12 ಕಿ.ಮೀ. ಕೆಂಪೇಗೌಡ ಪಾರಂಪರಿಕ ಕಾರಿಡಾರ್‌; ಡಿಪಿಆರ್ ಸಿದ್ಧಪಡಿಸಲು ಸೂಚನೆ

 ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಉದ್ದೇಶಿತ ‘ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್‌’ ರೂಪಿಸಲು ತಜ್ಞರ ಹಾಗೂ ನಾಗರಿಕರ ಸಲಹೆ ಪಡೆದು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ವಲಯ ಆಯುಕ್ತ ಜಯರಾಮ್‌ ರಾಯಪುರ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

12 km. Kempegowda Heritage Corridor preparation of DPR at bengaluru rav

ಬೆಂಗಳೂರು (ಜು.24) :  ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಉದ್ದೇಶಿತ ‘ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್‌’(Kempegowda Heritage Corridor) ರೂಪಿಸಲು ತಜ್ಞರ ಹಾಗೂ ನಾಗರಿಕರ ಸಲಹೆ ಪಡೆದು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ವಲಯ ಆಯುಕ್ತ ಜಯರಾಮ್‌ ರಾಯಪುರ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾರಿಡಾರ್‌ ರೂಪಿಸುವ ಸಂಬಂಧ ದಕ್ಷಿಣ ವಲಯ ವ್ಯಾಪ್ತಿಯ ಲಾಲ್‌ಬಾಗ್‌ ಗಡಿ ಗೋಪುರ ಹಾಗೂ ಕೆಂಪಾಂಬುಧಿ ಕೆರೆ(Lalbagh Border Tower and Kempambudhi Lake) ಗಡಿ ಗೋಪುರಗಳ ನಡುವಿನ 12 ಕಿ.ಮೀ. ಪ್ರದೇಶದಲ್ಲಿನ ಹಲವು ಪಾರಂಪರಿಕ ಸ್ಥಳಗಳಿಗೆ ಭಾನುವಾರ ಕಾಲ್ನಡಿಗೆಯಲ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

ಸ್ಥಳ ಪರಿಶೀಲನೆ ವೇಳೆ ಯಾವ ಮಾದರಿಯಲ್ಲಿ ಕಾರಿಡಾರ್‌ ರೂಪಿಸಬೇಕು, ಅದಕ್ಕೆ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ತಜ್ಞರು ಹಾಗೂ ನಗರದ ನಾಗರಿಕರಿಂದ ಸಲಹೆಗಳನ್ನು ಪಡೆದು ಬಳಿಕ ಡಿಪಿಆರ್‌ ತಯಾರಿಸಿ ನೀಡಬೇಕು. ವರದಿ ಸಿದ್ಧವಾದ ಬಳಿಕ ಕಾರಿಡಾರ್‌ ರೂಪಿಸುವ ಪ್ರಕ್ರಿಯೆ ಆರಂಭಿಸಲು ಕ್ರಮ ವಹಿಸುವುದಾಗಿ ಹೇಳಿದ್ದಾರೆ.

 

Brand Bangalore: ಮನೆ ಬಾಗಿಲಿಗೆ ಪಾಲಿಕೆ, ಬಿಡಿಎ ಆಸ್ತಿ ದಾಖಲೆ!

ಕಾಲ್ನಡಿಗೆಯಲ್ಲಿ ಲಾಲ್‌ಬಾಗ್‌ ಪಶ್ಚಿಮ ದ್ವಾರದಿಂದ ಸ್ಥಳ ಪರಿಶೀಲನಾ ಕಾರ್ಯ ಆರಂಭಿಸಿದ ವಲಯ ಆಯುಕ್ತರು, ಲಾಲ್‌ಬಾಗ್‌ ಆವರಣ, ಆವರಣದೊಳಗಿರುವ ಗಡಿ ಗೋಪುರ, ಸಿದ್ದಾಪುರ ಗೇಟ್‌, ಆಶೋಕ ಪಿಲ್ಲರ್‌ ವೃತ್ತ, ಕನಕನಪಾಳ್ಯ ಮುಖ್ಯ ರಸ್ತೆ, ಎಂ.ಎನ್‌ ಕೃಷ್ಣಾರಾವ್‌ ಪಾರ್ಕ್, ಗಾಂಧಿ ಬಜಾರ್‌, ದೊಡ್ಡ ಬಸವಣ್ಣ ದೇವಸ್ಥಾನ, ರಾಮಾಂಜನೇಯ ಗುಡ್ಡ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ, ಕೆಂಪಾಂಬುದಿ ಕೆರೆ ಬಳಿಯ ಗಡಿ ಗೋಪುರ, ರಾಮಕೃಷ್ಣ ಆಶ್ರಮ, ನ್ಯಾಷನಲ್‌ ಕಾಲೇಜು, ಮಕ್ಕಳಕೂಟ, ಟಿಪ್ಪು ಬೇಸಿಗೆ ಅರಮನೆ, ಬೆಂಗಳೂರು ಕೋಟೆ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಸಜ್ಜನ್‌ರಾವ್‌ ವೃತ್ತ, ವಿವಿ ಪುರಂ ಫುಡ್‌ ಸ್ಟ್ರೀಟ್‌ ಸ್ಥಳಗಳನ್ನು ವೀಕ್ಷಿಸಿದರು. ಈ ವೇಳೆ ಕಾರಿಡಾರ್‌ ರೂಪಿಸುವ ಮಾರ್ಗ, ತಂಗುದಾಣಗಳ ನಿರ್ಮಾಣ, ಪಾರಂಪರಿಕ ಸ್ಥಳಗಳ ಗುರುತು, ಪಾರ್ಕಿಂಗ್‌ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಈ ವೇಳೆ ವಲಯ ಮುಖ್ಯ ಅಭಿಯಂತರರಾದ ರಾಜೇಶ್‌ ಸೇರಿದಂತೆ ವಿವಿಧ ಅಧಿಕಾರಿಗಳು, ತಂತ್ರಜ್ಞರು, ಸ್ಥಳೀಯ ನಾಗರಿಕರು ಭಾಗಿಯಾಗಿದ್ದರು.

ಏನಿದು ಪಾರಂಪರಿಕ ಕಾರಿಡಾರ್‌

ಲಾಲ್‌ಬಾಗ್‌ ಗೋಪುರ ಹಾಗೂ ಕೆಂಪಾಂಬುಧಿ ಕೆರೆ ಗೋಪುರಗಳ ನಡುವಿನ 12 ಕಿ.ಮೀ. ಪ್ರದೇಶವನ್ನು ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್‌ ಎಂದು ಗುರುತಿಸಲಾಗಿದ್ದು, ಈ ಮಾರ್ಗದಲ್ಲಿ ಬರುವ ರಸ್ತೆಗಳು, ಪಾದಚಾರಿ ಮಾರ್ಗಗಳು, ಬೀದಿದೀಪದ ಕಂಬಗಳು ಸೇರಿದಂತೆ ಸಾರ್ವಜನಿಕ ಸೌಲಭ್ಯಗಳನ್ನು ಏಕರೂಪದಲ್ಲಿರಿಸಲು ನಿರ್ಧರಿಸಲಾಗಿದೆ. ರಸ್ತೆ, ಪಾದಚಾರಿ ಮಾರ್ಗ ಹಾಳುಮಾಡದೆ, 1.5 ಎಂಎಂ ಪಾಲಿಥೀನ್‌ ಬಣ್ಣ ಬಳಿದು ಕಾರಿಡಾರ್‌ ಗುರುತಿಸಲಾಗುತ್ತದೆ. ಮಾರ್ಗದುದ್ದಕ್ಕೂ 500 ಮೀಟರ್‌ಗೆ ಒಂದರಂತೆ 24 ಸ್ಥಳಗಳಲ್ಲಿ ಮುಕ್ತ ತಂಗುದಾಣ, ಬೀದಿದೀಪ, ಪೀಠೋಪಕರಣ, ಸೂಚನಾಫಲಕ, ಕಲಾಕೃತಿಗಳನ್ನು ಸ್ಥಾಪಿಸಲಾಗುತ್ತದೆ. ಸ್ಥಳ ಪರಿಚಯದ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.

Bengaluru: ಮತ್ತೆ ರಾರಾಜಿಸಲಿವೆ ಜಾಹೀರಾತು ಫಲಕಗಳು: ಬ್ರ್ಯಾಂಡ್‌ ಬೆಂಗಳೂರಿಗೆ ಸಲಹೆ

24 ವಿಶೇಷ ತಂಗುದಾಣ ಹಾಗೂ ಕಾರಿಡಾರ್‌ನ ಮುಖ್ಯ ಪಾರಂಪರಿಕ ತಾಣಗಳಲ್ಲಿ ವಿಶೇಷ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಬೆಳಕು-ಧ್ವನಿ ಸಹಿತವಾದ ರೂಪಕ ಹಾಗೂ ಧ್ವನಿ-ಬೆಳಕಿನ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಪಾರಂಪರಿಕ ಶೈಲಿಯಲ್ಲೇ ಇದನ್ನು ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಕಾರಿಡಾರ್‌ ವ್ಯಾಪ್ತಿಯಲ್ಲಿ ಕೃತಕ ಬುದ್ಧಿಮತ್ತೆಯ ಸೆಲ್‌ಫೋನ್‌ ಹಾಗೂ ಆ್ಯಪ್‌ ಆಧಾರಿತ ಗೈಡ್‌ ಸೃಷ್ಟಿಸಲಾಗುತ್ತದೆ ಎಂದು ವಲಯ ಆಯುಕ್ತ ಜಯರಾಂ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios