2026ರ ಕಾಮನ್‌ವೆಲ್ತ್ ಗೇಮ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಶದ್ ನದೀಂ ನಿರಾಸೆ ಅನುಭವಿಸಿದರು. ಮೊದಲ ಮೂರು ಎಸೆತಗಳ ನಂತರ ಒಂಬತ್ತನೇ ಸ್ಥಾನ ಪಡೆದಿದ್ದರಿಂದ, ನಿಯಮಗಳ ಪ್ರಕಾರ ಸ್ಪರ್ಧೆಯಿಂದ ಹೊರಬಿದ್ದರು. ಈ ಸ್ಪರ್ಧೆಯಲ್ಲಿ ಶ್ರೀಲಂಕಾದ ರುಮೇಶ್ ತರಂಗಾ ಚಿನ್ನ ಗೆದ್ದರೆ, ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಪಡೆದರು.

ಗ್ಲಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಜಾವೆಲಿನ್ ಥ್ರೋ ಪಟು ಅರ್ಶದ್ ನದೀಂಗೆ ನಿರಾಸೆ ಎದುರಾಗಿದೆ. ಸಾಕಷ್ಟು ನಿರೀಕ್ಷೆಯಿಟ್ಟುಕೊಂಡು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಅರ್ಶದ್ ನದೀಂ, ಸ್ಪರ್ಧೆಯ ಮಧ್ಯದಲ್ಲಿಯೇ ಹೊರಗುಳಿದರು. ಕೊನೆಯ ಮೂರು ಜಾವೆಲಿನ್ ಥ್ರೋ ಎಸೆಯುವ ಮುನ್ನವೇ ಅರ್ಶದ್ ನದೀಂ ದೂರ ಉಳಿದರು.

ಕಾಮನ್‌ವೆಲ್ತ್‌ ಗೇಮ್ಸ್‌ನ ಅಂತಿಮ ಸುತ್ತಿಗೆ ಎಂಟ್ರಿಕೊಟ್ಟಿದ್ದ ಅರ್ಶದ್ ನದೀಂ, ಪದಕ ಸುತ್ತಿನ ಸ್ಪರ್ಧೆಯಲ್ಲಿನ ಮೊದಲ ಪ್ರಯತ್ನವನ್ನು ಫೌಲ್ ಮಾಡಿದರು. ಇದಾದ ಬಳಿಕ ಕ್ರಮವಾಗಿ ಎರಡು ಹಾಗೂ ಮೂರನೇ ಪ್ರಯತ್ನದಲ್ಲಿ 77.41 ಮೀಟರ್ ಹಾಗೂ 75.39 ಮೀಟರ್ ದೂರ ಜಾವೆಲಿನ್ ಎಸೆದರು. ಈ ಮೂಲಕ 12 ಅಥ್ಲೀಟ್ಸ್‌ಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಅರ್ಶದ್ ನದೀಂ ಒಂಬತ್ತನೇ ಸ್ಥಾನ ಪಡೆದರು. ಇನ್ನು ಹಾಲಿ ವಿಶ್ವ ಚಾಂಪಿಯನ್ ಕೇಶೋರ್ನ್ ವಾಲ್ಕಾಟ್ ಎಂಟನೇ ಸ್ಥಾನ ಪಡೆಯುವ ಮೂಲಕ ಟಾಪ್-8 ಪಟ್ಟಿಯಲ್ಲಿ ಸ್ಥಾನ ಪಡೆದರು.

ಅರ್ಶದ್ ನದೀಂಗೆ ಕೊನೆಯ ಮೂರು ಎಸೆತ ಎಸೆಯಲು ಯಾಕೆ ಅವಕಾಶ ಸಿಗಲಿಲ್ಲ?

ಕಾಮನ್‌ವೆಲ್ತ್ ಗೇಮ್ಸ್ ಆಯೋಜಕರ ನಿಯಮಾವಳಿಗಳ ಪ್ರಕಾರ, ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಮೊದಲ ಮೂರು ಎಸೆತಗಳನ್ನು ಎಸೆದ ಬಳಿಕ ಕೊನೆಯ 4 ಸ್ಥಾನ ಪಡೆಯುವ ಅಥ್ಲೀಟ್‌ಗಳು ಸ್ಪರ್ಧೆಯಿಂದ ಹೊರಬೀಳುತ್ತಾರೆ ಎಂದು ಮೊದಲೇ ತಿಳಿಸಲಾಗಿತ್ತು. ಮೊದಲ ಮೂರು ಎಸೆತಗಳ ಬಳಿಕ ಅಗ್ರ-8ರಲ್ಲಿ ಸ್ಥಾನ ಪಡೆಯುವ ಅಥ್ಲೀಟ್‌ಗಳು ಮಾತ್ರ ಮುಂದಿನ ಮೂರು ಎಸೆತ ಎಸೆಯಲು ಅವಕಾಶ ನೀಡಲಾಗಿತ್ತು. ಇದೇ ಕಾರಣಕ್ಕಾಗಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಒಂಬತ್ತನೇ ಸ್ಥಾನ ಪಡೆದ ಅರ್ಶದ್ ನದೀಂ, ಇನ್ನುಳಿದ ಮೂರು ಎಸೆತಗಳನ್ನು ಎಸೆಯುವ ಅವಕಾಶದಿಂದ ಹೊರಬೀಳಬೇಕಾಯಿತು.

ಲಂಕಾದ ರುಮೇಶ್ ತರಂಗಾ ಪಥಿರಾಗೆ ಚಿನ್ನ, ನೀರಜ್‌ಗೆ ಒಲಿದ ಬೆಳ್ಳಿ:

ಶ್ರೀಲಂಕಾ ಮೂಲದ 23 ವರ್ಷದ ರುಮೇಶ್ ತರಂಗಾ ಪಥಿರಾಗೆ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬರೋಬ್ಬರಿ 89.75 ಮೀಟರ್ ದೂರ ಜಾವೆಲಿನ್ ಎಸೆಯುವ ಕಾಮನ್‌ವೆಲ್ತ್ ಗೇಮ್ಸ್‌ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಮೊದಲ ಸಲ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಇನ್ನು ಭಾರತದ ನೀರಜ್ ಚೋಪ್ರಾ, 85.83 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರೆ, ಭಾರತದವರೇ ಆದ ಯಶ್ವೀರ್ ಸಿಂಗ್ ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ(85.41 ಮೀಟರ್) ದೂರ ಜಾವೆಲಿನ್ ಎಸೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು.