Asianet Suvarna News Asianet Suvarna News

ಸಿಇಟಿ ಕೌನ್ಸೆಲಿಂಗ್‌ ಆ.18ವರೆಗೆ ಇಲ್ಲ: ಹೈಕೋರ್ಟ್‌ನಲ್ಲಿ ದಾವೆ

2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸಿಇಟಿಯಲ್ಲಿ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮ ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯವರೆಗೆ (ಆ.18ರವರೆಗೆ) 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ‘ನೈಜ ಕೌನ್ಸೆಲಿಂಗ್‌’ ಪ್ರಕ್ರಿಯೆ ಆರಂಭಿಸುವುದಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. 

puc students plea state tells high court it will not commence cet counseling gvd
Author
Bangalore, First Published Aug 9, 2022, 5:00 AM IST

ಬೆಂಗಳೂರು (ಆ.09): 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸಿಇಟಿಯಲ್ಲಿ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮ ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯವರೆಗೆ (ಆ.18ರವರೆಗೆ) 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ‘ನೈಜ ಕೌನ್ಸೆಲಿಂಗ್‌’ ಪ್ರಕ್ರಿಯೆ ಆರಂಭಿಸುವುದಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಕೆಇಎ ಕ್ರಮ ಪ್ರಶ್ನಿಸಿ ಚಿಕ್ಕಮಗಳೂರಿನ ಆರ್‌.ಈಶ್ವರ್‌ ಸೇರಿದಂತೆ ಹಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಇಎ ಪರ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಹಾಜರಾಗಿ, 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ‘ನೈಜ ಕೌನ್ಸೆಲಿಂಗ್‌’ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಸದ್ಯ ದಾಖಲೆ ಪರಿಶೀಲನೆ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಈ ಅರ್ಜಿ ಕುರಿತ ಮುಂದಿನ ವಿಚಾರಣೆಯವರೆಗೆ ಕೆಇಎ ನೈಜ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಕೋವಿಡ್ ಪಾಸ್: ಕೆಇಎ ತೀರ್ಮಾನಕ್ಕೆ ಸರ್ಕಾರ ಬದ್ಧ, ಅಶ್ವತ್ಥನಾರಾಯಣ ಸ್ಪಷ್ಟ

ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಕೆಇಎ ಯಾವುದೇ ತೆರನಾದ ದಾಖಲೆಗಳನ್ನು ಪರಿಶೀಲಿಸುವುದು ಅರ್ಜಿದಾರ ವಿದ್ಯಾರ್ಥಿಗಳ ಹಕ್ಕು ಮತ್ತು ವಾದಕ್ಕೆ ತೊಂದರೆ ಉಂಟು ಮಾಡುವಂತಿರಬಾರದು. ಇದು ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ. ಹಾಗೆಯೇ, ಮುಂದಿನ ವಿಚಾರಣೆಯೊಳಗೆ ಅರ್ಜಿಗೆ ಆಕ್ಷೇಪಣೆ ಇದ್ದರೆ ಕೆಇಎ ಸಲ್ಲಿಸಬಹುದು ಎಂದು ಸೂಚಿಸಿ ವಿಚಾರಣೆಯನ್ನು ಆ.18ರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್‌. ರವಿಶಂಕರ್‌ ವಾದ ಮಂಡಿಸಿ, 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ 2021-22ನೇ ಶೈಕ್ಷಣಿಕ ವರ್ಷದ ಪಿಯು ಅಂಕ ಅನ್ವಯಿಸುವುದಿಲ್ಲ ಎಂದು ಕೆಇಎ ಹೇಳಿದೆ. ಈ ಕುರಿತು ಸಂಬಂಧಪಟ್ಟಕಾಯ್ದೆಗೆ ತಿದ್ದುಪಡಿ ತರದೇ ಆದೇಶ ಮಾಡಿ, ಜಾರಿಗೊಳಿಸಲು ಮುಂದಾಗಿದೆ. ಪರೀಕ್ಷೆ ಮುಗಿದಿದ್ದು, ಫಲಿತಾಂಶ ಪ್ರಕಟಿಸಿರುವಾಗ ಕೆಇಎ ನಿಯಮ ಬದಲಿಸಲಾಗದು. ಅದರ ಬದಲಾಗಿ 2020-21, 2021-22ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕಗಳನ್ನು ಆಧರಿಸಿ ರಾರ‍ಯಂಕ್‌ ಪ್ರಕಟಿಸಬೇಕು. ಇದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಸಿಇಟಿಗೆ ಪಿಯು ಅಂಕ ಏಕೆ ಪರಿಗಣಿಸಿಲ್ಲ?: 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮ ಪ್ರಶ್ನಿಸಿ ಕೆಲವು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಚ್‌ಗೆ ಮೆಟ್ಟಿಲೇರಿದ್ದಾರೆ. ಚಿಕ್ಕಮಗಳೂರಿನ ಆರ್‌.ಈಶ್ವರ್‌ ಸೇರಿದಂತೆ ಎಂಟು ಮಂದಿ ವಿದ್ಯಾರ್ಥಿಗಳು ಹೈಕೋರ್ಚ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಗುರುವಾರ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. 

Bengaluru: ಕೆಇಎ ಎದುರು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ

ಆದರೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದು ಸೋಮವಾರ ವಿಚಾರಣೆಗೆ ಬರಲಿದೆ. ಆದ್ದರಿಂದ ಎರಡು ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ ನ್ಯಾಯಪೀಠ, ಈ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಅರ್ಜಿದಾರರು 2020-21ನೇ ಸಾಲಿನಲ್ಲಿ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ, ಇವರು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 2022ರ ಜುಲೈನಲ್ಲಿ ನಡೆಸಿದ ಸಿಇಟಿ ಪರೀಕ್ಷೆಯ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಸಿಇಟಿ ಪರೀಕ್ಷೆ ಫಲಿತಾಂಶವನ್ನು ಜು.30ರಂದು ಪ್ರಕಟಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Follow Us:
Download App:
  • android
  • ios