Asianet Suvarna News Asianet Suvarna News

ಭಾರತದ ದೇವಸ್ಥಾನಗಳಿಗೆ ಮರಳುತ್ತಿದೆ ಸುವರ್ಣಯುಗ!

ಹಿಂದು ಧರ್ಮದ ಆತ್ಮ ಇರುವುದೇ ದೇವಾಲಯಗಳಲ್ಲಿ, ಹೀಗಾಗಿ ದೇವಸ್ಥಾನಗಳ ನಾಶದ ಜೊತೆ ಮಹಾ ಸಾಮ್ರಾಜ್ಯಗಳೇ ಅಳಿದಿವೆ. ದಾಳಿಕೋರರ ಅಟ್ಟಹಾಸಕ್ಕೆ ಬಲಿಯಾಗಿ ಅನೇಕ ಮಂದಿರಗಳ ಸಂಪತ್ತು, ವೈಭೋಗ ಶಾಶ್ವತ ಇಲ್ಲವಾಗಿತ್ತು. ಸ್ವಾತಂತ್ರ್ಯ ನಂತರವೂ ನೆಹರು, ಕಾಂಗ್ರೆಸ್ ಓಲೈಕೆಯಿಂದ ಅಧೋಗತಿಯಲ್ಲಿದ್ದ ಮಂದಿರಗಳಿಗೆ ವೈಭೋಗ ಮರಳಿದ್ದು ಮೋದಿ ಪ್ರಧಾನಿಯಾದಾಗ. ಇದೀಗ ಕೋಟ್ಯಂತರ ಆದಾಯ ತರುವಲ್ಲಿ ಅವೇ ಮುಂಚೂಣಿ

A golden era is returning to Indian temples article written by geervani MH rav
Author
First Published Dec 8, 2023, 7:38 AM IST

ಹಿಂದು ಧರ್ಮದ ಆತ್ಮ ಇರುವುದೇ ದೇವಾಲಯಗಳಲ್ಲಿ, ಹೀಗಾಗಿ ದೇವಸ್ಥಾನಗಳ ನಾಶದ ಜೊತೆ ಮಹಾ ಸಾಮ್ರಾಜ್ಯಗಳೇ ಅಳಿದಿವೆ. ದಾಳಿಕೋರರ ಅಟ್ಟಹಾಸಕ್ಕೆ ಬಲಿಯಾಗಿ ಗುರುಕುಲಗಳು, ಸನಾತನ ಪದ್ಧತಿ, ಧರ್ಮ ಗ್ರಂಥಗಳು, ದೇವಾಲಯಗಳ ಸಂಪತ್ತು, ಪುರಾತನ ವೈಭವ, ಅಪಾರ ಜ್ಞಾನ ಭಂಡಾರ ಶಾಶ್ವತವಾಗಿ ದೇಶ ಬಿಟ್ಟು ಹೋಗಿದ್ದವು. ಸ್ವಾತಂತ್ರ್ಯಾ ನಂತರವೂ ನೆಹರೂ, ಕಾಂಗ್ರೆಸ್‌ ನಿಷ್ಕಾಳಜಿಯಿಂದ ಅಧೋಗತಿಯಲ್ಲಿದ್ದ ದೇವಾಲಯಗಳಿಗೆ ವೈಭವ ಮರಳಿದ್ದು 2014ರಲ್ಲಿ ಮೋದಿ ಪ್ರಧಾನಿಯಾದಾಗ. ಇದೀಗ ದೇಶಕ್ಕೆ ಕೋಟ್ಯಾಂತರ ಆದಾಯ ತಂದು ಕೊಡುವಲ್ಲಿ ದೇವಾಯಗಳು ಮುಂಚೂಣಿಯಲ್ಲಿವೆ.

ಹಿಂದು ಧರ್ಮವನ್ನು ದೇವಸ್ಥಾನದಿಂದ ಬೇರೆ ಮಾಡಿ ನೋಡಲು ಸಾಧ್ಯವೇ ಇಲ್ಲ. ದೇವಸ್ಥಾನದ ಜೊತೆ ದೇವರ ಅಸ್ತಿತ್ವ ಹಾಗೂ ಹಿಂದುಗಳ ಅಸ್ತಿತ್ವ ಇವೆರಡೂ ಸಾವಿರಾರು ವರ್ಷಗಳಿಂದ ಸಾಗಿ ಬಂದಿವೆ. ಹೀಗಾಗಿಯೇ ಹಿಂದು ಧರ್ಮದ ಏಳು ಬೀಳುಗಳಲ್ಲಿ ದೇವಸ್ಥಾನಗಳದ್ದೂ ಸಮಪಾಲು. ಯಾವ್ಯಾವಾಗ ದೇವಾಲಯಗಳು ನಾಶವಾಗಿದೆಯೋ ಹಿಂದು ಧರ್ಮವೂ ನಲುಗಿದೆ. ಯಾವ್ಯಾವಾಗ ದೇವಾಲಯಗಳನ್ನು ದೋಚಲಾಯಿತೋ, ಆವಾಗೆಲ್ಲ ಹಿಂದುವೂ ಬಡವನಾಗಿದ್ದಾನೆ. ಯಾವ್ಯಾವಾಗ ದೇವಾಲಯಗಳನ್ನು ಭಗ್ನಗೊಳಿಸಲಾಯಿತೋ ಹಿಂದುವೂ ಆಂತರ್ಯದಲ್ಲಿ ಭಗ್ನಗೊಂಡಿದ್ದಾನೆ. ದೇವಸ್ಥಾನಗಳ ಜೊತೆ ಸಾಮ್ರಾಜ್ಯಗಳೇ ಅಳಿದಿವೆ. ಉದಾರಣೆಗೆ ವಿಜಯನಗರ ಸಾಮ್ರಾಜ್ಯ.

ಪ್ರಧಾನಿ ಮೋದಿಗೆ ತಿವಿದ ಸಿಎಂ ಸಿದ್ದರಾಮಯ್ಯಗೆ ಖಡಕ್‌ ಪ್ರತ್ಯುತ್ತರ ಕೊಟ್ಟ ನಮೋ ಬ್ರಿಗೇಡ್!

ಹಿಂದು ಧರ್ಮದ ಆತ್ಮ ದೇವಾಲಯಗಳಲ್ಲಿದೆ:

ಮೊಘಲರು ಆಕ್ರಮಣ ಮಾಡಿದಾಗ ಕೇವಲ ಜನರ ಸಂಪತ್ತನ್ನಷ್ಟೇ ದೋಚಿ ಹೋಗಬಹುದಿತ್ತು. ಆದರೆ ಅವರಿಗೆ ಗೊತ್ತಿತ್ತು, ಹಿಂದು ಧರ್ಮದ ಆತ್ಮ ಇರುವುದೇ ದೇವಾಲಯಗಳಲ್ಲಿ ಎಂದು. ಒಂದು ದೇವಾಲಯವನ್ನು ನಿಶ್ಯಕ್ತಗೊಳಿಸಬೇಕು ಅಂದ್ರೆ, ಇಡೀ ದೇವಸ್ಥಾನವನ್ನು ಕೊಳ್ಳೆ ಹೊಡೆದು ಕೆಡವಬೇಕು ಎಂದೇನಿಲ್ಲ. ಕೇವಲ ಗರ್ಭಗುಡಿಯ ಮೂರ್ತಿಯನ್ನು ಭಗ್ನಗೊಳಿಸಿದರೂ ಸಾಕು. ಅಲ್ಲಿಗೆ ಆ ದೇವಾಲಯದಲ್ಲಿ ಪೂಜೆ ನಿಂತು ಬಿಡುತ್ತದೆ. ಇದನ್ನು ಅರಿತುಕೊಂಡ ಮೊಘಲರು ಭಾರತದ ಬಹುತೇಕ ದೇವಾಲಯಗಳನ್ನು ಎಲ್ಲ ತರದಲ್ಲೂ ನಾಶ ಮಾಡಿದರು. ಸಾವಿರ ವರ್ಷಗಳ ಕಾಲ ಮೊಘಲರು ನಮ್ಮ ದೇವಾಲಯಗಳನ್ನು ಇನ್ನಿಲ್ಲದಂತೆ ಕೊಳ್ಳೆ ಹೊಡೆದು, ಹುರಿದು ಮುಕ್ಕಿದರು. ಅದಾದ ನಂತರ ಬ್ರಿಟೀಷರು ದೋಚಿದರು. ಸ್ವಾತಂತ್ರ್ಯ ಬರುವ ಹೊತ್ತಿಗೆ ಭಾರತ ಅದೆಷ್ಟು ನಿಸ್ತೇಜವಾಗಿತ್ತೆಂದರೆ, ದೇಶದಲ್ಲಿ ಯಾರು, ಯಾವ ಧರ್ಮ ತಂದು ಹೇರಿದ್ದರೂ ಬಹುಶಃ ಅದನ್ನು ಸ್ವೀಕರಿಸುತ್ತಿದ್ದರೇನೊ?

ನಮ್ಮ ಗುರುಕುಲಗಳು, ಸನಾತನ ಪದ್ಧತಿಗಳು, ಧರ್ಮ ಗ್ರಂಥಗಳು, ದೇವಾಲಯಗಳ ಸಂಪತ್ತು, ಪುರಾತನ ವೈಭವ, ಅಪಾರ ಜ್ಞಾನ ಭಂಡಾರ ಎಲ್ಲವೂ ದಾಳಿಕೋರರ ಅಟ್ಟಹಾಸಕ್ಕೆ ಬಲಿಯಾಗಿ ಶಾಶ್ವತವಾಗಿ ಈ ದೇಶ ಬಿಟ್ಟು ಹೋಗಿದ್ದವು.

ಧರಾಶಾಹಿಯಾದ ಹೆಸರಾಂತ ದೇವಾಲಯಗಳು:

ಗುಜರಾತಿನ ಸೋಮನಾಥ ದೇವಾಲಯ, ಕಾಶ್ಮೀರದ ಸೂರ್ಯ ಮಾರ್ತಾಂಡ ಮಂದಿರ, ಶಾರದಾ ಪೀಠ, ವಿಜಯನಗರ ಸಾಮ್ರಾಜ್ಯ, ಓರಿಸ್ಸಾದ ಚಂದೇಲಾ ಸಾಮ್ರಾಜ್ಯ, ದೆಹಲಿಯ ವಿಷ್ಣು ಸ್ತಂಭ (ಇವತ್ತಿನ ಕುತುಬ್ ಮಿನಾರ್‌), ಅಯೋಧ್ಯೆಯ ರಾಮ ಮಂದಿರ, ಕಾಶಿಯ ವಿಶ್ವನಾಥ ದೇವಸ್ಥಾನ ಎಲ್ಲವೂ ಅಕ್ಷರಶಃ ಧರಾಶಾಹಿಯಾಗಿ ಅತ್ಯಂತ ಹೀನ ಸ್ಥಿತಿಯಲ್ಲಿದ್ದವು.

ಸ್ವಾತಂತ್ರ್ಯಾ ನಂತರವೂ ಅಸಡ್ಡೆ:

ಸ್ವಾತಂತ್ರ್ಯ ಬಂತು. ಈಗಲಾದರೂ ನಮ್ಮ ದೇವಾಲಯಗಳ ಜೀರ್ಣೋದ್ಧಾರ ಆಗಬಹುದೇನೊ ಅಂದುಕೊಂಡರೆ, "ಸ್ಟೇಟಸ್ ಕೊ" ತರದ ಆಕ್ಟ್ ತಂದು ಬಿಟ್ಟರು. ದೇಶದ ಧಾರ್ಮಿಕ ಸ್ಥಳಗಳು ಯಾವ ಸ್ಥಿತಿಯಲ್ಲಿವೆಯೋ ಹಾಗೆಯೇ ಇರಬೇಕು, ಬದಲಾಯಿಸುವಂತಿಲ್ಲ. ಎಂಥ ದುರಂತ ನೋಡಿ!

ನೆಹರೂ ಓಲೈಕೆ:

ಈ ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಯಾವ ಹುಮ್ಮಸ್ಸೂ ಇರಲಿಲ್ಲ. ಕಾರಣ ಅವರ ಸಂಸ್ಕೃತಿ ಮೂಲತಃ ಹಿಂದುವಾಗಿರಲಿಲ್ಲ. ಭಾರತದ ಜನ ದೇವರು, ಧರ್ಮ ಎಂದು ಬದುಕಿದ್ದು ಸಾಕು, ಇನ್ನು ಈ ದೇಶವನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಟ್ಟೋಣ ಎಂದು ತೀರ್ಮಾನಿಸಲಾಯಿತು. ಆ ಮೂಲಕ ಪರೋಕ್ಷವಾಗಿ ಆಗಿನಿಂದಲೇ ಓಲೈಕೆ ರಾಜಕಾರಣ ಶುರು ಮಾಡಿದರು. ಅಲ್ಲಿಂದ ಈ ದೇಶದ ಮೂಲ, ಇತಿಹಾಸ, ಬಲ ಎಲ್ಲವೂ ಆಗಿದ್ದ ಹಿಂದು ಧರ್ಮಕ್ಕೆ ದೊಡ್ಡದೊಂದು ಬರೆ ನೀಡಲಾಯಿತು. ಪರಿಣಾಮ ನಮ್ಮ ದೇವಸ್ಥಾನಗಳು ಕೇಳುವವರಿಲ್ಲದೇ ಅಬ್ಬೆಪಾರಿಯಾದವು. ಹಿಂದುಗಳು ತಮ್ಮದೇ ದೇಶದಲ್ಲಿ ಪರಕೀಯರಾದರು.

2014ರ ನಂತರ ಮೂಡಿದ ಭರವಸೆ:

ಇಷ್ಟೆಲ್ಲ ಆಗಿ ಆರು ದಶಕಗಳು ಕಳೆದ ಮೇಲೆ ಸಣ್ಣ ಬೆಳಕೊಂದು ಕಾಣ ತೊಡಗಿದ್ದು ೨೦೧೪ರ ನಂತರ. ಸ್ವಾತಂತ್ರ್ಯ ಬಂದಾಗಿನಿಂದ ೨೦೧೪ರಲ್ಲಿ ಮೋದಿಜಿ ಸರ್ಕಾರ ಬರುವವರೆಗೂ ನಮ್ಮ ದೇವಸ್ಥಾನಗಳು ಯಾವ ಸ್ಥಿತಿಯಲ್ಲಿದ್ದವು ಎನ್ನೋದು ನಿಮಗೇ ಗೊತ್ತಿದೆ. ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ರಾಮಮಂದಿರ ಸಮಸ್ಯೆ ಹಾಗೇ ಉಳಿದಿತ್ತು. ಕಾಶಿ ವಿಶ್ವನಾಥ ಮಂದಿರ ಕೊಳಕು ಗಲ್ಲಿಗಳಲ್ಲೇ ಇತ್ತು. ಕಾಶ್ಮೀರದ ಹಿಂದು ದೇವಸ್ಥಾನಗಳಂತೂ ಜನಸಾಮಾನ್ಯರಿಗೆ ಗೊತ್ತೇ ಇರಲಿಲ್ಲ. ಆದರೆ ಈಗ ನಿಧಾನವಾಗಿ ದೇವಾಲಯಗಳ ನಸೀಬು ಬದಲಾಗುತ್ತಿದೆ. ಅಯೋಧ್ಯೆಯಲ್ಲಿ ಬರುವ ಜನೇವರಿ 22ರಂದು ರಾಮ ಮಂದಿರ ಸಿದ್ಧವಾಗಿ ಪ್ರಾಣ ಪ್ರತಿಷ್ಠೆನೂ ನಡೆಯೋದಿದೆ. ೩೩೦ ಮೀಟರ್ ಉದ್ದದ ಕಾಶಿ ಕಾರಿಡಾರ್ ನಿರ್ಮಾಣವಾಗಿ ವರ್ಷಕ್ಕೆ ೭ ಕೋಟಿ ಜನ ಭೇಟಿ ನೀಡ್ತಿದಾರೆ. ಭಯಾನಕ ಪ್ರವಾಹದಿಂದ ತತ್ತರಿಸಿದ್ದ ಕೇದಾರನಾಥ ಧಾಮವನ್ನೂ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಪುನರ್‌ನಿರ್ಮಾಣ ಮಾಡಲಾಗಿದೆ. ಉಜ್ಜಯನಿಯ ಮಹಾಕಾಲ ಮಂದಿರದಲ್ಲೂ ಕಾರಿಡಾರ್ ನಿರ್ಮಿಸಲಾಯಿತು. ಕಳೆದ ಹತ್ತು ವರ್ಷಗಳಲ್ಲಿ ದೇವಾಲಯಗಳಿಗೆ ಹೊಸ ಕಳೆ ಬಂದಿದೆ.

ಇದೆಲ್ಲದರಿಂದ ಏನಾಯ್ತು?:

ಜನ ಹೆಚ್ಚು ಹೆಚ್ಚು ದೇವಾಲಯಗಳಿಗೆ ಪ್ರವಾಸ ಹೋಗತೊಡಗಿದರು. ಇವತ್ತು ಭಾರತದ ಟೆಂಪಲ್ ಟೂರಿಸಂ ಬಹಳ ಬೂಮ್‌ನಲ್ಲಿದೆ. ಈ ದೇಶದ ನಾಲ್ಕು ಜನರಲ್ಲಿ ಒಬ್ಬ ದೇವಸ್ಥಾನಕ್ಕೆ ಪ್ರವಾಸ ಹೋಗ್ತಿದ್ದಾನೆ. 25 ಪ್ರತಿಶತ ಭಾರತೀಯರು ಎಂದಿಗಿಂತ ಹೆಚ್ಚು ರಿಲೀಜಿಯಸ್ ಆಗಿದ್ದಾರೆ. ಶೇ. ೮೦ರಷ್ಟು ಮಂದಿ ಧರ್ಮ ತಮ್ಮ ಜೀವನದಲ್ಲಿ ಬಹಳ ಮುಖ್ಯ ಅಂತ ಹೇಳಿದ್ದಾರೆ. ೨೦೧೧ರ ವರದಿ ಪ್ರಕಾರ ಭಾರತದಲ್ಲಿ ೩೦ ಲಕ್ಷಕ್ಕೂ ಹೆಚ್ಚು ಧಾರ್ಮಿಕ, ಪೂಜನೀಯ ಸ್ಥಳಗಳಿವೆ.

ಹಾಗಾದ್ರೆ ಈ ಬದಲಾವಣೆ ಬರಲು ಕಾರಣವಾದ್ರೂ ಏನು?:

ಇದಕ್ಕೆಲ್ಲ ಮುಖ್ಯ ಕಾರಣ ರಾಮಮಂದಿರ ತೀರ್ಪು ಹಾಗೂ ನಿರ್ಮಾಣ. ರಾಮಮಂದಿರವೇ ಭಾರತದ ದೇವಾಲಯಗಳ ಗೇಮ್ ಚೇಂಜರ್.

ಭಾರತದ ರಿಲೀಜಿಯಸ್ ಎಕಾನಮಿ ಈಗ ಹಿಂದೆಂದಿಗಿಂತ ಏರುಗತಿಯಲ್ಲಿದೆ. ದೇಶದ ಎಕಾನಮಿಯಲ್ಲಿ ರಿಲೀಜಿಯಸ್ ಟೂರಿಸಂನ ಕಾಂಟ್ರಿಬ್ಯೂಶನ್ ಎಷ್ಟು ಗೊತ್ತೆ? ₹೩.೦೫ ಲಕ್ಷ ಕೋಟಿಯಾಗಿದೆ. ಅಂದ್ರೆ ೪೦ ಬಿಲಿಯನ್ ಡಾಲರ್. ಇದು ದೇಶದ ಜಿಡಿಪಿಯ ೨.೩೨% ನಷ್ಟು! ಇದು ಅಂದಾಜು ಮಾಡಲಾದ ಜಿಡಿಪಿ. ನಿಜವಾದ ಅಂಕಿಸಂಖ್ಯೆ ಇದಕ್ಕಿಂತ ಜಾಸ್ತಿ ಇದ್ದಿರತ್ತೆ. ಭಾರತೀಯರು ಈಗ ಬಿಸಿನೆಸ್ ಟ್ರಾವೆಲ್ ಗಿಂತ ರಿಲೀಜಿಯಸ್ ಟ್ರಾವೆಲ್ ಜಾಸ್ತಿ ಮಾಡುತ್ತಿದ್ದಾರೆ. ಎಜುಕೇಶನ್ ಟೂರ್‌ಗಿಂತ ರಿಲೀಜಿಯಸ್ ಟೂರ್‌ಗೆ ಹೆಚ್ಚು ಖರ್ಚು ಮಾಡ್ತಿದ್ದಾರೆ. ಇದೆಲ್ಲದರ ಪರಿಣಾಮ ತಿರುಪತಿ, ವೈಷ್ಣೊದೇವಿ, ಗುಜರಾತಿನ ಅಂಬಾಜಿ ಟೆಂಪಲ್, ದ್ವಾರಕಾ, ಸೋಮನಾಥ, ಅಮೃತಸರ ದೇವಾಲಯಗಳಿಂದ ನೂರಾರು ಕೋಟಿ ಆದಾಯ ಗಳಿಕೆಯಾಗುತ್ತಿದೆ.

ನಮ್ಮ ದೇವಾಲಯಗಳು ಹೇಗೆ ಕೋಟಿ ದುಡಿಯುತ್ತಿವೆ?:

ಇದು ನಮಗೆಲ್ಲ ಗೊತ್ತಿರೋ ವಿಚಾರನೇ. ಅದೇನಂದ್ರೆ ಹೂವು, ಹಣ್ಣು, ತೆಂಗಿನಕಾಯಿ, ದೀಪ, ದೀಪದೆಣ್ಣೆ, ರವಿಕೆ, ಕಣ, ಅರಿಷಿಣ ಕುಂಕುಮ ಇವೆಲ್ಲ ವರ್ಷಪೂರ್ತಿ ಮಾರಾಟವಾಗುವಂಥದ್ದು. ಇವುಗಳನ್ನ ಉತ್ಪಾದನೆ ಮಾಡೋರಿಂದ ಹಿಡಿದು ಮಾರುವವರ ತನಕನೂ ವರ್ಷಪೂರ್ತಿ ಕೆಲ್ಸ ಸಿಗ್ತಿದೆ. ಬೇರೆ ಇಂಡಸ್ಟ್ರಿಗೆ ರಿಸೀಶನ್ ಬರ್ಬಹುದು, ಆದ್ರೆ, ಇದ್ಕೆ ಬರಲ್ಲ. ವರ್ಷದ ೩೬೫ ದಿನವೂ ಚಾಲೂ ಇರತ್ತೆ. ಜೊತೆಗೆ ಹುಂಡಿಗೆ ಬೀಳುತ್ತಿರುವ ಕಾಣಿಕೆ ಪರ್ಯಾಯವಾಗಿ ಸರ್ಕಾರವನ್ನೂ ಸಲಹುತ್ತಿದೆ.

ದೇವಾಲಯಗಳ ಆದಾಯ ಹೆಚ್ಚಿಸಿದ ಮೋದಿ ಸರ್ಕಾರ:

ಹೀಗಾಗಿ ಭಾರತದ ರಿಲೀಜಿಯಸ್ ಎಕಾನಮಿಯ ವಾರ್ಷಿಕ ಆದಾಯ ೪೦ ಬಿಲಿಯನ್. ಇದನ್ನ ಇನ್ನಷ್ಟು ಹೆಚ್ಚು ಮಾಡೋದಕ್ಕೆ ನರೇಂದ್ರ ಮೋದಿಯವರ ಸರ್ಕಾರ ಸ್ವದೇಶ್ ದರ್ಶನ್, ದೇಖೊ ಅಪನಾ ದೇಶ್ ಪ್ರಸಾದ್ ಮುಂತಾದ ಸ್ಕೀಮ್ ಗಳನ್ನ ಹಾಕಿದೆ.

ಇದರ ಅಡಿಯಲ್ಲಿ ಪುಣ್ಯ ಸ್ಥಳಗಳ ಅಭಿವೃದ್ಧಿ ಯೋಜನೆ ಬರುತ್ತವೆ. ಭಕ್ತಾದಿಗಳಿಗೆ ಬೇಕಾದ ರಸ್ತೆ, ವಸತಿ, ಹೋಟೆಲ್, ಆಸ್ಪತ್ರೆ ತರದ ಸೌಲಭ್ಯ ಮಾಡಿಕೊಡಲಾಗ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಧಾರ್ಮಿಕ ಸ್ಥಳಗಳು ದೇಶದ ಎಕಾನಮಿಗೆ ಬಹುದೊಡ್ಡ ಕೊಡುಗೆ ನೀಡುವುದಲ್ಲಿ ಅನುಮಾನವೇ ಬೇಡ.

ಮಣಿಪುರದ ಸ್ಥಿತಿಗೆ ವೋಟ್‌ ಬ್ಯಾಂಕ್‌ ರಾಜಕಾರಣ ಕಾರಣ: ಸೂಲಿಬೆಲೆ

ಇತಿಹಾಸದಲ್ಲಿ ಆ ರಾಜರ ಕಾಲ ಸುವರ್ಣಯುಗವಾಗಿತ್ತಂತೆ, ಈ ರಾಜರ ಕಾಲದಲ್ಲಿ ದೇಶ ಉತ್ತುಂಗ ಸ್ಥಿತಿಯಲ್ಲಿತ್ತಂತೆ ಎಂದು ಕೇಳುತ್ತೇವೆ. ಮುಂದೊಂದು ದಿನ ಭಾರತದ ದೇವಾಲಯಗಳಿಗೆ ಮರುಜೀವ ನೀಡಿದ ಕೀರ್ತಿ ಮೋದಿಜಿಗೆ ಸಲ್ಲುತ್ತದೆ. ಭವಿಷ್ಯದ ಮಕ್ಕಳು ನಮ್ಮ ದೇವಾಲಯಗಳ ಕತೆ ಕೇಳುವಾಗ ಮೋದಿಜಿ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ.

- ಗೀರ್ವಾಣಿ ಎಮ್.ಎಚ್.

ನಮೋಬ್ರಿಗೇಡ್

Latest Videos
Follow Us:
Download App:
  • android
  • ios