Asianet Suvarna News Asianet Suvarna News

ಮದ್ಯದ ಅಮಲಿಗೆ ಮತ್ತೆ 10 ಮಂದಿ ಬಲಿ..!

ಲಾಕ್‌ಡೌನ್‌ ಸಡಿಲಿಸಿ ಒಂದೂವರೆ ತಿಂಗಳ ಬಳಿಕ ಮದ್ಯದಂಗಡಿಗಳು ತೆರೆಯುತ್ತಿದ್ದಂತೆ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗುರುವಾರ ಒಂದೇ ದಿನ ಮೂರು ಕೊಲೆ, ವಿಪರೀತ ಮದ್ಯಸೇವನೆಗೆ 5 ಸಾವು ಸಂಭವಿಸಿದೆ.

 

10 died in separate incident due to liquor drinking in Bangalore
Author
Bangalore, First Published May 8, 2020, 7:33 AM IST

ಬೆಂಗಳೂರು(ಮೇ.08): ನಗರದ ರೈಲ್ವೆ ನಿಲ್ದಾಣದಲ್ಲಿ ಪಾನಮತ್ತ ಕೂಲಿ ಕೆಲಸಗಾರರ ನಡುವೆ ಸಂಭವಿಸಿದ ಜಗಳದಲ್ಲಿ ಓರ್ವ ಸಾವನ್ನಪ್ಪಿ, ಮತ್ತೊಬ್ಬ ಗಂಭೀರ ಸ್ವರೂಪವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಶ್ರೀನಿವಾಸ್‌ (30) ಹತ್ಯೆಗೀಡಾದವನು. ಘಟನೆಯಲ್ಲಿ ತೀವ್ರ ಹಲ್ಲೆಗೊಳಗಾಗಿರುವ ಯಶವಂತ್‌ ಅಲಿಯಾಸ್‌ ಸುರೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಕೃತ್ಯ ಎಸಗಿ ಪರಾರಿಯಾಗಿರುವ ಮೃತನ ಸ್ನೇಹಿತ ನಟೇಶ್‌ ಅಲಿಯಾಸ್‌ ಅಪ್ಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡಿಗರ ಏರ್‌ಲಿಫ್ಟ್‌: 11ಕ್ಕೆ ಬೆಂಗ್ಳೂರು, 12ಕ್ಕೆ ಮಂಗ್ಳೂರಿಗೆ ವಿಮಾನ

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಹಿಂಭಾಗದ ಗೇಟ್‌ ಸಮೀಪ ಕುಡಿದ ಅಮಲಿನಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾರ್ಮಿಕರ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ನಟೇಶ್‌, ಶ್ರೀನಿವಾಸ್‌ಗೆ ಕಲ್ಲಿನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ದಿನಗಳಿಂದ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದ ಗುತ್ತಿಗೆದಾರ ನಾಗರಾಜ್‌ ಬಳಿ ಈ ಮೂವರು ಕೆಲಸ ಮಾಡುತ್ತಿದ್ದರು. ಅದೇ ಪ್ರದೇಶದಲ್ಲೇ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದರು. ಬುಧವಾರ ಮಧ್ಯಾಹ್ನ ಕಂಠಮಟ್ಟಮದ್ಯ ಸೇವಿಸಿದ್ದ ಕೆಲಸಗಾರರ ನಡುವೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ್ದಾರೆ. ಈ ಹಂತದಲ್ಲಿ ರೊಚ್ಚಿಗೆದ್ದ ನಟೇಶ್‌, ಶ್ರೀನಿವಾಸ್‌ಗೆ ತಲೆಯಿಂದ ಡಿಚ್ಚಿ ಹೊಡೆದಿದ್ದಾನೆ. ಆತನ ರಕ್ಷಣೆಗೆ ಧಾವಿಸಿದ ಸುರೇಶ್‌ಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಆಗ ತಪ್ಪಿಸಿಕೊಳ್ಳಲು ಯತ್ನಿಸಿದ ಶ್ರೀನಿವಾಸ್‌ನನ್ನು ಬೆನ್ನತ್ತಿ ಹೋಗಿ ನಟೇಶ್‌ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಟಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಟಲ್‌ನಲ್ಲಿ ಇರಿದು ಕೊಲೆ

ಮದ್ಯದ ಮತ್ತಿನಲ್ಲಿ ತಮ್ಮ ಸ್ನೇಹಿತನನ್ನು ಕೊಂದ ನಂತರ ಆಲ್‌ಲೈನ್‌ ಡಿಲವರಿ ಬಾಯ್‌ ಸೇರಿದಂತೆ ಮೂವರು ತಪ್ಪಿಸಿಕೊಂಡಿರುವ ಘಟನೆ ಆರ್‌.ಟಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?

ಮಠದಹಳ್ಳಿ ನಿವಾಸಿ ಕಿಶೋರ್‌ (28) ಮೃತ ದುರ್ದೈವಿ. ಬುಧವಾರ ರಾತ್ರಿ ಮೃತನ ಸ್ನೇಹಿತ ರಾಜೇಶ್‌ ಮನೆಯಲ್ಲಿ ಕಿಶೋರ್‌ ಮದ್ಯ ಸೇವಿಸುವಾಗ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿ ಕಿಶೋರ್‌ನನ್ನು ಬಾಟಲ್‌ನಿಂದ ಇರಿದು ಕೊಲ್ಲಲಾಗಿದೆ. ಮೃತ ಕಿಶೋರ್‌ ಮಠದ ಹಳ್ಳಿಯಲ್ಲಿ ನಾಲ್ಕೈದು ಮನೆಗಳ ಮಾಲಿಕನಾಗಿದ್ದ. ಬಾಡಿಗೆ ಹಣದಲ್ಲಿ ಬಿಂದಾಸ್‌ ಜೀವನ ಸಾಗಿಸುತ್ತಿದ್ದ. ವಿಪರೀತ ಮದ್ಯ ವ್ಯಸನಿಯಾಗಿದ್ದ ಕಿಶೋರ್‌, ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈ ನಡವಳಿಕೆಯಿಂದ ಬೇಸತ್ತು ತಂದೆ ಸಾವಿನ ಬಳಿಕ ಆತನ ತಾಯಿ ಮತ್ತು ಸೋದರಿ ದೂರವಾಗಿದ್ದರು ಎಂದು ಡಿಸಿಪಿ ಶಶಿ ಕುಮಾರ್‌ ತಿಳಿಸಿದ್ದಾರೆ.

ತನಿಖೆ ಕೈಗೆತ್ತಿಕೊಂಡ ಪೊಲೀಸರು, ರಾಜೇಶ್‌ ಜೊತೆಯಲ್ಲಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆರ್‌.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಡೆಗೆ ತಲೆ ಗುದ್ದಿಸಿ ಹತ್ಯೆ

ಮನೆಯ ಗೋಡೆಗೆ ತಲೆಗೆ ಗುದ್ದಿಸಿ ಸ್ನೇಹಿತನನ್ನು ಕಾರ್ಮಿಕನೊಬ್ಬ ಕೊಂದಿರುವ ಘಟನೆ ರಾಮಮೂರ್ತಿ ನಗರದ ಬೋವಿ ಕಾಲೋನಿಯಲ್ಲಿ ನಡೆದಿದೆ. ರಾಮ್‌ ಪ್ರಸಾದ್‌ ಅಲಿಯಾಸ್‌ ರಾಜ (40) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತನ ಸ್ನೇಹಿತ ನೇತಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ ನೇತಾ ಮನೆಯಲ್ಲಿ ಪಾರ್ಟಿ ನಡೆದಿತ್ತು. ಈ ವೇಳೆ ಕಂಠಮಟ ಮದ್ಯ ಸೇವಿಸಿದ ಬಳಿಕ ಸ್ನೇಹಿತರ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios