Asianet Suvarna News Asianet Suvarna News

ರಾಜ್ಯದಲ್ಲಿ ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ರಾಜ್ಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಅಡಚಣೆಯಾಗದಂತೆ ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Action for recruitment of additional guest teachers Education Minister Madhu Bangarappa sat
Author
First Published Jul 15, 2023, 11:27 PM IST

ಶಿವಮೊಗ್ಗ (ಜು.15): ಪ್ರಸ್ತುತ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಅಡಚಣೆಯಾಗದಂತೆ  ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ಜಿಲ್ಲೆಯ ಸಾಗರ ತಾಲೂಕು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಶಿಕ್ಷಣ ತಜ್ಣರ ಸಲಹೆ ಪಡೆದು ಪಠ್ಯಪುಸ್ತಕಗಳ ಪರಿಷ್ಕರಣೆಗೆ ಕ್ರಮವಹಿಸಲಾಗುವುದು. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಗತ್ಯವಾಗಿರುವ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮೇಲುಸ್ತುವಾರಿ ನಡೆಸುವ ಬಿ.ಆರ್.ಪಿ. ಬಿ.ಆರ್.ಸಿ. ಮತ್ತು ಸಿ.ಆರ್.ಪಿ.ಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಜವಾಬ್ದಾರಿಯುವ ಇಲಾಖಾ ಸಿಬ್ಬಂಧಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ರಾಜ್ಯಾದ್ಯಂತ 27 ಸಾವಿರ ಅತಿಥಿ ಶಿಕ್ಷಕರ ನೇಮಕ: ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ..

ಶಿಕ್ಷಕರ ಕೊರತೆ ಇದ್ದರೆ ವರದಿ ಕೊಡಿ:  ಸಾಗರ ತಾಲೂಕಿನ ಕೆಲವು ಸರ್ಕಾರಿ ಶಾಲೆಗಳ ಆವರಣದಲ್ಲಿ ವಿದ್ಯುತ್ ತಂತಿ  ಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಶಾಲಾ ಕಟ್ಟಡಗಳ ಮೇಲೆ ಚಾಚಿರುವ ಹಾಗೂ ಶಿಥಿಲಾವಸ್ಥೆಯ ಮರಗಳ ರಂಬೆಗಳನ್ನು ಕಟಾವು ಮಾಡಿ ಮುಂದಿನ 8-10ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊರತೆ ಇರುವ ಶಿಕ್ಷಕರ ನೇಮಕ, ಶಿಥಿಲಾವಸ್ತೆಯ ಶಾಲಾ ಕಟ್ಟಡಗಳ ತೆರವು ಕಾರ್ಯಾಚರಣೆ, ದುರಸ್ತಿಗೆ ಕ್ರಮ ಕೈಗೊಳ್ಳಲು ಈಗಾಗಲೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕಿನ ಮುಳುಕೆರೆ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನೆರವು ಒದಗಿಸಲಾಗುವುದು ಎಂದರು.

ಅರಣ್ಯಾಧಿಕಾರಿಗಳು ರೈತರೊಂದಿಗೆ ಸಾವಧಾನದಿಂದ ವರ್ತಿಸಿ: ಅರಣ್ಯ ಇಲಾಖೆಯ ಸಿಬ್ಬಂಧಿಗಳು ಅರಣ್ಯ ಭೂಮಿಯಲ್ಲಿ ರೈತರು ಬೆಳೆದ ಬೆಳೆಯನ್ನು ನಾಶಪಡಿಸಿ ಜನವಿರೋಧಿ ನೀತಿಯನ್ನು ಅನುಸರಿಸದೆ ಸಮಾಧಾನವಾಗಿ ವ್ಯವಹರಿಸಬೇಕು. ಶರಾವತಿ ನದಿ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕು ಸಮಸ್ಯೆ ಹಾಗೂ ಬಗರ್ ಹುಕುಂ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಅರಣ್ಯ‌ಭೂಮಿ ಅತಿಕ್ರಮ ಪ್ರವೇಶ, ಕಾರ್ಯನಿರತ ಅಧಿಕಾರಿ ಸಿಬ್ಬಂಧಿಗಳ ಮೇಲೆ ದುಂಡಾವರ್ತಿ ಮಾಡುವ ಜನರ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಂಬಂಧಿತ ರಾಜ್ಯ ಮಟ್ಟದ ಇಲಾಖಾ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಶೀಘ್ರದಲ್ಲಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ನೀಟ್‌ ಪಾಸಾದವರು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಜು.21 ಕೊನೆ ದಿನ: ಇಂದೇ ಅರ್ಜಿ ಸಲ್ಲಿಸಿ

ಆರೋಗ್ಯಾಧಿಕಾರಿಗಳು ಮಾನವೀಯವಾಗಿ ಚಿಕಿತ್ಸೆ ನೀಡಿ: ಜನೌಷಧಿ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಜನಸಾಮಾನ್ಯರಿಗೆ ದೊರೆಯುತ್ತಿಲ್ಲ. ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಕೂಡಲೇ ವರದಿ ನೀಡಬೇಕು. ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ವಿಷಜಂತುಗಳು, ನಾಯಿ, ಹಾವು, ಚೇಳು ಕಡಿತಕ್ಕೆ ಔಷಧಗಳಿರುವಂತೆ ಕ್ರಮವಹಿಸಿ ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಮಳೆಹಾನಿ, ಮನೆಹಾನಿ, ಜೀವಹಾನಿ ಮತ್ತಿತರ ಸಂತ್ರಸ್ಥರಿಗೆ ಅಧಿಕಾರಿಗಳು ವಾಸ್ತವ ವರದಿ ಪಡೆದು ಮಾನವೀಯ ನೆಲೆಯಲ್ಲಿ ಹಾಗೂ ಪಕ್ಷಾತೀತವಾಗಿ ಪರಿಹಾರ ಒದಗಿಸುವಂತೆ ಸೂಚಿಸಿದರು.

ಸಿಇಟಿ-2023 ದಾಖಲಾತಿ ಪರಿಶೀಲನೆಗೆ ಕೊನೇ ಅವಕಾಶ: ಜು.17ರಂದು ಅಂತಿಮ

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಪೊಲೀಸ್ ಅಧಿಕಾರಿಗಳು ತಾಲೂಕಿನ ಸಮಾಜಘಾತುಕರನ್ನು ಗಡಿಪಾರು ಮಾಡಿ ಶಾಂತಿ ಸುವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಓಸಿ. ಮಟ್ಕಾ ಮತ್ತು ಗಾಂಜಾ ಪ್ರಕರಣಗಳು ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ರೋಹನ್ ಜಗದೀಶ್, ಅತೀಕ್, ಜಯಲಕ್ಷ್ಮಮ್ಮ, ತಹಶೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios