ಕರೆ ಮಾಡಿದರೆ ಸ್ವೀಕರಿಸದ ಸಿಬ್ಬಂದಿ, ಜಿವಿಕೆ ಸಂಸ್ಥೆ ವೇತನ ನೀಡದ ಹಿನ್ನೆಲೆ ಸಿಬ್ಬಂದಿ ಗೈರು, 715 ಆ್ಯಂಬುಲೆನ್ಸ್‌ಗಳ ಪೈಕಿ 350 ಆ್ಯಂಬುಲೆನ್ಸ್‌ಗಳು ಬಳಕೆ ಮಾಡದ ಸ್ಥಿತಿಗೆ

ಬೆಂಗಳೂರು(ಅ.12):  ಆರೋಗ್ಯದ ತುರ್ತು ಸಂದರ್ಭದಲ್ಲಿ ಜನರನ್ನು ಆಸ್ಪತ್ರೆಗೆ ಸಾಗಿಸಲು ಇರುವ ಆ್ಯಂಬುಲೆನ್ಸ್‌ ಸೇವೆ 108 ಮತ್ತೆ ಕೈ ಕೊಟ್ಟಿದೆ. ಈ ಸೇವೆಗಾಗಿ ಸಾರ್ವಜನಿಕರು ಕರೆ ಮಾಡಿದರೆ ಸ್ಪಂದನೆ ಸಿಗುತ್ತಿಲ್ಲ. ಇದರಿಂದಾಗಿ ರೋಗಿಗಳ ಕುಟುಂಬಸ್ಥರು ಪರದಾಡುವಂತಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಳುತ್ತಿರುವವರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ಗಾಗಿ 108ಕ್ಕೆ ಫೋನ್‌ ಮಾಡಿದರೆ ಅಲ್ಲಿ ಕಾಲ್‌ ಸ್ವೀಕರಿಸುತ್ತಿಲ್ಲ. ಸೋಮವಾರ ಸಂಜೆಯಿಂದಲೂ ಕರೆ ಸ್ವೀಕರಿಸದಿರುವ ಸಮಸ್ಯೆಯಿದ್ದು ಮಂಗಳವಾರ ತಡ ರಾತ್ರಿಯವರೆಗೂ ಪರಿಸ್ಥಿತಿ ಸುಧಾರಿಸಿಲ್ಲ.

ರಾಜ್ಯದಲ್ಲಿ ಆ್ಯಂಬುಲೆನ್ಸ್‌ ಸೇವೆಯನ್ನು ಜಿವಿಕೆ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದು ತನ್ನ ಕಾಲ್‌ ಸೆಂಟರ್‌ ಸಿಬ್ಬಂದಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಅವರು ಕೆಲಸಕ್ಕೆ ಹಾಜರಾಗಿಲ್ಲದಿರುವುದರಿಂದ ಕರೆ ಸ್ವೀಕರಿಸಲು ಸಿಬ್ಬಂದಿ ಇಲ್ಲದಿರುವುದು ಸಮಸ್ಯೆಗೆ ಕಾರಣ ಎನ್ನಲಾಗಿದೆ. ಇದರಿಂದಾಗಿ ರಾಜ್ಯದ ತುರ್ತು ಆರೋಗ್ಯ ವ್ಯವಸ್ಥೆ ಹದಗೆಡುವಂತಾಗಿದೆ.

Karnataka: ಹೊಸ ಮಾದರಿಯಲ್ಲಿ ಸಿಗಲಿದೆ 108 ಆ್ಯಂಬುಲೆನ್ಸ್‌ ಸೇವೆ

ಪ್ರತಿದಿನ 108ಕ್ಕೆ ಸುಮಾರು 20 ಸಾವಿರ ಕರೆಗಳು ಬರುತ್ತಿದ್ದವು. ಆದರೆ ಈಗ ಎಷ್ಟೇ ಕರೆ ಮಾಡಿದರೂ ಕಾಲ್‌ ಸೆಂಟರ್‌ನಿಂದ ಪ್ರತಿಕ್ರಿಯೆ ಬರುತ್ತಿಲ್ಲವಾದರಿಂದ ಜನಸಾಮಾನ್ಯರು ತುರ್ತು ಆರೋಗ್ಯ ಸ್ಥಿತಿಯನ್ನು ನಿಭಾಯಿಸಲು ಒದ್ದಾಡುತ್ತಿದ್ದಾರೆ. ಇದರಿಂದಾಗಿ ಅಪಘಾತ, ಹೃದಯಾಘಾತ ಮುಂತಾದ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲೇ ಬೇಕಾದ ಸುವರ್ಣ ಘಳಿಗೆಯಲ್ಲಿ ಚಿಕಿತ್ಸೆ ಸಿಗದೆ ರೋಗಿಗಳ ಸ್ಥಿತಿ ವಿಷಮಿಸುತ್ತಿದೆ.

ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಎನ್‌. ಎಚ್‌ ಪ್ರಕಾರ, ಕಳೆದ ಒಂದೂವರೆ ತಿಂಗಳಿನಿಂದ ಆ್ಯಂಬುಲೆನ್ಸ್‌ ಸಮಸ್ಯೆ ಇದೆ. ವಾಡಿಕೆಗಿಂತ ಶೇ.40ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆ್ಯಂಬುಲೆನ್ಸ್‌ ಸೇವೆ ಸದ್ಯ ಬಳಕೆ ಆಗುತ್ತಿದೆ. ಅಂದರೆ ರೋಗಿಗಳು 108ಕ್ಕೆ ಕರೆ ಮಾಡಿದರೂ ಅಲ್ಲಿ ಕರೆ ಸ್ವೀಕರಿಸಿ ನಮ್ಮನ್ನು ಸಂಪರ್ಕಿಸುವುದೇ ವಿರಳವಾಗಿದೆ. ಕಳೆದ ಕೆಲ ದಿನಗಳಿಂದ ಹಿರಿಯ ಅಧಿಕಾರಿಗಳಿಂದ ಕರೆ ಬಂದರೆ ನಾವು ಸೇವೆ ನೀಡುತ್ತಿದ್ದೇವೆ. ಆದರೆ ಜನಸಾಮಾನ್ಯರಲ್ಲಿ ನಮ್ಮ ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಇರುವುದಿಲ್ಲ. ಅವರ ಮನಸ್ಸಲ್ಲಿ ಆ್ಯಂಬುಲೆನ್ಸ್‌ ಎಂದರೆ 108 ಎಂಬ ನಂಬರ್‌ ಅಚ್ಚೊತ್ತಿದೆ ಎಂದು ಹೇಳುತ್ತಾರೆ.

ಸಾರಿಗೆ ನಿಗಮದಲ್ಲಿ ಆಯುಧ ಪೂಜೆ ಸಂಭ್ರಮವೇ ಇಲ್ಲ: ಕಾರಣ?

ಒಂದು ವೇಳೆ 108 ಅನ್ನು ಸರ್ಕಾರಕ್ಕೆ ತಕ್ಷಣ ಸರಿಪಡಿಸಲು ಸಾಧ್ಯವಿಲ್ಲ ಎಂದರೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆ್ಯಂಬುಲೆನ್ಸ್‌ಗಾಗಿ ಸಂಪರ್ಕಿಸಬೇಕಾದವರ ನಂಬರ್‌ಗೆ ವ್ಯಾಪಕ ಪ್ರಚಾರ ನೀಡಲಿ. ಜಿಲ್ಲಾ ಮಟ್ಟದಲ್ಲಿ ಆ್ಯಂಬುಲೆನ್ಸ್‌ ಸೇವೆಯ ಉಸ್ತುವಾರಿ ನಿರ್ವಹಿಸಲು ಜಿಲ್ಲಾ ವ್ಯವಸ್ಥಾಪಕರಿದ್ದು ಅವರ ನಂಬರ್‌ ಆದರೂ ಜನರಿಗೆ ನೀಡಬೇಕು ಎಂಬ ಸಲಹೆಯನ್ನು ಕೆಲ ಆ್ಯಂಬುಲೆನ್ಸ್‌ ಚಾಲಕರು ನೀಡುತ್ತಾರೆ.

ಆ್ಯಂಬುಲೆನ್ಸ್‌ಗಳ ಕೊರತೆ:

ಈ ಮಧ್ಯೆ ರಾಜ್ಯದಲ್ಲಿ ಆ್ಯಂಬುಲೆನ್ಸ್‌ಗಳ ಭಾರಿ ಕೊರತೆಯಿದೆ ಎಂದು ಪರಮಶಿವ ಎನ್‌.ಎಚ್‌. ಹೇಳುತ್ತಾರೆ. ರಾಜ್ಯದಲ್ಲಿ ಒಟ್ಟು 715 ಆ್ಯಂಬುಲೆನ್ಸ್‌ಗಳಿವೆ. ಈ ಪೈಕಿ ಕನಿಷ್ಠ 300ಕ್ಕಿಂತ ಹೆಚ್ಚು ಆ್ಯಂಬುಲೆನ್ಸ್‌ಗಳು ಹಾಳಾಗಿವೆ. ಇದರಲ್ಲಿ 50ಕ್ಕಿಂತ ಹೆಚ್ಚು ಆ್ಯಂಬುಲೆನ್ಸ್‌ಗಳ ಟಯರ್‌ ಹಾಳಾಗಿದೆ. ಈ ಆ್ಯಂಬುಲೆನ್ಸ್‌ಗಳ ರಿಪೇರಿಗೆ ಜಿವಿಕೆ ಹಣ ನೀಡಿಲ್ಲ ಎಂದು ಆರೋಪಿಸುತ್ತಾರೆ.

ಆ್ಯಂಬುಲೆನ್ಸ್‌ ಅವ್ಯವಸ್ಥೆಯ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌ ಪ್ರತಿಕ್ರಿಯಿಸಿ, ಜಿವಿಕೆಯ ಜೊತೆ ಇನ್ನೂ ಒಂದೂವರೆ ತಿಂಗಳ ಕಾಲ ನಮ್ಮ ಒಪ್ಪಂದವಿದೆ. ಈ ಹಂತದಲ್ಲಿ ಒಪ್ಪಂದ ರದ್ದುಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಆ್ಯಂಬುಲೆನ್ಸ್‌ ಸೇವೆಯನ್ನು ಉಳಿದಿರುವ ಅವಧಿಗೆ ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿ ಇತ್ತಿಚೆಗಷ್ಟೇ 25 ಕೋಟಿ ರು.ಗಳನ್ನು ಜಿವಿಕೆಗೆ ಬಿಡುಗಡೆ ಮಾಡಿದ್ದೇವೆ. ಸೇವೆ ಹದಗೆಟ್ಟಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ.