Brand Bangalore: ಮನೆ ಬಾಗಿಲಿಗೆ ಪಾಲಿಕೆ, ಬಿಡಿಎ ಆಸ್ತಿ ದಾಖಲೆ!
ಬಿಬಿಎಂಪಿ, ಬಿಡಿಎ ವ್ಯಾಪ್ತಿಯ ಆಸ್ತಿ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ಮೂಲಕ ಬೆಂಗಳೂರು ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜು.16) : ಬಿಬಿಎಂಪಿ, ಬಿಡಿಎ ವ್ಯಾಪ್ತಿಯ ಆಸ್ತಿ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ಮೂಲಕ ಬೆಂಗಳೂರು ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಪ್ರಯುಕ್ತ ಬೆಂಗಳೂರು ನಿವಾಸಗಳ ಕ್ಷೇಮಾಭಿವೃದ್ಧಿ ಮತ್ತು ನಾಗರಿಕ ಸಂಘಗಳ ಪ್ರತಿನಿಧಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಜನತೆಯ ಸಮಸ್ಯೆಗಳನ್ನು ಆಲಿಸಿ ಪಟ್ಟಿಮಾಡಿಕೊಂಡರು. ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ‘ಖಾತೆ’ ಎಂದು ಕರೆಯುವ ಬದಲು ಬೇರೆ ಹೆಸರಿಡಲಾಗುವುದು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಪಹಣಿಗಳನ್ನು ನೀಡುವ ‘ಭೂಮಿ’ ವ್ಯವಸ್ಥೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳನ್ನು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಸಮಗ್ರ ಬೆಂಗಳೂರು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ 100 ದಿನದಲ್ಲಿ ಸಮರ್ಪಕವಾದ ನಕ್ಷೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
Bengaluru: ಮತ್ತೆ ರಾರಾಜಿಸಲಿವೆ ಜಾಹೀರಾತು ಫಲಕಗಳು: ಬ್ರ್ಯಾಂಡ್ ಬೆಂಗಳೂರಿಗೆ ಸಲಹೆ
ಆಸ್ತಿ ತೆರಿಗೆ ಕಟ್ಟದವರ ಮ್ಯಾಪಿಂಗ್:
ಸಭೆಯಲ್ಲಿ ಆಸ್ತಿ ತೆರಿಗೆಯ ವಿಚಾರವಾಗಿಯೂ ಸಹ ಚರ್ಚೆ ನಡೆಸಲಾಯಿತು. ಕಾನೂನು ರೀತಿಯಲ್ಲಿ ತೆರಿಗೆ ಪಾವತಿಸುವವರಿಗೆ ಸಮಸ್ಯೆಯಾಗುತ್ತಿದ್ದು, ತೆರಿಗೆ ಕಟ್ಟದವರಿಗೆ ರಕ್ಷಣೆ ಸಿಗುತ್ತಿದೆ ಎಂದು ನಾಗರಿಕರು ತಮ್ಮ ಅಳಲನ್ನು ತೋಡಿಕೊಂಡರು. ಮನೆ ಬಾಗಿಲಿಗೆ ಆಯಾ ಆಸ್ತಿ ದಾಖಲೆಗಳನ್ನು ತಲುಪಿಸಿದರೆ ಯಾರ ಬಳಿ ಎಷ್ಟುಆಸ್ತಿ ಇದೆ ಎಂಬ ಸ್ಪಷ್ಟಚಿತ್ರಣ ಲಭ್ಯವಾಗಲಿದೆ. ಆಗ ಯಾರು ಸಹ ಆಸ್ತಿ ತೆರಿಗೆ ಪಾವತಿಸದೆ ತಪ್ಪಿಸಿಕೊಳ್ಳಲಾಗುವುದಿಲ್ಲ. ಆಸ್ತಿ ತೆರಿಗೆ ವಿಚಾರದಲ್ಲಿ ದೊಡ್ಡವರು, ಸಣ್ಣವರು ಎಂಬ ಬೇಧ ಮಾಡುವುದಿಲ್ಲ. ಯಾರು ತೆರಿಗೆ ಪಾವತಿಸಿಲ್ಲ ಎಂಬುದನ್ನು ಮ್ಯಾಪಿಂಗ್ ಮಾಡುತ್ತೇವೆ ಎಂದರು.
ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನು ಇದ್ದು, ಪಾದಚಾರಿ ಮಾರ್ಗದ ಮೇಲೆ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪಾದಚಾರಿಗಳಿಗೂ ಅನುಕೂಲವಾಗುವಂತೆ ನೀತಿಯನ್ನು ರೂಪಿಸಲಾಗುವುದು. ಇನ್ನು, ತ್ಯಾಜ್ಯ ವಿಲೇವಾರಿ ವಿಚಾರದ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ. ಎಲ್ಲೆಂದರಲ್ಲಿ ರಸ್ತೆಗಳ ಪಕ್ಕದಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ಈ ವಿಚಾರವಾಗಿ ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಪ್ರಶ್ನಿಸಲಾಗಿದೆ. ಜನರು ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಎಲ್ಲೆಲ್ಲಿ ಹೆಚ್ಚಾಗಿ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಎಂಬುದನ್ನು ಗುರುತಿಸಿ ಅಲ್ಲಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುವುದು. ಬೆಂಗಳೂರಲ್ಲಿ ಸ್ವಚ್ಛತೆ ಕಾಪಾಡುವ ವಿಚಾರದಲ್ಲಿ ಈ ತಿಂಗಳಲ್ಲಿ 2-3 ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಆಧ್ಯಕ್ಷ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.
ಹೊಸ ಜಾಹೀರಾತು ನೀತಿ ರೂಪಿಸಿ ಆದಾಯ ಸಂಗ್ರಹ
ಬೆಂಗಳೂರಲ್ಲಿ ಜಾಹೀರಾತು ವಿಚಾರವಾಗಿ ನೂತನ ನೀತಿಯೊಂದನ್ನು ರಚಿಸಲಾಗುವುದು. ಆ ಮೂಲಕ ಹೆಚ್ಚಿನ ಆದಾಯ ಬರುವಂತೆ ಮಾಡಲಾಗುವುದು. ನಾವು ನಮ್ಮ ಸಂಪನ್ಮೂಲ ವೃದ್ಧಿಸಿಕೊಳ್ಳದಿದ್ದರೆ ಬೆಂಗಳೂರು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಕೈಗೆತ್ತಿಕೊಳ್ಳಲು ಮುಂದಾಗಿರುವ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳಬೇಕು. ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಸುಮಾರು 6-7 ವಿಭಾಗಗಳಲ್ಲಿ ಸಾರ್ವಜನಿಕರಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಈ ಸಲಹೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ರಸ್ತೆ ಗುಂಡಿ ವಿಚಾರವಾಗಿ ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳ ಪ್ರತ್ಯೇಕ ಸಭೆ ಮಾಡಲಾಗುವುದು. ಈ ವಿಚಾರವಾಗಿ ಗೃಹಸಚಿವರ ಜತೆ ಮಾತುಕತೆ ನಡೆಸಲಾಗಿದ್ದು, ಅಧಿವೇಶನ ಬಳಿಕ ಸಭೆ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
‘ಮಕ್ಕಳ ಬೆಂಗಳೂರು ಕನಸನ್ನು ತಿಳಿಯುವೆ’
ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಮಕ್ಕಳ ಅಭಿಪ್ರಾಯವನ್ನು ಪಡೆಯುವ ಸಲಹೆಗಳು ಬಂದಿದ್ದು, ಅದನ್ನು ಸರ್ಕಾರ ಪರಿಗಣಿಸಲಿದೆ. ಈ ವಿಚಾರವಾಗಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಜತೆ ಸಭೆ ಆಯೋಜಿಸುವಂತೆ ಸಂಸ್ಥೆಯೊಂದಕ್ಕೆ ಸೂಚನೆ ನೀಡಲಾಗಿದೆ. ಬೆಂಗಳೂರು ವಿಚಾರದಲ್ಲಿ ಮಕ್ಕಳು ಯಾವ ರೀತಿ ಕನಸು ಕಾಣುತ್ತಿದ್ದಾರೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ನುಡಿದರು.
Karnataka Budget 2023: ಬ್ರ್ಯಾಂಡ್ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ
ಚಿತ್ರ: ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಪ್ರಯುಕ್ತ ನಡೆದ ಸಂಘಗಳ ಪ್ರತಿನಿಧಿಗಳ ಜತೆ ವಿಡಿಯೋ ಸಂವಾದದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು.