ಡಿಸಿಎಂ ಡಿಕೆ ಶಿವಕುಮಾರ್ ಇಂದು ಕೋಡಿಹಳ್ಳಿಯಲ್ಲಿ ಜನಸ್ಪಂದನಾ ಸಭೆ ನಡೆಸಿದರು. ಇಡಿ ವಿರುದ್ಧ ಕಿಡಿ ಕಾರಿದ ಅವರು, ತೇಜಸ್ವಿ ಸೂರ್ಯ ಹಾಗೂ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದರು.
ಕನಕಪುರ (ಜುಲೈ.21): ಇಂದು ಕೋಡಿಹಳ್ಳಿ ವ್ಯಾಪ್ತಿಯಲ್ಲಿ ಜನಸ್ಪಂದನಾ ಸಭೆ ನಡೆಸಿದ್ದೇನೆ. ಡೆಂಗ್ಯೂ ಜ್ವರ ಇದೆ ಹಾಗಾಗಿ ನಾಳೆಯ ಎಲ್ಲಾ ಕಾರ್ಯಕ್ರಮ ಮುಂದೂಡಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಅಂತಹ ಮೇಜರ್ ಸಮಸ್ಯೆ ಏನೂ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ ಹೇಳಿದರು.
ಕನಕಪುರದ ಕೋಡಿಹಳ್ಳಿಯಲ್ಲಿ ಇಂದು ಜನಸ್ಪಂದನಾ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಮ್ಮ ಕಾರ್ಯಕರ್ತರು ಸ್ಥಳೀಯವಾಗಿ ಸಮಸ್ಯೆಗಳನ್ನು ಆಲಿಸುತ್ತಾರೆ. ಸಿಬ್ಬಂದಿ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಪಿಂಚಣಿ, ಜಿಎಸ್ಟಿ ನೋಟಿಸ್, ಸೈಟ್‌ಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಬಗೆಹರಿಸುತ್ತೇವೆ ಎಂದರು.
ನನ್ನನ್ನೇ ತಿಹಾರ್ ಜೈಲಿಗೆ ಹಾಕಿದ್ರು: ಇಡಿ ವಿರುದ್ಧ ಕಿಡಿ:
ಸಿಎಂ ಸಿದ್ದರಾಮಯ್ಯ ಪತ್ನಿಯ ಮೇಲಿನ ಇಡಿ ಕೇಸ್ ರದ್ದತಿ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ನನ್ನನ್ನೇ ತಿಹಾರ್ ಜೈಲಿಗೆ ಕಳುಹಿಸಿದ್ದರು. ಈಗ ನನ್ನ ಕೇಸ್ ವಜಾ ಆಗಿದೆ. ಇಡಿಯವರು ಪಾರದರ್ಶಕವಾಗಿ ಕೆಲಸ ಮಾಡಬೇಕು, ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಬಿಜೆಪಿ, ಜೆಡಿಎಸ್‌ನವರ ಮೇಲೆ ಯಾಕೆ ಕೇಸ್ ಇಲ್ಲ? ಕೇವಲ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಮಾತ್ರ ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದರು.
ತೇಜಸ್ವಿ ಸೂರ್ಯ ಪಾಪ ಇನ್ನೂ ಹುಡುಗ:
ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, 'ತೇಜಸ್ವಿ ಇನ್ನೂ ಹುಡುಗ, ಹೊಸದಾಗಿ ಎಂಪಿ ಆಗಿದ್ದಾರೆ. ಸುದ್ದಿಯಲ್ಲಿರಬೇಕೆಂದು ಮಾತನಾಡುತ್ತಾರೆ. ಅವರ ಪಕ್ಷದ ದೊಡ್ಡ ನಾಯಕರು ಅಸೆಂಬ್ಲಿಯಲ್ಲಿ ಚರ್ಚೆಗೆ ಬರಲಿ, ಉತ್ತರ ಕೊಡುತ್ತೇವೆ' ಎಂದರು.
ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದ:
ಬಿಡದಿ ಟೌನ್‌ಶಿಪ್‌ಗೆ ರೈತರ ವಿರೋಧದ ಬಗ್ಗೆ, "ಇದನ್ನು ಕುಮಾರಸ್ವಾಮಿ ಅವರೇ ನೋಟಿಫೈ ಮಾಡಿದ್ದು. ಡಿನೋಟಿಫೈ ಮಾಡಲು ಸಾಧ್ಯವಿಲ್ಲ, ಆದರೆ ರೈತರಿಗೆ ನ್ಯಾಯ ಒದಗಿಸುತ್ತೇವೆ. 9 ಸಾವಿರ ಎಕರೆಯಲ್ಲಿ 75% ಜನ ಒಪ್ಪಿಗೆ ನೀಡಿದ್ದಾರೆ. ನಾನೇ ರೈತರ ಜೊತೆ ಚರ್ಚಿಸಿ, ಅವರಿಗೆ ಮನವರಿಕೆ ಮಾಡುತ್ತೇನೆ," ಎಂದು ಭರವಸೆ ನೀಡಿದರು.
ಮೈಸೂರು ಕಾರ್ಯಕ್ರಮ ವಿವಾದ:
ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನ ಕಾರ್ಯಕ್ರಮದಲ್ಲಿ ಸ್ವಾಗತಿಸದ ವಿಚಾರಕ್ಕೆ, ಅದಕ್ಕೆ ಸಿಎಂ ಉತ್ತರ ಕೊಟ್ಟಿದ್ದಾರೆ, ಬಿಡಿ ಎಂದಷ್ಟೇ ಹೇಳಿದರು.
