ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರ ನೇಮಕಾತಿಗೆ ಕಳೆದ ಮೇನಲ್ಲಿ ನಡೆಸಲಾಗಿದ್ದ ಸಿಇಟಿ ಫಲಿತಾಂಶವನ್ನು ಆಗಸ್ಟ್‌ ಅಂತ್ಯದೊಳಗೆ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. 

ಬೆಂಗಳೂರು (ಆ.9): ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರ ನೇಮಕಾತಿಗೆ ಕಳೆದ ಮೇನಲ್ಲಿ ನಡೆಸಲಾಗಿದ್ದ ಸಿಇಟಿ ಫಲಿತಾಂಶವನ್ನು ಆಗಸ್ಟ್‌ ಅಂತ್ಯದೊಳಗೆ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿರುವ ಅವರು, ನೇಮಕ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ ಅಂತ್ಯದೊಳಗೆ ನೀಡುವ ಗುರಿ ಇದೆ. ಅಕ್ಟೋಬರ್‌ ಅಂತ್ಯದೊಳಗೆ ನೇಮಕ ಪ್ರಕ್ರಿಯೆಯ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬರುವ ನವೆಂಬರ್‌ 6ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುವುದಾಗಿ ಇದೇ ವೇಳೆ ಸಚಿವ ಬಿ.ಸಿ. ನಾಗೇಶ್‌ ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ ಎರಡು ಬಾರಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಬೇಕಾಗುತ್ತದೆ. ಆದರೆ, ಈ ವರ್ಷ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಬರುವ ನವೆಂಬರ್‌ 6ರಂದು ಒಂದೇ ಟಿಇಟಿ ನಡೆಸಲು ನಿರ್ಧರಿಸಲಾಗಿದೆ. ಟಿಇಟಿ ಉತ್ತಿರ್ಣರಾದವರು ಮಾತ್ರ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಮಕ್ಕಳಿಗೆ ಸ್ಪೋಕನ್‌ ಇಂಗ್ಲಿಷ್‌ ತರಗತಿಗಳನ್ನು ಆರಂಭಿಸುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಮಾದರಿ ಶಾಲೆಗಳಲ್ಲಿ ಹಾಗೂ ಹೊಸ ನೇಮಕಾತಿಯಿಂದ ಲಭ್ಯವಾಗುವ ಇಂಗ್ಲೀಷ್‌ ಶಿಕ್ಷಕರ ಹುದ್ದೆಗಳ ಸಂಖ್ಯೆ ಆಧಾರದ ಮೇಲೆ ಹಂತ ಹಂತವಾಗಿ ಸ್ಪೋಕನ್‌ ಇಂಗ್ಲೀಷ್‌ ತರಗತಿ ಆರಂಭಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಪ್ರಾಧ್ಯಾಪಕ ನೇಮಕ ಅಕ್ರಮ, 40 ಅಭ್ಯರ್ಥಿಗಳಿಗೆ ‘ಡ್ರಿಲ್‌’: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಫಲಿತಾಂಶ ಬೆನ್ನಲ್ಲೇ ಪರೀಕ್ಷಾ ಅಕ್ರಮದ ತನಿಖೆ ಮತ್ತೆ ಆರಂಭಿಸಿರುವ ಸಿಸಿಬಿ, ಈಗ ಆಯ್ಕೆಯಾಗಿದ್ದ 40ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪರೀಕ್ಷೆ ಅಕ್ರಮದಲ್ಲಿ ಇಬ್ಬರು ಅಭ್ಯರ್ಥಿಗಳ ಮೇಲೆ ಅನುಮಾನದ ಮೇರೆಗೆ ದೂರು ಸಲ್ಲಿಕೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಇನ್ನು ಕೆಲವರ ಮೇಲೆ ಶಂಕೆ ವ್ಯಕ್ತವಾಯಿತು.

ಯುಜಿಸಿ ನೆಟ್‌ ಫೇಸ್‌ 2 ಪರೀಕ್ಷೆ ಮುಂದೂಡಿಕೆ: ಪರಿಷ್ಕೃತ ಪರೀಕ್ಷಾ ದಿನಾಂಕ ಪ್ರಕಟ

ಈ ಹಿನ್ನೆಲೆಯಲ್ಲಿ ಆಯ್ಕೆ ಪಟ್ಟಿಯಲ್ಲಿದ್ದ ಕೆಲವರನ್ನು ಒಬ್ಬೊಬ್ಬರಾಗಿ ಕರೆದು ವಿಚಾರಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಇದುವರೆಗೆ 40ಕ್ಕೂ ಹೆಚ್ಚಿನ ಅಭ್ಯರ್ಥಿಗಳ ವಿಚಾರಣೆ ನಡೆದಿದೆ. ಆದರೆ ಅಕ್ರಮದ ಬಗ್ಗೆ ಯಾರ ವಿರುದ್ಧವೂ ಖಚಿತ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಸಿಸಿಬಿ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಆದಾಗ್ಯೂ ಪರೀಕ್ಷೆ ಅಕ್ರಮ ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ.

ಸಿಇಟಿ ಕೌನ್ಸೆಲಿಂಗ್‌ ಆ.18ವರೆಗೆ ಇಲ್ಲ: ಹೈಕೋರ್ಟ್‌ನಲ್ಲಿ ದಾವೆ

ಮಲ್ಲೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧರಿಸಿ ಬಂಧಿತರಾಗಿದ್ದ ಪ್ರೊ.ನಾಗರಾಜ್‌ ಹಾಗೂ ಸೌಮ್ಯ ವಿರುದ್ಧ ಒಂದೂವರೆ ತಿಂಗಳ ಹಿಂದೆಯೇ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಲಾಗಿದೆ. ಈಗ ಶಂಕಿತ ಅಭ್ಯರ್ಥಿಗಳ ಮೇಲೆ ತನಿಖೆ ಮುಂದುವರೆದಿದ್ದು, ವಿಚಾರಣೆ ವೇಳೆ ಪುರಾವೆ ಲಭ್ಯವಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಭ್ಯರ್ಥಿಗಳ ಮಾತ್ರವಲ್ಲದೆ ಕೆಲ ನಿವೃತ್ತ ಪ್ರಾಧ್ಯಾಪಕರನ್ನು ಸಹ ವಿಚಾರಣೆ ನಡೆಸಲಾಗುತ್ತದೆ ಎಂದು ಡಿಸಿಪಿ ಹೇಳಿದ್ದಾರೆ.