*  ಆಧುನಿಕ ತಂತ್ರಜ್ಞಾನದೊಂದಿಗೆ ಸೇವೆ ಮೇಲ್ದರ್ಜೆಗೆ *  ಸರ್ಕಾರದಿಂದ ಹೊಸದಾಗಿ 380 ಆಂಬ್ಯುಲೆನ್ಸ್‌ ಖರೀದಿ*  ಒಟ್ಟು ಆಂಬ್ಯುಲೆನ್ಸ್‌ ಸಂಖ್ಯೆ ಈಗಿನ 710 ರಿಂದ 750ಕ್ಕೆ ಹೆಚ್ಚಳ 

ಬೆಂಗಳೂರು(ಫೆ.20): ರಾಜ್ಯದಲ್ಲಿ(Karnataka) ತುರ್ತು ಆರೋಗ್ಯ ಸೇವೆಯನ್ನು ಬಲಿಷ್ಠಗೊಳಿಸಲು ಆರೋಗ್ಯ ಕವಚ - 108 ರ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೊಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌(Dr K Sudhakar) ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆಧುನಿಕ ಕಾಲದ ಆರೋಗ್ಯ ಸೇವೆಯ(Health Service) ಬೇಡಿಕೆಗಳಿಗೆ ಅನುಗುಣವಾಗಿ ಆಂಬ್ಯುಲೆನ್ಸ್‌(Ambulance) ಸೇವೆ ಉನ್ನತೀಕರಿಸುವ ಅಗತ್ಯ ಕಂಡು ಬಂದಿದೆ. ಹೀಗಾಗಿ ಹೊಸ ಮಾದರಿಯ ಆಂಬ್ಯುಲೆನ್ಸ್‌ ಸೇವೆ ನೀಡಲು ರಾಜ್ಯ ಸರ್ಕಾರ(Government of Karnataka) ನಿರ್ಧರಿಸಿದೆ. ಆಧುನಿಕ ತಂತ್ರಜ್ಞಾನಗಳ(Modern Technology) ಬಳಕೆ, ಹೊಸ ಸುಧಾರಣಾ ಕ್ರಮಗಳನ್ನು ಆಂಬ್ಯುಲೆನ್ಸ್‌ ಸೇವೆಯಲ್ಲಿ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

Shivamogga Infrastructure Issue: : 108 ಆ್ಯಂಬುಲೆನ್ಸ್‌ ಕೊರತೆ : ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?

ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಒಂದು ಬೇಸಿಕ್‌ ಲೈಫ್‌ ಸಪೋರ್ಟ್‌ ಅಂಬ್ಯುಲೆನ್ಸ್‌ (BLA) ಮತ್ತು ಪ್ರತಿ 5 ಲಕ್ಷ ಜನಸಂಖ್ಯೆಗೆ ಒಂದು ಅಡ್ವಾನ್ಸ್‌ಡ ಲೈಫ್‌ ಸರ್ಪೋರ್ಟ್‌ ಆಂಬ್ಯುಲೆನ್ಸ್‌ (ALS) ಇರಬೇಕು. ಒಂದು ಆಂಬ್ಯುಲೆನ್ಸ್‌ 24 ಗಂಟೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಪ್ರಕರಣ ನಿರ್ವಹಣೆ ಮಾಡಿದರೆ ಮತ್ತು 120 ಕಿ.ಮಿ ಗಿಂತ ಹೆಚ್ಚು ದೂರ ಕ್ರಮಿಸಿದರೆ, ಅಂತಹ ಕಡೆ ಮತ್ತೊಂದು ಆಂಬ್ಯುಲೆನ್ಸ್‌ ಒದಗಿಸಬೇಕಾಗುತ್ತದೆ. ಈ ಮಾರ್ಗಸೂಚಿಯ ಅನ್ವಯ ಪ್ರಸ್ತುತ ಇರುವ ಆಂಬ್ಯುಲೆನ್ಸ್‌ ಸಂಖ್ಯೆಯನ್ನು 710 ರಿಂದ 750ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಪೈಕಿ ಶೇ. 40 ಎ.ಎಲ್‌ಎಸ್‌ ಮತ್ತು ಶೇ. 60 ಬಿ.ಎಲ್‌ಎಸ್‌. ಆಗಿರಲಿವೆ ಎಂದು ಸಚಿವರು ವಿವರಿಸಿದರು.
ಸರ್ಕಾರ ಹೊಸದಾಗಿ 380 ಆಂಬ್ಯುಲೆನ್ಸ್‌ ಗಳನ್ನು ಖರೀದಿ ಮಾಡಲಿದೆ. ಈ ಪೈಕಿ, 340 ಆಂಬ್ಯುಲೆನ್ಸ್‌ ಗಳು ಹಳೆಯ ಆಂಬ್ಯುಲೆನ್ಸ್‌ಗಳ ಬದಲಿಯಾಗಿ ಬರಲಿವೆ. ಉಳಿದ 40 ಹೊಸ ಆಂಬ್ಯುಲೆನ್ಸ್‌ಗಳಾಗಿರುತ್ತವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕರೆ ಕೇಂದ್ರದ ಉನ್ನತೀಕರಣ:

ಸಾರ್ವಜನಿಕರು ಹಾಗೂ ಆಂಬ್ಯುಲೆನ್ಸ್‌ ಸಿಬ್ಬಂದಿ ನಡುವೆ ಸೇತುವೆಯಂತೆ ಕೆಲಸ ಮಾಡುವ ಕರೆ ಕೇಂದ್ರ ಅಥವಾ ಕಮಾಂಡ್‌ ಸೆಂಟರ್‌ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕಾಲ್‌ ಸೆಂಟರ್‌ನ ಸೀಟುಗಳ ಸಿಬ್ಬಂದಿ ಸಂಖ್ಯೆಯನ್ನು 54 ರಿಂದ 75 ಕ್ಕೆ ಏರಿಸಲಾಗುತ್ತದೆ. ಈ ಕಮಾಂಡ್‌ ಸೆಂಟರ್‌, ಆಂಬ್ಯುಲೆನ್ಸ್‌ನ ಜಿಪಿಎಸ್‌ ಟ್ರ್ಯಾಕಿಂಗ್‌, ಸಿಬ್ಬಂದಿಯ ಬಯೋಮೆಟ್ರಿಕ್‌ ಹಾಜರಾತಿ, ಆಂಬ್ಯುಲೆನ್ಸ್‌ ಸೇವೆಯ ಲೈವ್‌ ಸ್ಟ್ರೀಮಿಂಗ್‌, ಆನ್‌ ಲೈನ್‌ ಮಾನವ ಸಂಪನ್ಮೂಲ ನಿರ್ವಹಣೆ, ರೋಗಿಗಳ ಆರೈಕೆಯ ಎಲೆಕ್ಟ್ರಾನಿಕ್‌ ದಾಖಲೆಗಳ ನಿರ್ವಹಣೆ, ಅಹವಾಲು ಸ್ವೀಕಾರ ಮೊದಲಾದ ಹೊಸ ಸೌಲಭ್ಯ ಹೊಂದಲಿದೆ ಎಂದು ಡಾ. ಸುಧಾಕರ್‌ ಹೇಳಿದ್ದಾರೆ.

ಕೊಪ್ಪಳ: ಆಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ..!

ಹೊಸ ವ್ಯವಸ್ಥೆ:

ಈ ಹಿಂದೆ ಆಂಬ್ಯುಲೆನ್ಸ್‌ ನಿರ್ವಹಣೆ ಮಾಡುವ ಏಜೆನ್ಸಿಯನ್ನು ದರದ ಆಧಾರದಲ್ಲಿ ಮಾತ್ರ ಪರಿಗಣಿಸಲಾಗುತ್ತಿತ್ತು. ಈಗ ದರ ಹಾಗೂ ಗುಣಮಟ್ಟದ ಕಾರ್ಯನಿರ್ವಹಣೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗಿದೆ. ಯಾವುದೇ ಸರ್ಕಾರಕ್ಕೆ 6 ವರ್ಷಗಳ ಕಾಲ 100 ಸೀಟುಗಳ ಕಾಲ್‌ಸೆಂಟರ್‌ ಸೇವೆ ಒದಗಿಸಿರುವುದು, ಯಾವುದೇ ಸರ್ಕಾರಕ್ಕೆ 500 ಆಂಬ್ಯುಲೆನ್ಸ್‌ಗಳ ಸೇವೆ ನೀಡಿರುವುದು ಮುಂತಾದ ಹಲವು ಷರತ್ತುಗಳನ್ನು ಹೊಸ ಟೆಂಡರ್‌ನಲ್ಲಿ ವಿಧಿಸಲಾಗುತ್ತಿದೆ. ಅಲ್ಲದೆ, ಸೇವೆ ನೀಡುವ ಏಜೆನ್ಸಿಯವರು, ತಂತ್ರಜ್ಞಾನವನ್ನು ಬಳಸಿ ಆಸ್ಪತ್ರೆಗಳನ್ನು ಮ್ಯಾಪ್‌ ಮಾಡಿರಬೇಕು. ಆಂಬ್ಯುಲೆನ್ಸ್‌ ಸೇವೆ ನೀಡುವಾಗ ಸಮೀಪದ ಆಸ್ಪತ್ರೆಯು ಸ್ವಯಂಚಾಲಿತವಾಗಿ ಆಯ್ಕೆಯಾಗುವಂತಹ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ಇದರಿಂದ ಸೇವೆಯ ಗುಣಮಟ್ಟದಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ಸಚಿವರು ವಿವರಿಸಿದ್ದಾರೆ.

ಏನೇನು ಸೇವೆ?

ಆಂಬ್ಯುಲೆನ್ಸ್‌ನ ಜಿಪಿಎಸ್‌ ಟ್ರ್ಯಾಕಿಂಗ್‌
ಸಿಬ್ಬಂದಿಯ ಬಯೋಮೆಟ್ರಿಕ್‌ ಹಾಜರಾತಿ
ಆಂಬ್ಯುಲೆನ್ಸ್‌ ಸೇವೆಯ ಲೈವ್‌ ಸ್ಟ್ರೀಮಿಂಗ್‌
ಆನ್‌ ಲೈನ್‌ ಮಾನವ ಸಂಪನ್ಮೂಲ ನಿರ್ವಹಣೆ
ರೋಗಿ ಆರೈಕೆಯ ಎಲೆಕ್ಟ್ರಾನಿಕ್‌ ದಾಖಲೆ ನಿರ್ವಹಣೆ
ಕಾಲ್‌ಸೆಂಟರ್‌ ಸಿಬ್ಬಂದಿ ಸಂಖ್ಯೆ ಹೆಚ್ಚಳ