ಮೈಸೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟಿದ್ದಾರೆ. ಮದ್ಯಪಾನವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದ್ದು, ಕುಟುಂಬಸ್ಥರು ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಈ ಘಟನೆ ಸಮಾವೇಶಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೈಸೂರು (ಜುಲೈ.21): ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಂದಿದ್ದ ಟಿ.ನರಸೀಪುರ ತಾಲ್ಲೂಕಿನ ತುರುಗನೂರು ಗ್ರಾಮದ ಕುಮಾರ (39) ಎಂಬ ವ್ಯಕ್ತಿ ನಿಗೂಢವಾಗಿ ಮೃತಪಟ್ಟ ಘಟನೆ ನಡೆದಿದೆ.

ನಗರದಲ್ಲಿ ಮೊನ್ನೆ ನಡೆದ ಈ ಸಮಾವೇಶಕ್ಕೆ ಕುಮಾರನನ್ನು ತಮ್ಮ ಗ್ರಾಮದಿಂದ ಬಸ್ಸಿನಲ್ಲಿ ಕರೆತರಲಾಗಿತ್ತು. ಕಾಂಗ್ರೆಸ್ ಮುಖಂಡರು ತಲಾ 300 ರೂಪಾಯಿ ಕೊಡುವ ಭರವಸೆಯೊಂದಿಗೆ ಗ್ರಾಮಸ್ಥರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದರು ಎನ್ನಲಾಗಿದೆ. ಹಣದ ಆಸೆಗೆ ಬಂದಿದ್ದ ಕುಮಾರ, ಸಮಾವೇಶ ಮುಗಿದ ಬಳಿಕ ಮನೆಗೆ ಮರಳಿರಲಿಲ್ಲ. ರಾತ್ರಿಯಾದರೂ ಅವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ತಕ್ಷಣ ಬನ್ನೂರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದಾಗ, ಬನ್ನೂರು ಪೊಲೀಸರು ಮೈಸೂರು ಠಾಣೆಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರು. ಇಂದು ಬೆಳಿಗ್ಗೆ ಮೈಸೂರಿನ ಶವಾಗಾರದಲ್ಲಿ ಕುಮಾರನ ಮೃತದೇಹ ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಅತಿಯಾದ ಮದ್ಯಪಾನದಿಂದ ಕುಮಾರ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಮೃತ ಕುಮಾರನ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ಪರಿಹಾರದ ಒತ್ತಾಯವನ್ನು ಮುಂದಿಟ್ಟಿದ್ದಾರೆ. ಈ ಘಟನೆಯು ರಾಜಕೀಯ ಸಮಾವೇಶಗಳ ಆಯೋಜನೆಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಮಾವೇಶದಲ್ಲಿ ಜನರನ್ನ ಹೆಚ್ಚಿಸಲು ಸರ್ಕಾರಿ ಖಾಸಗಿ ಬಸ್‌ಗಳ ಮೂಲಕ ಹಳ್ಳಿಹಳ್ಳಿಗಳಿಂದ ಜನರನ್ನ ಕರೆತರಲಾಗಿತ್ತು. ಸಮಾವೇಶಕ್ಕೆ ಬಂದವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಣದ ಆಮಿಷೆ ಒಡ್ಡಿದ್ದರು ಎಂಬ ಆರೋಪವೂ ಕೇಳಿಬಂದಿದೆ.