*   ಲಸಿಕಾಕರಣಕ್ಕೆ ಜ.3ಕ್ಕೆ ಸಿಎಂ ಚಾಲನೆ*   ಜಿಲ್ಲೆಗಳಲ್ಲಿ ಸಚಿವರು, ಶಾಸಕರಿಂದ ಚಾಲನೆ*   15ರಿಂದ 18 ವರ್ಷದ 43 ಲಕ್ಷ ಮಕ್ಕಳು ಲಸಿಕೆಗೆ ಅರ್ಹ 

ಬೆಂಗಳೂರು(ಡಿ.27):  ರಾಜ್ಯದಲ್ಲೂ ಒಮಿಕ್ರೋನ್‌(Omicron) ಭೀತಿ ಹಿನ್ನೆಲೆಯಲ್ಲಿ ಲಸಿಕೆಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಕೇಂದ್ರದ ಸೂಚನೆಯಂತೆ ಜ.3 ರಿಂದ 15ರಿಂದ 18 ವರ್ಷದ ಸುಮಾರು 43 ಲಕ್ಷ ಅರ್ಹ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಚಾಲನೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ.
ಭಾನುವಾರ ಕೊರೋನಾ(Coronavirus) ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಹಾಗೂ ಸಿದ್ಧತೆಗಳ ಕುರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ನಡುವೆ, ಜ.10 ರಿಂದ ಬೂಸ್ಟರ್‌ ಡೋಸ್‌ ಅಥವಾ ಮೂರನೇ ಡೋಸ್‌ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ. 60 ವರ್ಷ ಮೀರಿದ ದೀರ್ಘಕಾಲಿನ ಅನಾರೋಗ್ಯ ಸಮಸ್ಯೆಯುಳ್ಳವರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆಯಾಗಿ ಬೂಸ್ಟರ್‌ ಡೋಸ್‌ ಲಸಿಕೆ ನೀಡಲಾಗುವುದು. ಜ.10 ರಂದು ರಾಜ್ಯಾದ್ಯಂತ ಆಯಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸಚಿವರು ಹಾಗೂ ಶಾಸಕರು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

Corona-Omicron: ಕರ್ನಾಟಕದಲ್ಲಿ ಕೊರೋನಾ, ಒಮಿಕ್ರಾನ್ ಭೀತಿ,ಇಲ್ಲಿದೆ ಅಂಕಿ-ಸಂಖ್ಯೆ

ಮಕ್ಕಳ ಲಸಿಕೆಗೆ ಸಿಎಂ ಚಾಲನೆ:

ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು 15 ರಿಂದ 18 ವರ್ಷದ ಮಕ್ಕಳಿಗೆ(Children) ಲಸಿಕೆ ಘೋಷಿಸಿದ್ದಾರೆ. ದೇಶದೆಲ್ಲೆಡೆ ಚಾಲನೆ ಸಿಗುತ್ತಿರುವ ಜ.3 ರಂದು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರು, ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಡಾ. ಸುಧಾಕರ್‌ ಹೇಳಿದರು.
ರಾಜ್ಯದಲ್ಲಿ 15 ರಿಂದ 18 ವರ್ಷದ 43 ಲಕ್ಷ ಮಕ್ಕಳು ಇರುವ ಅಂದಾಜಿದೆ. ಇವರಿಗೆ ಯಾವ ಲಸಿಕೆ ನೀಡಬೇಕು, ಯಾವ ರೀತಿ ನೀಡಬೇಕು, ಡೋಸ್‌ ನಡುವಿನ ಅವಧಿ ಎಷ್ಟುಎಂಬಿತ್ಯಾದಿಗಳ ಕುರಿತು ಸದ್ಯದಲ್ಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಲಿದೆ. ಅದರಂತೆ ರಾಜ್ಯ ಸರ್ಕಾರ(Government of Karnataka) ಕ್ರಮ ಕೈಗೊಳ್ಳಲಿದೆ ಎಂದರು.

ಒಮಿಕ್ರೋನ್‌ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎರಡೂ ಡೋಸ್‌ ಲಸಿಕೆ ಪಡೆಯುವುದು ಅತ್ಯಗತ್ಯ. ಲಸಿಕೆ ಸೋಂಕಿನ ತೀವ್ರತೆ ಹಾಗೂ ಪ್ರಾಣ ಹಾನಿಯನ್ನು ತಪ್ಪಿಸುತ್ತದೆ. ರಾಜ್ಯದಲ್ಲಿ 18 ವರ್ಷದ ಮೇಲ್ಪಟ್ಟವರಿಗೆ ಶೇ.97 ರಷ್ಟುಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಶೇ.75 ರಷ್ಟುಮಂದಿಗೆ ಎರಡನೇ ಡೋಸ್‌ ನೀಡಲಾಗಿದೆ. ಆದರೆ, 45 ಲಕ್ಷದಷ್ಟುಮಂದಿ ಎರಡೂ ಡೋಸ್‌ ಪಡೆಯುವ ದಿನಾಂಕ ಮುಗಿದಿದ್ದರೂ ಲಸಿಕೆ ಪಡೆದಿಲ್ಲ. ಇಂತಹವರಿಗೆ ಕಡ್ಡಾಯವಾಗಿ ಲಸಿಕೆ ನೀಡಲು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.

Covid Vaccination : ಮಕ್ಕಳಿಗೆ ಕೋವ್ಯಾಕ್ಸಿನ್‌ ನೀಡಲು ಅಸ್ತು - ಶೀಘ್ರ ಲಭ್ಯ

ರಾಜ್ಯದ ಎಲ್ಲ 1.1 ಕೋಟಿ ಮಧ್ಯ ವಯಸ್ಕರಿಗೆ ಲಸಿಕೆ

ಕೊರೋನಾ ಲಸಿಕೆ ಪಡೆಯುವಲ್ಲಿ ಮಧ್ಯಮ ವಯಸ್ಕರೇ ಮುಂದಿದ್ದು, ಯುವಕರು ಮತ್ತು ಹಿರಿಯರು ಹಿಂದುಳಿದಿದ್ದಾರೆ! ರಾಜ್ಯದಲ್ಲಿ 45ರಿಂದ 59 ವರ್ಷದೊಳಗಿನ ಪ್ರತಿಯೊಬ್ಬರೂ ಮೊದಲ ಡೋಸ್‌ ಲಸಿಕೆ ಪಡೆದಿದ್ದು, ಶೇ.100ರಷ್ಟು ಗುರಿ ಸಾಧನೆಯಾಗಿದೆ. ಆದರೆ, 6 ಲಕ್ಷ ವಯೋವೃದ್ಧರು, 18-44 ವರ್ಷದೊಳಗಿನ 15 ಲಕ್ಷ ಯುವಕರು/ವಯಸ್ಕರು ಇಂದಿಗೂ ಲಸಿಕೆಯಿಂದ ದೂರ ಉಳಿದಿದ್ದಾರೆ.

ಲಸಿಕೆ (Vaccine)ಅಭಿಯಾನದ ಮೊದಲ ಡೋಸ್‌ನಲ್ಲಿ ಕರ್ನಾಟಕ(Karnataka) ಶೇ.96ರಷ್ಟು ಗುರಿ ಸಾಧನೆಯೊಂದಿಗೆ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಲಸಿಕೆ ವ್ಯಾಪ್ತಿಗೆ (18 ವರ್ಷ ಮೇಲ್ಪಟ್ಟವರು) 4.89 ಕೋಟಿ ಮಂದಿಯನ್ನು ಗುರುತಿಸಲಾಗಿತ್ತು. ಇದರಲ್ಲಿ 4.68 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದು, ಬಾಕಿ 21 ಲಕ್ಷ ಮಂದಿ ಈವರೆಗೂ ಒಂದೂ ಡೋಸ್‌ ಲಸಿಕೆ ಪಡೆದಿಲ್ಲ. ಈ ಪೈಕಿ 60 ವರ್ಷ ಮೇಲ್ಪಟ್ಟವರು 6 ಲಕ್ಷ, 18-44 ವರ್ಷದವರು 15 ಲಕ್ಷ ಮಂದಿ ಬಾಕಿ ಇದ್ದಾರೆ. ಅಲ್ಲದೆ, 10 ಲಕ್ಷ ವೃದ್ಧರು ಎರಡನೇ ಡೋಸ್‌ ಕಾಲಾವಧಿ ಪೂರ್ಣಗೊಂಡರೂ ಲಸಿಕೆ ಪಡೆದಿಲ್ಲ. ಇವರೆಲ್ಲರನ್ನು ಹುಡುಕುವುದು ಆರೋಗ್ಯ ಇಲಾಖೆಗೆ ಸವಾಲಾಗಿದ್ದು, ಮನೆ ಮನೆ ಲಸಿಕೆ ಅಭಿಯಾನ ಹಮ್ಮಿಕೊಂಡಿದೆ.