Asianet Suvarna News Asianet Suvarna News

Uttara Kannada: ಅಂಗನವಾಡಿ ಮಕ್ಕಳಿಗಾಗಿ ಗಂಗೆಯನ್ನು ತರಲು ಗೌರಿಯ ಭಗೀರಥ ಪ್ರಯತ್ನ!

ಆಕೆ ಈಗಾಗಲೇ ಏಕಾಂಗಿಯಾಗಿ ಎರಡೆರಡು ಬಾವಿಗಳನ್ನು ತೋಡಿರುವ ಛಲಗಾರ್ತಿ. ಆದರೆ, ಇದೀಗ ಅಂಗನವಾಡಿ ಮಕ್ಕಳ ಹಾಗೂ ಸಾರ್ವಜನಿಕರ ನೀರಿನ ದಾಹ ತಣಿಸಲು ಕಳೆದ‌ 10 ದಿನಗಳಿಂದ ಮತ್ತೆ ಏಕಾಂಗಿಯಾಗಿ ಬಾವಿ ತೋಡುತ್ತಿದ್ದಾರೆ. 

55 Year Old Women From Sirsi Single Handedly Digging Well For Anganwadi Childrens gvd
Author
First Published Feb 9, 2024, 1:32 PM IST

ಭರತ್‌ರಾಜ್ ಕಲ್ಲಡ್ಕ, ಕಾರವಾರ

ಉತ್ತರ ಕನ್ನಡ (ಫೆ.09): ಆಕೆ ಈಗಾಗಲೇ ಏಕಾಂಗಿಯಾಗಿ ಎರಡೆರಡು ಬಾವಿಗಳನ್ನು ತೋಡಿರುವ ಛಲಗಾರ್ತಿ. ಆದರೆ, ಇದೀಗ ಅಂಗನವಾಡಿ ಮಕ್ಕಳ ಹಾಗೂ ಸಾರ್ವಜನಿಕರ ನೀರಿನ ದಾಹ ತಣಿಸಲು ಕಳೆದ‌ 10 ದಿನಗಳಿಂದ ಮತ್ತೆ ಏಕಾಂಗಿಯಾಗಿ ಬಾವಿ ತೋಡುತ್ತಿದ್ದಾರೆ. ಈ‌ ಮೂಲಕ ಪುಟಾಣಿ ಮಕ್ಕಳಿಗೆ ಹಾಗೂ ಶಿರಸಿ ಜಾತ್ರೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಪಣ ತೊಟ್ಟಿದ್ದಾರೆ. ಅಷ್ಟಕ್ಕೂ ಆ ಮಹಿಳೆ ಯಾರು ಅಂತೀರಾ ..? ಈ ಸ್ಟೋರಿ ನೋಡಿ‌. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿರುವ ಅಂಗನವಾಡಿಯ ಪುಟಾಣಿ ಮಕ್ಕಳು ಹಾಗೂ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು ಎಂಬ ಉದ್ದೇಶದಿಂದ ಸ್ಥಳೀಯ ನಿವಾಸಿಯಾದ ಗೌರಿ ನಾಯ್ಕ್ ಎಂಬ ಮಹಿಳೆ ಸತತವಾಗಿ ಕಳೆದ 10 ದಿನಗಳಿಂದ ಬಾವಿ ತೋಡುತ್ತಿದ್ದಾರೆ. 

ಶಿರಸಿ ಗಣೇಶನಗರದ ಅಂಗನವಾಡಿಗೆ ಎರಡು ದಿನಗಳಿಗೊಮ್ಮೆ ಪಂಚಾಯತ್ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈ ನೀರು ಅಷ್ಟೊಂದು ಶುದ್ಧವಾಗಿರದ ಕಾರಣ ಅಂಗನವಾಡಿ ಕಾರ್ಯಕರ್ತೆಯರು ಸುಮಾರು 100ಮೀ‌. ದೂರದಿಂದ ವ್ಯಕ್ತಿಯೋರ್ವರ ಮನೆಯ ಬಾವಿಯ ನೀರನ್ನು ತಂದು ಮಕ್ಕಳಿಗೆ ಅಡುಗೆ ಹಾಗೂ ಕುಡಿಯಲು ಪೂರೈಕೆ ಮಾಡಲಾಗುತ್ತಿತ್ತು. ಇದನ್ನು ಕಂಡ ಛಲಗಾರ್ತಿ ಗೌರಿ ನಾಯ್ಕ್ ತಾನೇ ಖುದ್ದಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಿ ತಾನು ಅಂಗನವಾಡಿಯ ಹಿಂದೆ ಬಾವಿ ತೆಗೆದುಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ, ಸ್ಥಳೀಯ ಗ್ರಾಮ‌ ಪಂಚಾಯತ್ ಸೇರಿದಂತೆ ಯಾರ ಸಹಾಯವನ್ನೂ ಪಡೆಯದೇ ಕಳೆದ 10 ದಿನಗಳಿಂದ ಏಕಾಂಗಿಯಾಗಿ ಬಾವಿ ತೋಡುತ್ತಿದ್ದಾರೆ. 

ತೆರಿಗೆ ವಿಚಾರದಲ್ಲಿ ರಾಜ್ಯಕ್ಕಾದ ಅನ್ಯಾಯದ ಸತ್ಯಾಂಶವನ್ನ ಪೂಂಜಾ ಒಪ್ಪಿಕೊಳ್ಳಬೇಕು: ಸಚಿವ ದಿನೇಶ್ ಗುಂಡೂರಾವ್

ಗೌರಿ ನಾಯ್ಕ್ ಅವರ ವಿಶಿಷ್ಠ ಸಮಾಜ ಸೇವೆಯನ್ನು ಕಂಡು ಆಕೆಯ ಸೊಸೆ ಹರ್ಷ ವ್ಯಕ್ತಪಡಿಸಿದರೆ, ಅಂಗನವಾಡಿ ಕಾರ್ಯಕರ್ತೆಯರು ಕೃತಜ್ಞತೆ ಸಲ್ಲಿಸಿದ್ದಾರೆ. ಅಂದಹಾಗೆ, 55 ವರ್ಷ ಪ್ರಾಯದ ಗೌರಿ ನಾಯ್ಕ್ ಈ ಹಿಂದೆ ತನ್ನ ತೋಟ ಹಾಗೂ ಮನೆಯ ಮುಂದೆ ಏಕಾಂಗಿ ಶ್ರಮ ಪಟ್ಟು ಎರಡು ಬಾವಿ ತೋಡುವ ಮೂಲಕ ಹೆಸರುವಾಸಿಯಾಗಿದ್ದರು. ತಮ್ಮ ಜಮೀನಿನಲ್ಲಿ ತೋಡಿದ್ದ ಬಾವಿಗಳ ನೀರನ್ನು ತಮ್ಮ ತೋಟಕ್ಕೆ‌ ಹಾಗೂ ಸ್ವಂತಕ್ಕೆ ಮಾತ್ರವಲ್ಲದೇ, ಗ್ರಾಮದ ಜನರಿಗೂ ನೀಡುತ್ತಾರೆ. ಸದಾ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಹಂಬಲ ಹೊಂದಿದ್ದ ಈ ಮಹಿಳೆ ಇದೀಗ ಪುಟಾಣಿ ಮಕ್ಕಳಿಗಾಗಿ ಹಾಗೂ ಸ್ಥಳೀಯರಿಗಾಗಿ ಜನವರಿ 30ರಿಂದ ಅಂಗನವಾಡಿಯ ಹಿಂಭಾಗದ ಜಾಗದಲ್ಲಿ ಯಾರ ಸಹಾಯವನ್ನೂ ಪಡೆಯದೇ ಮತ್ತೆ ಬಾವಿ ತೋಡುತ್ತಿದ್ದಾರೆ. 

ರಾಜ್ಯವನ್ನು ಲೂಟಿ ಮಾಡಲು ಹೊರಟ ಸಿದ್ದರಾಮಯ್ಯ: ಅನಂತಕುಮಾರ ಹೆಗಡೆ ಆರೋಪ

ಇವರ ಏಕಾಂಗಿ ಪ್ರಯತ್ನದಿಂದ ಈಗಾಗಲೇ 8ರಿಂದ 10 ಅಡಿ ಆಳದಷ್ಟು ಬಾವಿ ತೋಡಲಾಗಿದೆ. ಅಂಗನವಾಡಿ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಕುಡಿಯಲು ಶುದ್ಧ ನೀರು ಸಿಗಬೇಕು ಎಂಬ ಹೆಬ್ಬಯಕೆ ಇವರದ್ದಾಗಿದ್ದು,  ಶಿರಸಿಯ ಜಾತ್ರೆಯ ಒಳಗಾಗಿ ಬಾವಿ ನಿರ್ಮಾಣ ಕಾರ್ಯ ಮುಗಿಯಬೇಕೆನ್ನುವುದು ಇವರ ಗುರಿ. ಒಂದು ವೇಳೆ ಬಾವಿಯಲ್ಲಿ ಉತ್ತಮ ನೀರು ಬಂದಲ್ಲಿ ಶಿರಸಿ ಮಾರಿಕಾಂಬೆ ಜಾತ್ರೆಗೆ 500 ಲೀ. ಶುದ್ಧ ನೀರು ಇದೇ ಬಾವಿಯಿಂದ ಕೊಡುವ ಮಹದಾಸೆಯನ್ನು ಗೌರಿ ನಾಯ್ಕ್ ಹೊಂದಿದ್ದಾರೆ.  ಒಟ್ಟಿನಲ್ಲಿ ಸದ್ಯ ಪ್ರತೀ ದಿನ ತನ್ನೆಲ್ಲಾ ಕಾಯಕಗಳನ್ನು ಬದಿಗೊತ್ತಿ ಬೆಳಗ್ಗೆಯಿಂದ ಸಂಜೆಯವರೆಗೆ ಅಂಗನವಾಡಿ ಹಿಂಭಾಗದಲ್ಲಿ ಗೌರಿ ನಾಯ್ಕ್ ಬಾವಿ ನಿರ್ಮಿಸುತ್ತಿದ್ದಾರೆ. ಈಕೆಯ ಮೂರನೇ ಭಗೀರಥ ಪ್ರಯತ್ನ ಯಶಸ್ಸು ಕಂಡು ಬಾವಿಯಲ್ಲಿ ಗಂಗೆ ಉತ್ಪತ್ತಿಯಾಗುವ ಮೂಲಕ ಅಂಗನವಾಡಿ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ನೀರು ಪೂರೈಕೆಯಾಗುವಂತಾಗಲೀ ಅನ್ನೋದು ನಮ್ಮ ಆಶಯ.

Follow Us:
Download App:
  • android
  • ios