ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಭಾರತವು ಸಶಸ್ತ್ರ ನಕ್ಸಲಿಸಂ ಅನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ ಎಂದು ಘೋಷಿಸಿದರು. ಆದರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ 'ದಿಮಾಗಿ ನಕ್ಸಲರು' ಎಂಬ ಹೊಸ ಸವಾಲಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ (ಆ.15): ದೇಶದಲ್ಲಿ ಕ್ರಾಂತಿಕಾರಿ ಹಿಂಸಾಚಾರ ನಡೆಸುತಿದ್ದ ಸಶಸ್ತ್ರ ನಕ್ಸಲಿಸಂ ಮತ್ತು ಮಾವೋವಾದಿ ಹಿಂಸೆಯನ್ನು ಭಾರತವು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ. ಆದರೆ, ಸಮಾಜದಲ್ಲಿ ಅಶಾಂತಿ ಎಬ್ಬಿಸಲು ಯತ್ನಿಸುತ್ತಿರುವ 'ದಿಮಾಗಿ ನಕ್ಸಲರನ್ನು' (ಬೌದ್ಧಿಕ ನಕ್ಸಲರು ಅಥವಾ ನಕ್ಸಲ್ ಮನಸ್ಥಿತಿಯ ವ್ಯಕ್ತಿಗಳು) ಪತ್ತೆ ಹಚ್ಚಿ, ಅವರನ್ನು ಮೂಲೆಗುಂಪು ಮಾಡುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾರ್ನಿಂಗ್ ನೀಡಿದ್ದಾರೆ. ಶನಿವಾರ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸಶಸ್ತ್ರ ನಕ್ಸಲಿಸಂ ನಿರ್ಮೂಲನೆಯಾಗಿದ್ದರೂ ಅವರ ವಿಚಾರಧಾರೆ ಇಂದಿಗೂ ಸಮಾಜದಲ್ಲಿ ಉಳಿದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
‘ಕಾಡಿನ ನಕ್ಸಲರು ಅಂತ್ಯ, ಆದರೆ ದಿಮಾಗಿ ನಕ್ಸಲರು ಇನ್ನೂ ಇದ್ದಾರೆ’
ಕಾಡುಗಳಲ್ಲಿ ಬಂದೂಕು ಹಿಡಿದು ಹಿಂಸೆ ಹರಡುತ್ತಿದ್ದ ಸಶಸ್ತ್ರ ನಕ್ಸಲರನ್ನು ನಿರ್ಮೂಲನೆ ಮಾಡುವ ಮೂಲಕ ದೇಶವನ್ನು ದೊಡ್ಡ ಬಿಕ್ಕಟ್ಟಿನಿಂದ ಮುಕ್ತಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೆ, ಬಂದೂಕು ಹಿಡಿದ ನಕ್ಸಲರು ಅಂತ್ಯವಾಗಿದ್ದರೂ, 'ದಿಮಾಗಿ ನಕ್ಸಲರು' ಇನ್ನುಳಿದಿದ್ದಾರೆ. ಅಂತಹ ಮನಸ್ಥಿತಿ ಹೊಂದಿರುವವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಮುಂದುವರಿದು ಮಾತನಾಡಿದ ಅವರು, "ಈ ರೀತಿಯ ಮನಸ್ಥಿತಿಯು ದೇಶದಲ್ಲಿ ಹಿಂಸೆ ಮತ್ತು ಅಶಾಂತಿಗೆ ದಾರಿ ಮಾಡಿಕೊಡುತ್ತಿದೆ. ವಿವಿಧ ರೀತಿಯ ಕುತಂತ್ರಗಳನ್ನು ಬಳಸಿ ಸಮಾಜವನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ನಾವು ಈ 'ದಿಮಾಗಿ ನಕ್ಸಲರನ್ನು' ಗುರುತಿಸಬೇಕಿದೆ. ಅವರನ್ನು ಸಮಾಜದಿಂದ ಪ್ರತ್ಯೇಕಿಸಿ (ಮೂಲೆಗುಂಪು ಮಾಡಿ), ದೇಶದ ಯುವಶಕ್ತಿಯನ್ನು 'ವಿಕಸಿತ ಭಾರತ' ನಿರ್ಮಾಣದ ಮುಖ್ಯವಾಹಿನಿಗೆ ತರಬೇಕಿದೆ" ಎಂದು ಕರೆ ನೀಡಿದರು.
2014ರ ಸಂಕಲ್ಪ ಮತ್ತು 3,500ಕ್ಕೂ ಹೆಚ್ಚು ಯೋಧರ ತ್ಯಾಗ
2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಭಾರತವನ್ನು ನಕ್ಸಲ ಮುಕ್ತಗೊಳಿಸುವ ದೃಢ ಸಂಕಲ್ಪ ಮಾಡಲಾಗಿತ್ತು ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡರು. ಸುಮಾರು ನಾಲ್ಕು ದಶಕಗಳ ಕಾಲ ನಕ್ಸಲಿಸಂ ಮತ್ತು ಮಾವೋವಾದವು ದೇಶದ ಬೃಹತ್ ಪ್ರದೇಶ ಹಾಗೂ ಜನಸಂಖ್ಯೆಯನ್ನು ಬಂದೂಕಿನ ತುದಿಯಲ್ಲಿ ಜಿಹಾದಿ ಅಥವಾ ಕ್ರಾಂತಿಯ ಹೆಸರಿನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಸಂವಿಧಾನಿಕ ಚೌಕಟ್ಟನ್ನೇ ಧ್ವಂಸಗೊಳಿಸಲು ಯತ್ನಿಸಿ ಲಕ್ಷಾಂತರ ಯುವಕರ ಭವಿಷ್ಯವನ್ನು ಬಲಿಪಡೆದಿತ್ತು.
ಸಾರ್ವಜನಿಕರ ರಕ್ಷಣೆಗಾಗಿ ಮತ್ತು ನಕ್ಸಲ್ ಪೀಡಿತ ಪ್ರದೇಶಗಳನ್ನು ಮುಕ್ತಗೊಳಿಸಲು 3,500ಕ್ಕೂ ಹೆಚ್ಚು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ತಮ್ಮ ಜೀವ ತ್ಯಾಗ ಮಾಡಿದ್ದಾರೆ. ಪ್ರಸ್ತುತ ನಕ್ಸಲ್ ಹಿಂಸಾಚಾರವು ತನ್ನ ಕೊನೆಯ ಉಸಿರೆಳೆಯುತ್ತಿದೆ. ಅದಕ್ಕೆ ಇನ್ನು ಮುಂದೆ ಚೇತರಿಸಿಕೊಳ್ಳುವ ಶಕ್ತಿ ಇಲ್ಲ. ಶೀಘ್ರದಲ್ಲೇ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅವರು ಪ್ರತಿಪಾದಿಸಿದರು.
ಸಂಸ್ಥೆಗಳ ಮೇಲೆ ಮಾವೋವಾದಿ ಪ್ರಭಾವದ ಎಚ್ಚರಿಕೆ
ತಮ್ಮ ಸರ್ಕಾರದ ಹೋರಾಟ ಕೇವಲ ಕಾಡಿನ ಬಂದೂಕುಧಾರಿಗಳ ವಿರುದ್ಧ ಮಾತ್ರವಲ್ಲ ಎಂದ ಪ್ರಧಾನಿ, ಸಾರ್ವಜನಿಕ ಸಂಸ್ಥೆಗಳು, ಸಮಿತಿಗಳು ಹಾಗೂ ಕಾರಿಡಾರ್‌ಗಳಲ್ಲಿ ಮಾವೋವಾದಿ ಚಿಂತನೆ ತೂರಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು. ಅಂತಹ ಬೌದ್ಧಿಕ ಬೆಂಬಲ ನೀಡುವ ಗುಂಪುಗಳು ದೇಶದ ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ, ಆದ್ದರಿಂದ ಸದಾ ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಲೂ ಶ್ಲಾಘನೆ
ಸ್ವಾತಂತ್ರ್ಯೋತ್ಸವದ ಮುನ್ನಾದಿನದಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ನಕ್ಸಲಿಸಂ ನಿರ್ಮೂಲನೆಯನ್ನು ಭಾರತದ ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದರು. ದಶಕಗಳ ಕಾಲ ದೇಶಕ್ಕೆ ದೊಡ್ಡ ಸವಾಲಾಗಿದ್ದ ನಕ್ಸಲಿಸಂ ಅನ್ನು ದೇಶದಿಂದ ತೊಡೆದುಹಾಕಿರುವುದು ಅತ್ಯಂತ ಮಹತ್ವದ ಸಾಧನೆಯಾಗಿದೆ. ಒಮ್ಮೆ ನಕ್ಸಲ್ ಪೀಡಿತವಾಗಿದ್ದ ಪ್ರದೇಶಗಳಲ್ಲಿ ಇಂದು ಎಲ್ಲರನ್ನು ಒಳಗೊಳ್ಳುವ ಸಮಗ್ರ ಅಭಿವೃದ್ಧಿ ಸಾಗುತ್ತಿದ್ದು, ಜನರಲ್ಲಿ ಹೊಸ ಉತ್ಸಾಹ ಮೂಡಿದೆ. ಛತ್ತೀಸ್‌ಗಢದ ಬಸ್ತಾರ್ ಒಲಿಂಪಿಕ್ಸ್ ಹಾಗೂ ಬಸ್ತಾರ್ ಪಂಡುಮ್ ಉತ್ಸವಗಳಲ್ಲಿ ಸ್ಥಳೀಯರ ಸಕ್ರಿಯ ಭಾಗವಹಿಸುವಿಕೆಯೇ ಇದಕ್ಕೆ ಸಾಕ್ಷಿ ಎಂದು ರಾಷ್ಟ್ರಪತಿ ಹೆಮ್ಮೆಯಿಂದ ಉಲ್ಲೇಖಿಸಿದ್ದರು.


