮಂದಿ ಸದಸ್ಯರಿದ್ದು, ವೈದ್ಯರು, ಶುಶ್ರೂಷಕರು, ಸ್ವಯಂ ಸೇವಕರು ಹಾಗೂ ಸ್ಥಳೀಯ ನಿವಾಸಿಗಳ ಸಂಘದ ಪದಾಧಿಕಾರಿಗಳು ಇರುತ್ತಾರೆ. ಇವರು ಸೋಂಕಿತರನ್ನು ಚಿಕಿತ್ಸಾ ನಿರ್ಧಾರ ಕೇಂದ್ರಕ್ಕೆ ಕರೆತಂದು ಅಲ್ಲಿ ರೋಗ ಲಕ್ಷಣಗಳಿಗೆ ಅನುಸಾರವಾಗಿ ವರ್ಗೀಕರಣ ಮಾಡುತ್ತಾರೆ. ಬಳಿಕ ಆಸ್ಪತ್ರೆ ಶುಶ್ರೂಷೆ ಬೇಕಾದವರನ್ನು ಆಸ್ಪತ್ರೆಗೆ, ಸಾಮಾನ್ಯ ಕೊರೋನಾ ಲಕ್ಷಣ ಇರುವವರಿಗೆ ಕೊರೋನಾ ಕೇರ್‌ ಸೆಂಟರ್‌ಗೆ ದಾಖಲು ಮಾಡಲು ಕ್ರಮ ಕೈಗೊಳ್ಳುತ್ತಾರೆ.

ಪ್ರತಿ ವಾರ್ಡ್‌, ತಾಲೂಕಿನಲ್ಲೂ ಕೊರೋನಾ ಕೇರ್‌ ಕೇಂದ್ರ

ನಗರ ಪ್ರದೇಶದಲ್ಲಿರುವ ಕೊಳಗೇರಿಗಳಲ್ಲಿ ವಾಸಿಸುವವರಿಗೆ ಮನೆಯಲ್ಲಿ ಕ್ವಾರಂಟೈನ್‌ ಆಗಲು ಸಾಧ್ಯವಿಲ್ಲ, ಅವರಿಗಾಗಿ ಪ್ರತಿ ವಾರ್ಡ್‌ನಲ್ಲಿ ಕೊರೋನಾ ಕೇರ್‌ ಸೆಂಟರ್‌ ಆರಂಭಿಸಲಾಗುತ್ತಿದೆ. ವಾರ್ಡ್‌ ಸಮಿತಿಗಳ ಮಾದರಿ ಈಗಾಗಲೇ ಮುಂಬೈ ಹಾಗೂ ಚೆನ್ನೈಗಳಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಇಲ್ಲಿಯೂ ಅದೇ ಮಾದರಿ ಅನುಸರಿಸಲು ತೀರ್ಮಾನಿಸಲಾಗಿದೆ ಎಂದರು.

ಐಎಎಸ್ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾದವರ ಮೇಲೆ ಎಫ್‌ಐಆರ್ ದಾಖಲಿಸಿ ..

ಇನ್ನು ಪ್ರತಿ ತಾಲೂಕಿನಲ್ಲೂ ಕೊರೋನಾ ಕೇರ್‌ ಕೇಂದ್ರ ಆರಂಭಿಸಲಾಗುತ್ತದೆ. ಇಲ್ಲಿನ ರೋಗಿಗಳ ವಿವರಗಳನ್ನು ಜಿಲ್ಲಾ ವಾರ್‌ ರೂಮಿಗೆ ಕಳುಹಿಸಲಾಗುತ್ತದೆ ಎಂದರು.

ಕ್ಯೂ ವಾಚ್‌ ವ್ಯವಸ್ಥೆ ಜಾರಿ: ಬಯೋಮೆಟ್ರಿಕ್‌ ವ್ಯವಸ್ಥೆ ಜೊತೆಗೆ ಕ್ಯೂ ವಾಚ್‌ ವ್ಯವಸ್ಥೆ ಜಾರಿ ಮಾಡಲಾಗುವುದು. ಸೋಂಕಿತರು ಒಮ್ಮೆ ಆಸ್ಪತ್ರೆಗೆ ದಾಖಲಾದ ನಂತರ ಸಾಮಾನ್ಯ ಬೆಡ್‌ಗಳಿಗೆ ದಾಖಲಾದವರು ಅವರ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಎಚ್‌ಡಿಯು, ಐಸಿಯು ಮತ್ತು ವೆಂಟಿಲೇಟರ್‌ಗಳಿಗೆ ವರ್ಗಾವಣೆ ಆಗಿರುತ್ತಾರೆ. ಆದರೆ ಈ ಬಗ್ಗೆ ಆಸ್ಪತ್ರೆಗಳು ಮಾಹಿತಿಯನ್ನು ಅಪ್‌ಡೇಟ್‌ ಮಾಡುವುದಿಲ್ಲ, ಇದರಿಂದ ಸರ್ಕಾರದ ವಾರ್‌ ರೂಮ್‌ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಸ್ಥಿತಿಯನ್ನು ಸುಧಾರಿಸಲು ಕ್ಯೂ ವಾಚ್‌ ಎಂಬ ಸುಧಾರಿತ ಆ್ಯಪ್‌ ವ್ಯವಸ್ಥೆಯ ಮೂಲಕ ನಿಗಾ ವಹಿಸಲಾಗುತ್ತದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೂಲಕ ಐಸಿಯು, ಹೆಚ್‌ಡಿಯು, ರೋಗಿಗಳ ಅಂಕಿ-ಅಂಶವನ್ನು ಪ್ರತಿ ಐದು ದಿನಕ್ಕೊಮ್ಮೆ ಸಂಗ್ರಹಿಸಲಾಗುತ್ತಿತ್ತು. ಇನ್ನು ಮುಂದೆ ಪ್ರತಿದಿನವೂ ಪರಿಶೀಲಿಸಲು ಸೂಚಿಸಿದೆ ಎಂದು ಹೇಳಿದರು.

ವಾರ್ಡ್‌ ಸಮಿತಿಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರುಗಳು ಪಕ್ಷಭೇದ ಮರೆತು ಸಕ್ರಿಯವಾಗಿ ಭಾಗವಹಿಸಿ ಕಕೊರೋನಾ ನಿಯಂತ್ರಣಕ್ಕಾಗಿ ಸಹಕರಿಸಬೇಕೆಂದು ಸಚಿವರು ಮನವಿ ಮಾಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona