ಕಲಬುರಗಿಯಲ್ಲಿ ಸತತ 2ನೇ ದಿನವೂ 40 ಡಿಗ್ರಿ ತಾಪಮಾನ..!
ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು(ಏ.08): ರಾಜ್ಯದಲ್ಲಿ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ 40.4 ಕಲಬುರಗಿಯಲ್ಲಿ ಗುರುವಾರ ದಾಖಲಾಗಿದೆ. ಸತತ ಎರಡು ದಿನಗಳಿಂದ ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದ್ದು, ಕಳೆದ ಬುಧವಾರ 40.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಇನ್ನು ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಮುಂದಿನ ಎರಡು- ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಬೀದರ್‌ನ ಮಂತಾಳದಲ್ಲಿ ಅತಿ ಹೆಚ್ಚು 7 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಕಲಬುರಗಿಯ ಕಮಲಾಪುರ, ಯಡ್ರಾಮಿ, ಬಾಗಲಕೋಟೆಯ ಬಾದಾವಿಯಲ್ಲಿ ತಲಾ 5 ಸೆಂ.ಮೀ., ಚಿಕ್ಕಮಗಳೂರಿನ ಕಳಸ, ಕಲಬುರಗಿಯ ಆಳಂದದಲ್ಲಿ ತಲಾ 4, ರಾಯಚೂರಿನ ಗಬ್ಬೂರು, ವಿಜಯಪುರದ ಆಲಮಟ್ಟಿ, ವಿಜಯಪುರ ನಗರ, ಚಿಕ್ಕಮಗಳೂರಿನಲ್ಲಿ ತಲಾ 3, ಬೀದರ್‌ನ ಹುಮನಾಬಾದ್, ಕಲಬುರಗಿಯ ಖಜೂರಿಯಲ್ಲಿ ತಲಾ 2, ಧಾರವಾಡದ ಕುಂದಗೋಳ, ಬೆಳಗಾವಿಯ ಯಡವಾಡ, ಯಾದಗಿರಿಯ ಕೆಂಭಾವಿ, ಕಲಬುರಗಿಯ ಜೇವರ್ಗಿ, ಕಲಬುರಗಿ ನಗರ, ಬಾಗಲಕೋಟೆ, ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ. ಅದಲ್ಲದೆ ಹೊನ್ನಾವರ, ದಾವಣಗೆರೆ, ಗದಗ ಸೇರಿದಂತೆ ವಿವಿಧ ಕಡೆ ಸಾಧಾರಣ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಭಾರತ ಹೊರತುಪಡಿಸಿ ಉಳಿದೆಡೆ ಈ ವರ್ಷ ಭಾರೀ ಬಿಸಿಲು
ಇನ್ನು ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.