ರೊಚ್ಚಿಗೆದ್ದ ಕಾಡಾನೆಯೊಂದರ ದಾಳಿಗೆ ಸಿಕ್ಕ ಟಿಂಬರ್ ಕಾರ್ಮಿಕನೊಬ್ಬ ಸಾವಿಗೀಡಾಗಿದ್ದು, ರೋಷಾವೇಷದ ದಾಳಿ ನಡೆಸಿದ ಆನೆಯು ತನ್ನ ಒಂದು ದಂತವನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ತರೀಕೆರೆ ತಾಲ್ಲೂಕು ತಣಿಗೆಬೈಲ್ನ ವರ್ತೆಗುಂಡಿ ಗ್ರಾಮದಲ್ಲಿ ನಡೆದಿದೆ.

ವರದಿ : ಆಲ್ದೂರು ಕಿರಣ್ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.25): ರೊಚ್ಚಿಗೆದ್ದ ಕಾಡಾನೆಯೊಂದರ ದಾಳಿಗೆ ಸಿಕ್ಕ ಟಿಂಬರ್ ಕಾರ್ಮಿಕನೊಬ್ಬ ಸಾವಿಗೀಡಾಗಿದ್ದು, ರೋಷಾವೇಷದ ದಾಳಿ ನಡೆಸಿದ ಆನೆಯು ತನ್ನ ಒಂದು ದಂತವನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ತರೀಕೆರೆ ತಾಲ್ಲೂಕು ತಣಿಗೆಬೈಲ್ನ ವರ್ತೆಗುಂಡಿ ಗ್ರಾಮದಲ್ಲಿ ನಡೆದಿದೆ.

35 ವರ್ಷದ ಅಕ್ಬರ್ ಎಂಬಾತ ಆನೆ ದಾಳಿಗೆ ಬಲಿಯಾಗಿರುವ ದುರ್ದೈವಿ. ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟ ವಿಚಾರ ಗೊತ್ತಾಗಿ ಸೋಮವಾರ ಮಧ್ಯಾಹ್ನ ಜನರು ತೋಟದ ಸುತ್ತಲೂ ನಿಂತು ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಿದ್ದರು. ಈ ವೇಳೆ ಆನೆ ಏಕಾ ಏಕಿ ಜನರತ್ತ ದಾಳಿ ನಡೆಸಿದೆ. ಅಲ್ಲಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ ಅಕ್ಬರ್ ನೆಲಕ್ಕೆ ಬಿದ್ದ ಕೂಡಲೇ ಆತನನ್ನು ಆನೆ ಕಾಲಿನಿಂದ ಒಸಕಿ, ಕೋರೆಯಿಂದ ತಿವಿದಿದೆ. 

ದತ್ತಪೀಠ ಪರಿಸರದಲ್ಲಿ ಭಾರೀ ಬೆಂಕಿ; ಕುರುಚಲು , ಹಲ್ಲುಗಾವಲು ಸುಟ್ಟು ಕರಕಲು!

ದಂತವನ್ನೇ ಕಳೆದುಕೊಂಡಿರುವ ಕಾಡಾನೆ : 

ಆನೆಯ ಆರ್ಭಟ ಹೇಗಿತ್ತೆಂದರೆ, ತಿವಿತದ ರಭಸಕ್ಕೆ ಕೊಂಬು ತುಂಡಾಗಿ ನೆಲದಲ್ಲಿ ಹೂತುಕೊಂಡಿದ್ದು, ದೇಹದಿಂದ ಬೇರ್ಪಟ್ಟಿದೆ. ಕಾರ್ಮಿಕನ ದೇಹ ಛಿದ್ರ-ಛಿದ್ರವಾದ್ದು, ಕರುಳು ಹೊರಕ್ಕೆ ಬಂದಿದೆ. ಶವದ ಪಕ್ಕದಲ್ಲೇ ದಂತವೂ ಬಿದ್ದಿದೆ.ಮೃತ ಅಕ್ಬರ್ ಟಿಂಬರ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ವಾರದಲ್ಲಿ ಇಬ್ಬರು, ಎಂಟು ತಿಂಗಳಿನಲ್ಲಿ 8 ಮಂದಿ ಬಲಿ : 

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಎರಡು ಜೀವನಗಳು ಕಾಡಾನೆಗೆ ಬಲಿಯಾಗಿವೆ. ಮೂರು ದಿನದ ಹಿಂದೆ ಚಿಕ್ಕಮಗಳೂರು ಸಮೀಪದ ಕೆಆರ್ಪೇಟೆಯ ಕಂಚೇನಹಳ್ಳಿಯಲ್ಲಿ ತಮಿಳುನಾಡು ಮೂಲದ ಶ್ರೀಧರ ಎನ್ನುವ ತೋಟಕಾರ್ಮಿಕರೊಬ್ಬರು ಕಾಡಾನೆಗೆ ಬಲಿಯಾಗಿದ್ದರು. ಜಿಲ್ಲೆಯಲ್ಲಿ ಕಾಡಾನೆದಾಳಿಯಿಂದ ಅಪಾರ ಪ್ರಮಾಣದ ಬೆಳೆ ಜೊತೆಗೆ ಪ್ರಾಣ ಹಾನಿಯಾಗಿದ್ದು ಕಳೆದ ಎಂಟು ತಿಂಗಳಿನಲ್ಲಿ 8 ಮಂದಿ ಬಲಿಯಾಗಿದ್ದಾರೆ. 

ಚಿತ್ರದುರ್ಗ: ಬಯಲುಸೀಮೆಯ ಊಟಿ ಜೋಗಿಮಟ್ಟಿಗೀಗ ಕಾಡ್ಗಿಚ್ಚಿನ ಆತಂಕ!

ಪ್ರತಿಭಟನೆ-ಆಕ್ರೋಶ

ಆನೆದಾಳಿಯಿಂದ ರೊಚ್ಚಿಗೆದ್ದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು. ಶವ ಸಾಗಿಸಲು ಬಂದ ಆಂಬುಲೆನ್ಸ್ ವಾಹನವನ್ನು ಘಟನಾ ಸ್ಥಳಕ್ಕೆ ತೆರಳಲು ಬಿಡದೆ ಅಡ್ಡಹಾಕಿ ಸ್ಥಳಕ್ಕೆ ಮೇಲಾಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.ಈ ವೇಳೆ ಪೊಲೀಸರು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ಉಂಟಾದಾಗ ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.ಸ್ವಲ್ಪ ಸಮಯದ ನಂತರ ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಾಡಾನೆಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದರು.