ನವದೆಹಲಿ(ಮೇ 08) ದೇಶಾದ್ಯಂತ ಕೊರೋನಾ ಪ್ರಕರಣಗಳು ದಾಖಲೆ ಮಟ್ಟಕ್ಕೆ ಮುಟ್ಟಿರುವ ಹೊತ್ತಿನಲ್ಲೇ ಹೈದ್ರಾಬಾದ್‌ ಮೂಲದ ಡಾ.ರೆಡ್ಡೀಸ್‌ ಲ್ಯಾಬ್‌ ಸಹಯೋಗದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಕೋವಿಡ್‌ ಔಷಧವಾದ 2-ಡಿಆಕ್ಸಿ-ಡಿ-ಗ್ಲುಕೋಸ್‌ (2-ಡಿಜಿ) ಎಂಬ ಪೌಡರ್‌ ಅನ್ನು ತುರ್ತು ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಅನುಮೋದನೆ ನೀಡಿದೆ.

ನೀರಿನಲ್ಲಿ ಕಲಕಿ ಸೇವಿಸುವ ಈ ಔಷಧದ ನೆರವಿನಿಂದ ಸೋಂಕಿನಿಂದಾಗಿ ಆಸ್ಪತ್ರೆ ಸೇರಿ ಸಾವನ್ನಪ್ಪುತ್ತಿರುವವರ ಪ್ರಮಾಣದಲ್ಲಿ ಸಾಕಷ್ಟುಇಳಿಕೆ ಕಂಡುಬರುವ ವಿಶ್ವಾಸ ವ್ಯಕ್ತವಾಗಿದೆ. ಪ್ರಯೋಗದ ವೇಳೆ ಆಸ್ಪತ್ರೆಗೆ ದಾಖಲಾಗಿರುವ ಕೊರೋನಾ ಸೋಂಕಿತರು 2-ಡಿಜಿ ಔಷಧ ಸೇವನೆ ಬಳಿಕ ಬಹುಬೇಗೆ ಚೇತರಿಸಿಕೊಂಡಿರುವುದು ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಯಾವುದೀ ಔಷಧ?:

ಕೋವಿಡ್‌ ಮೊದಲ ಅಲೆ ಹೆಚ್ಚಿದ್ದಾಗ ಪ್ರಧಾನಿ ಮೋದಿ ಅವರ ಸಲಹೆಯಂತೆ ಡಿಆರ್‌ಡಿಒದ ವಿಭಾಗವಾದ ‘ದ ಇನ್ಸ್‌ಟಿಟ್ಯೂಟ್‌ ಆಫ್‌ ನ್ಯೂಕ್ಲಿಯರ್‌ ಮೆಡಿಸಿನ್‌ ಆ್ಯಂಡ್‌ ಅಲೈಡ್‌ ಸೈನ್ಸಸ್‌ (ಇನ್ಮಾಸ್‌) ಸಂಸ್ಥೆಯು ಹೈದ್ರಾಬಾದ್‌ ಮೂಲದ ‘ಸೆಂಟರ್‌ ಫಾರ್‌ ಸೆಲ್ಯುಲಾರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯೋಲಜಿ’ (ಸಿಸಿಎಂಬಿ) ಸಹಯೋಗದಲ್ಲಿ 2020ರ ಏಪ್ರಿಲ್‌ನಲ್ಲಿ ತನ್ನ ಔಷಧವನ್ನು ಪ್ರಯೋಗಕ್ಕೆ ಒಳಪಡಿಸಿತ್ತು. ಈ ವೇಳೆ ಔಷಧವು, ಸಾರ್ಸ್‌-ಕೋವ್‌-2 ವೈರಸ್‌ ಮೇಲೆ ಪರಿಣಾಮಕಾರಿಯಾಗಿದ್ದು ಕಂಡುಬಂದಿತ್ತು ಮತ್ತು ವೈರಸ್‌ ಬೆಳವಣಿಗೆ ತಡೆಹಾಕಿದ್ದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಔಷಧವನ್ನು ಎರಡನೇ ಹಂತದ ಪ್ರಯೋಗಕ್ಕೆ ಒಳಪಡಿಸಲು 2020ರ ಮೇ ತಿಂಗಳಲ್ಲಿ ಡಿಸಿಜಿಐ ಅನುಮತಿ ನೀಡಿತ್ತು.

ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ? ಅಮೂಲ್ಯ ಮಾಹಿತಿ

ತದನಂತರದಲ್ಲಿ ಇನ್ಮಾಸ್‌ ಸಂಸ್ಥೆ ಹೈದ್ರಾಬಾದ್‌ ಮೂಲದ ಔಷಧ ಕಂಪನಿಯಾದ ಡಾ.ರೆಡ್ಡೀಸ್‌ ಜೊತೆಗೂಡಿ ಕೋವಿಡ್‌ ಸೋಂಕಿತರ ಮೇಲೆ ಪ್ರಾಯೋಗಿಕ ಪರೀಕ್ಷೆ ಆರಂಭಿಸಿತ್ತು. 2020ರ ಮೇ- ಅಕ್ಟೋಬರ್‌ ಅವದಿಯಲ್ಲಿ ದೇಶದ ವಿವಿಧ ಭಾಗಗಳ 11 ಆಸ್ಪತ್ರೆಗಳಲ್ಲಿ 110 ರೋಗಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. ಈ ವೇಳೆ ಇತರೆ ರೋಗಿಗಳಿಗೆ ಹೋಲಿಸಿದರೆ 2-ಡಿಜಿ ಔಷಧ ನೀಡಿದವರಲ್ಲಿ ಚೇತರಿಕೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿತ್ತು. ಅಂದರೆ ಇತರೆ ಔಷಧಗಳ ಮೂಲಕ ಚಿಕಿತ್ಸೆ ಪಡೆಯುವವರಿಗಿಂತ 2.5 ದಿನ ಮೊದಲೇ 2-ಡಿಜಿ ಔಷಧ ತೆಗೆದುಕೊಂಡವರು ಚೇತರಿಸಿಕೊಂಡಿದ್ದರು. ಇದರ ಆಧಾರದಲ್ಲಿ 2020ರ ಡಿಸೆಂಬರ್‌ನಿಂದ 2021ರ ಮಾಚ್‌ರ್‍ ಅವಧಿಯಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ 3ನೇ ಹಂತದ ಪ್ರಯೋಗ ನಡೆಸಲಾಗಿತ್ತು.

3ನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಪರಿಶೀಲಿಸಿದಾಗ 2-ಜಿಡಿ ಔಷಧ ಪಡೆದವರು ಸೋಂಕಿನಿಂದ ಚೇತರಿಸಿಕೊಂಡ ಪ್ರಮಾಣ ಅಧಿಕವಿತ್ತು ಮತ್ತು ಆಸ್ಪತ್ರೆಯಲ್ಲಿ ಆಕ್ಸಿಜನ್‌ ಮೇಲೆ ಅವಲಂಬನೆಯಾಗುವ ಪ್ರಮಾಣ ಕೂಡಾ ಇಳಿಕೆಯಾಗಿತ್ತು.

ಹೊಸ ಔಷಧದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಮಾಹಿತಿ

* ಡಿಆರ್ ಡಿಒ ಈ ಔಷಧ ಸಿದ್ಧ ಮಾಡಿದೆ. 2 ಡಿಕ್ಸೋಯ್ ಡಿ ಗ್ಲೋಕೋಸ್ ಎಂಬ ಹೆಸರು 

* ಹೈದರಾಬಾದ್ ರೆಡ್ಡಿ ಲ್ಯಾಬೋರೆಟರಿ ಸಹಯೋಗದಲ್ಲಿ ಔಷಧ ಸಿದ್ಧವಾಗಿದೆ.

* ಕೊರೋನಾ ಕಾರಣಕ್ಕೆ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ

* ಇದನ್ನು ಬಳಕೆ ಮಾಡಿದರೆ ಕೊರೋನಾ ರೋಗಿಗೆ ವೈದ್ಯಕೀಯ ಆಮ್ಲಜನಕ ಬೇಕಾಗಲ್ಲ

* 65  ವರ್ಷ ಮೇಲ್ಪಟ್ಟ ರೋಗಿಗಳ ಮೇಲೆಯೂ ಈ ಔಷಧ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.

* ಡಿಆರ್‌ಡಿಒ ವಿಜ್ಞಾನಿ ಡಾ.ಅನಂತ್ ನಾರಾಯಣ್ ಭಟ್ ಹೇಳುವಂತೆ ಇದು ರೂಪಾಂತರಗಳ ಮೇಲೆ ಪರಿಣಾಮಕಾರಿಯಾಗಲಿದೆ 

* ಈ ಔಷಧಿಯನ್ನು ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬಹುದು ಏಕೆಂದರೆ ಇದು ಗ್ಲೂಕೋಸ್‌ನ ಸಾಮಾನ್ಯ  ಸ್ಥಿತಿಯಾಗಿದೆ.

* ವೈರಸ್ ಪೀಡಿತ ಜೀವಕೋಶಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

* ಪೌಡರ್ ಮಾದರಿಯಲ್ಲಿ ಔಷಧ ಲಭ್ಯವಿದ್ದು ನೀರಿನೊಂದಿಗೆ ಸೇರಿಸಿ ರೋಗಿ ಪಡೆದುಕೊಳ್ಳಬಹುದು